ಹಿರಿಯ ಲೇಖಕಿ ಡಾ.ಶಕುಂತಲಾ ಸಿದ್ಧರಾಮ ದುರಗಿ ಅವರ ಸಂಶೋಧನಾ ಕೃತಿ 'ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ'.ಈ ಮಹಾಪ್ರಬಂಧಕ್ಕೆ 1982 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ. 1999ರಲ್ಲಿ ಕೃತಿ ರೂಪ ಪಡೆದಿದೆ. ಈ ಮಹಾಪ್ರಬಂಧವು 1901 ರಿಂದ 1975 ರವರೆಗಿನ ನಿರ್ದಿಷ್ಟ ಕಾಲಘಟ್ಟದ ಮಹಿಳಾ ಸಾಹಿತ್ಯ ಕುರಿತ ಸಂಶೋಧನಾಧ್ಯಯನವಾಗಿದೆ.ಈ ಸಂದರ್ಭದಲ್ಲಿ ಬರುವ ಮಹಿಳಾ ಸಾಹಿತ್ಯದ ಗಂಭೀರ ಅವಲೋಕನ, ಓದು, ಚಿಂತನೆ ಆಗಿರುವುದು ಸಂಶೋಧಕರ ಸಹನೆ ಮತ್ತು ಪರಿಶ್ರಮದ ಫಲ.
ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ, ಹೀಗೆ ಹೊಸ ಅಲೆಗಳಿಗೆ ತನ್ನನ್ನು ಒಡ್ಡಿಕೊಂಡು, ಅದರ ಪರಿಣಾಮವಾಗಿ ಹೊಸದೊಂದು ಬದಲಾದ ಆಯಾಮ ಕಾಣುತ್ತೇವೆ. ವಸಾಹತುಶಾಹಿ, ಸಮಾಜವಾದ, ಬಂಡವಾಳಶಾಹಿ ವಿರೋಧ ವಾದ, ಲೋಹಿಯಾವಾದ, ಗಾಂಧಿವಾದ, ಅಸ್ತಿತ್ವವಾದ, ಅಂಬೇಡ್ಕರ್ ವಾದ, ಇವು ಸೈದ್ಧಾಂತಿಕ ನೆಲೆಯಲ್ಲಿ ಬದುಕು ಮತ್ತು ಸಾಹಿತ್ಯದ ಮೇಲೆ ಗಾಢ ಪ್ರಭಾವ ಬೀರಿವೆ. ಇಂತಹ ಹಲವಾರು ಮುಖಗಳ ಹಿನ್ನೆಲೆಯಲ್ಲಿ ಸೃಷ್ಟಿಯಾದ ಮಹಿಳಾ ಸಾಹಿತ್ಯವು ಹೇಗೆ ಹೊರ ಹೊಮ್ಮಿದೆ? ಎನ್ನುವುದರ ಮೌಲ್ಯ ಮಾಪನ, ವಿಶ್ಲೇಷಣೆ, ವಿಮರ್ಶೆ ನಡೆದಿರುವುದು ಈ ಕೃತಿಯ ಮೂಲ ಆಶಯ. ಮಹಿಳೆ ತನ್ನ ಸಾಹಿತ್ಯದಲ್ಲಿ ವ್ಯವಸ್ಥೆಯನ್ನು ನೋಡುವ ದೃಷ್ಟಿಕೋನ, ಸಂಪ್ರದಾಯ ನಿಷ್ಟೆ, ಮಿತಿಯೊಳಗೇ ದಾಟುವ ಪ್ರಕ್ರಿಯೆ, ಸಾಂಸ್ಕೃತಿಕ ಪ್ರತಿರೋಧ, ಸಂಘರ್ಷದ ನೆಲೆಗಳು, ಬದಲಾವಣೆಯ ತುಡಿತ, ಮುಂತಾದವುಗಳನ್ನು ತನ್ನ ಸೃಜನಶೀಲತೆಯಲ್ಲಿ ಸೆರೆಹಿಡಿದ ಸಾಹಸವನ್ನು ಈ ಅಧ್ಯಯನದ ಒಡಲಲ್ಲಿ ದಾಖಲಿಸಲಾಗಿದೆ.
ಅಧ್ಯಯನಕ್ಕೊಳಪಡಿಸಿದ ಕಾಲಮಾನದಲ್ಲಿ ಅರಳಿದ ಅನೇಕ ಮಹಿಳಾ ಸಾಹಿತ್ಯ ಕೃತಿಗಳನ್ನು ಪರಾಮರ್ಶಿಸಿದ ಶ್ರಮವಿದೆ. ಹಾಗೆಯೇ ಲೇಖಕಿಯರನ್ನು ನೇರವಾಗಿ ಸಂದರ್ಶಿಸಿ, ಬರಹದ ಆಳದ ನಿಗೂಢವನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಅದೊಂದು ಮೌಲಿಕವಾದ ವಿಶಾಲ ದೃಷ್ಟಿಯ ಫಲಿತಾಂಶ ನೀಡುವಲ್ಲಿ ಸಹಾಯಕವಾಗಿದೆ. ಡಾ.ಶಕುಂತಲಾ ದುರಗಿಯವರ ಪ್ರಾಮಾಣಿಕ ದೃಷ್ಟಿಕೋನದಿಂದಾಗಿ ನೇರ ವಿಮರ್ಶೆಯಲ್ಲಿ ನಿಷ್ಟುರ ಅಭಿಪ್ರಾಯಗಳೂ ಇವೆ. ಅಷ್ಟೇ ಆರೋಗ್ಯಕರವಾಗಿಯೂ ಇರುವುದು ಗಮನಾರ್ಹ. ಬೆಳೆಯ ಜೊತೆ ಕಳೆಯನ್ನೂ ಗುರುತಿಸಿರುವುದು ಭವಿಷ್ಯದ ಉತ್ತಮ ಸಾಹಿತ್ಯಾಭಿವೃದ್ದಿಗೆ ಕಾರಣವಾಗುತ್ತದೆ. ಇದು ಕೃತಿಯ ಹೆಚ್ಚುಗಾರಿಕೆಯೂ ಆಗಿದೆ.
©2024 Book Brahma Private Limited.