ಮಹಿಳೆಯರಿಗೆ ಅಕ್ಷರದ ಅವಕಾಶ ದೊರೆಯದ ದಿನಗಳವು. ಮನೆಯೊಳಗಡೆಯೇ ಇದ್ದು ಹೊಸಿಲು ದಾಟಲು ಸಾಧ್ಯವಾಗದಿದ್ದ ಕಾಲದಲ್ಲಿ ಯುವತಿಯೊಬ್ಬಳು ಅಕ್ಷರ ಕಲಿತು, ವಿದೇಶ ಪಯಣ ಮಾಡಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾಳೆ. ದೂರದ ಅಮೆರಿಕೆಗೆ ಹೋಗಿ ಶಿಕ್ಷಣ ಪಡೆದು ವೈದ್ಯೆಯಾದ ಆನಂದಿಬಾಯಿ ಜೋಶಿಯ ಜೀವನ ಚಿತ್ರಣವನ್ನು ಚಂದ್ರಶೇಖರ ಮಂಡೆಕೋಲು ಕನ್ನಡದಲ್ಲಿ ನೀಡಿದ್ದಾರೆ. ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿ ಮಾಡಿದ ಸಾಧನೆ ಬೆರಗುಗೊಳಿಸುವಂತಹದ್ದು. ವೈದ್ಯೆಯಾಗುವ ಕನಸು ಈಡೇರಿತೆನ್ನುವಾಗಲೇ ಕಾಡಿದ ಕ್ಷಯ ಜೀವನವನ್ನು ೨೨ಕ್ಕೇ ಕೊನೆಗೊಳಿಸುತ್ತದೆ.
ಪುಣೆಯಲ್ಲಿ ಜನಿಸಿದ (1865) ಆನಂದಿಬಾಯಿಗೆ ತಾಯಿ ನೀಡಿದ ಹಿಂಸೆ ಅಸಾಧಾರಣವಾದವು ಸಿಟ್ಟು ಬಂದರೆ ಒಲೆಯ ಸೌದೆ ತೆಗೆದು ಎಸೆಯುತ್ತಿದ್ದಳು. ತಪ್ಪಿಸಿಕೊಂಡರೆ ಕಲ್ಲು ಎಸೆಯುತ್ತಿದ್ದಳು. ಬಆನಂದಿಬಾಯಿಗೆ ಮದುವೆಯಾದಾಗ ಕೇವಲ 9 ವರ್ಷ. ಅವಳ ಕೈ ಹಿಡಿದ ಗೋಪಾಲ ಜೋಶಿ ಅವಳಿಗಿಂತ 20 ವರ್ಷ ದೊಡ್ಡವ. ಅವರಿಬ್ಬರಿಗೆ ಜನಿಸಿದ ಮಗು ಸೂಕ್ತ ಚಿಕಿತ್ಸೆ ಸಿಗದೆ 10ನೇ ದಿನಕ್ಕೆ ಕೊನೆಯುಸಿರೆಳೆಯಿತು. ಅದೇ ಆನಂದಿಬಾಯಿಗೆ ತಾನು ವೈದ್ಯೆ ಆಗಬೇಕು ಎನ್ನುವ ಆಸೆ ಹುಟ್ಟಲು ಕಾರಣವಾಯಿತು. ಪತಿ ಗೋಪಾಲ ಪ್ರಗತಿಪರ ಧೋರಣೆಯವರು. ತನ್ನ ಪತ್ನಿಗೆ ಮರಾಠಿ, ಇಂಗ್ಲಿಷ್, ಸಂಸ್ಕೃತ ಕಲಿಸುವುದರ ಜೊತೆಗೆ ತನಗೆ ದೊರೆತ ಪುಸ್ತಕ ನೀಡಿ ಓದಲು ಹೇಳುತ್ತಿದ್ದ. ಅದಕ್ಕೆ ನಿರ್ಲಕ್ಷ್ಯ ತೋರಿದರೆ ಏಟು ತಿನ್ನಬೇಕಾಗುತ್ತಿತ್ತು. ಗೋಪಾಲ ಜೋಶಿಯ ಸಿಟ್ಟು, ಶ್ರಮ ಮತ್ತು ಪ್ರಯತ್ನದಿಂದಾಗಿ ಆನಂದಿಬಾಯಿಗೆ ಕಲಿಯುವುದು ಅನಿವಾರ್ಯ ಆಯಿತು. ಅದೇ ಮುಂದುವರೆದು 17ನೇ ವಯಸ್ಸಿಗೆ ಅಮೆರಿಕಕ್ಕೆ ಒಬ್ಬಳೇ ಹೋಗಿ ವೈದ್ಯಕೀಯ ಶಿಕ್ಷಣ ಪಡೆದು ಪದವಿ ಪೂರೈಸುವಲ್ಲಿ ಕೊನೆಗೊಂಡಿತು. ಅಪರೂಪದ ದಿಟ್ಟೆ ಆನಂದಿಬಾಯಿಯ ಕತೆಯ ಹೇಳುವುದರ ಜೊತೆಗೆ ಅವಳ ಸಮಕಾಲೀನ ಬದುಕಿನ ಸಂಸ್ಕೃತಿ ಮತ್ತು ಮಹಿಳೆಯರ ಸಂಕಟ- ಯಾತನೆಗಳನ್ನು ಚಂದ್ರಶೇಖರ ಮಂಡೆಕೋಲು ಸೊಗಸಾಗಿ ವಿವರಿಸಿದ್ದಾರೆ. ಆನಂದಿಬಾಯಿ ಬಗ್ಗೆ ಬರೆಯುವುದಕ್ಕಾಗಿ ಅವರು ನಡೆಸಿದ ಅಧ್ಯಯನ ಮತ್ತು ಪರಿಶ್ರಮ ಪುಸ್ತಕ ಓದುವಾಗ ಅರಿವಿಗೆ ಬಾರದೇ ಇರದು. ಇದೊಂದು ಅಪರೂಪದ ಪುಸ್ತಕ.
©2024 Book Brahma Private Limited.