ಲೇಖಕ ಡಾ. ಬಿ.ಆರ್. ಕೃಷ್ಣಕುಮಾರ್ ಅವರ ಸಂಶೋಧನಾ ಪ್ರಬಂಧ ಕೃತಿ ʻಆಧುನಿಕ ಕನ್ನಡ ಸಾಹಿತ್ಯದಲ್ಲಿ ಖಂಡಕಾವ್ಯಗಳುʼ. ಪುಸ್ತಕದ ಮುನ್ನುಡಿಯಲ್ಲಿ ಪ್ರೊ. ಕೆ.ಎನ್. ಗಂಗಾನಾಯಕ್ ಅವರು, “ಖಂಡಕಾವ್ಯವು ಸಾಹಿತ್ಯದ ಪ್ರಮುಖ ಪ್ರಕಾರವಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಆಧುನಿಕ ಕನ್ನಡದಂತೆ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಾದ ತೆಲುಗು, ಮಲೆಯಾಳಂ ಮುಂತಾದವುಗಳಲ್ಲೂ ಹಲವು ಖಂಡಕಾವ್ಯಗಳು ರಚನೆಯಾದವು. ಹಾಗಾಗಿ ಕನ್ನಡೇತರ ಭಾಷೆಗಳಲ್ಲಿ ಆಧುನಿಕ ಕಾಲದ ಖಂಡಕಾವ್ಯಗಳು ಎಂಬ ಎರಡನೇಯ ಅಧ್ಯಾಯದಲ್ಲಿ ಸಂಸ್ಕೃತ, ತೆಲುಗು, ಮಲೆಯಾಳಂ ಭಾಷೆಗಳಲ್ಲಿನ ಖಂಡಕಾವ್ಯಗಳ 10 ಭಾಷೆಗಳಲ್ಲಿನ ಖಂಡಕಾವ್ಯಗಳ ಹುಟ್ಟು ಬೆಳೆವಣಿಗೆ; ಅವುಗಳ ಮೇಲಾದ ಪ್ರಭಾವ ಮುಂತಾದವುಗಳನ್ನು ಚರ್ಚಿಸಲಾಗಿದೆ. ಅನಂತರ ಸಂಸ್ಕೃತ ತೆಲುಗು, ಮಲೆಯಾಳಂ ಭಾಷೆಗಳ ತಲಾ ಒಂದೊಂದು ಖಂಡಕಾವ್ಯಗಳನ್ನು ಆಯ್ದುಕೊಂಡು ವಿಮರ್ಶಾತ್ಮಕವಾಗಿ ವಿವೇಚಿಸಲಾಗಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಖಂಡಕಾವ್ಯಗಳು ರಚನೆಗೊಂಡಿವೆ. ಅವು ವಿವಿಧ ವಸ್ತು, ರೂಪ, ಶೈಲಿ, ವೈವಿಧ್ಯತೆಗಳಿಂದ ಕೂಡಿದ್ದು, ಬಹಳ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಮಹಾಕಾವ್ಯದ ನೆರಳಿನಂತೆ ಕಾಣುವ ಖಂಡಕಾವ್ಯಗಳು ಅದರಷ್ಟು ಯಶಸ್ಸು, ಪ್ರಚಾರಗಳನ್ನು ಪಡೆಯದೆ ಇದ್ದರೂ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಗಿಟ್ಟಿಸಿಕೊಂಡಿವೆ. ಈ ನಿಟ್ಟಿನಲ್ಲಿ ಮೂರನೇ ಅಧ್ಯಾಯದಲ್ಲಿ ಆಧುನಿಕ ಖಂಡಕಾವ್ಯಗಳ ಸ್ಕೂಲ ಪರಿಚಯವನ್ನು ಮಾಡಿಕೊಡಲಾಗಿದೆ. ಆಧುನಿಕ ಪೂರ್ವಕಾಲದ ಮುದ್ದಣ ರಚಿಸಿರುವ ʻಶ್ರೀರಾಮಪಟ್ಟಾಭಿಷೇಕಂ' ಎಂಬ ಖಂಡಕಾವ್ಯದಿಂದ ಹಿಡಿದು 2014ರಲ್ಲಿ ಪ್ರಕಟವಾಗಿರುವ ಎಚ್.ಲಕ್ಷ್ಮೀನಾರಾಯಣಸ್ವಾಮಿ ಅವರ 'ಜಾಲಿ ಮರದ ಜೋಳಿಗೆಯಲ್ಲಿ' ಎಂಬ ಖಂಡಕಾವ್ಯಗಳವರೆಗೆ ಆಧುನಿಕ ಕನ್ನಡ ಖಂಡಕಾವ್ಯಗಳನ್ನು ಪರಿಚಯಾತ್ಮಕವಾಗಿ ಇಲ್ಲಿ ಚರ್ಚಿಸಲಾಗಿದೆ” ಎಂದು ಹೇಳಿದ್ದಾರೆ.
©2024 Book Brahma Private Limited.