ಗಾಂಧೀಜಿಯವರ ಸಾವಿನ ನಂತರ ದೇಶ ತಂದೆಯನ್ನು ಕಳೆದುಕೊಂಡ ಮಗುವಿನಂತೆ ದಿಶಾಹೀನವಾಗಿತ್ತು. ನಮಗೆ ಇನ್ನು ಯಾರು ಗತಿ? ಯಾರು ಇನ್ನು ನಮ್ಮ ಮನೆಗೆ ಹಿರಿಯರು? ಯಾರು ನಮ್ಮ ನಾಡಿಗೆ ಮಾರ್ಗದರ್ಶಕರು? ಎಂಬ ಪ್ರಶ್ನೆ ಕಾಡತೊಡಗಿತ್ತು. ಆಗ ಉತ್ತರದಂತೆ, ಒಂದು ಸಮರ್ಪಕ ಪರ್ಯಾಯದಂತೆ ಕಂಡವರು ಭಾರತರತ್ನ ವಿನೋಬಾ ಭಾವೆಯವರು. ಗಾಂಧೀಜಿಯವರ ಮಾನಸಪುತ್ರರಾಗಿದ್ದ ವಿನೋಬಾ ನಡೆನುಡಿಯಲ್ಲಿಯೂ ಗಾಂಧೀಜಿಯವರ ಪ್ರತಿರೂಪದಂತಿದ್ದರು. ಅದಕ್ಕೆಂದೇ ಗಾಂಧೀಜಿ ವಿನೋಬಾ ನನ್ನ ಆಧ್ಯಾತ್ಮಿಕ ಉತ್ತರಾಧಿಕಾರಿ ಎಂದು ಹೇಳುತ್ತಿದ್ದರು ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿನೋಬಾರ ಮಹತ್ತರ ಪಾತ್ರ ಗುರುತಿಸಿ ಅವರನ್ನು ಪ್ರಥಮ ಸತ್ಯಾಗ್ರಹಿ ಎಂದು ಸಂಬೋಧಿಸಿದರು. ವಿನೋಬಾ ಬರಿಗಾಲಿನ ಫಕೀರರಾಗಿ ಭೂದಾನ ಚಳುವಳಿಯ ಸಂದರ್ಭದಲ್ಲಿ ದೇಶದುದ್ದಗಲಕ್ಕೂ ಸುಮಾರು 80000 ಕಿ.ಮಿ. ಪಾದಯಾತ್ರೆ ಕೈಗೊಂಡರುಹಾಗೂ ಲಕ್ಷಾವಧಿ ಎಕರೆ ಭೂಮಿಯನ್ನು ಶ್ರೀಮಂತರಿಂದ ಪಡೆದು ಬಡವರಿಗೆ ಹಂಚಿದರು. ಅತ್ಯಂತ ಕಟ್ಟುನಿಟ್ಟಿನ ಹಾಗೂ ಸನ್ಯಸ್ತ ಬದುಕು ಅವರದು. ಅವರು ತಮ್ಮ ಜೀವನದುದ್ದಕ್ಕೂ ಅನೇಕ ಅಧ್ಯಾತ್ಮಿಕ, ವೈಚಾರಿಕ, ಸಾಮಾಜಿಕ ಹಾಗೂ ಸತ್ಯಶೋಧಕ ಪ್ರಯೋಗಗಳನ್ನು ಮಾಡಿದರು ಹಾಗೂ ಸದಾಕಾಲ ಬದುಕಿನ ಅರ್ಥನ್ವೇಷಣೆ ಮಾಡಿದರು. ವಿನೋಬಾರ ಜೀವನದೃಷ್ಟಿ ಮತ್ತು ಲೋಕದೃಷ್ಟಿಯ ಕುರಿತಾದ ಹಾಗೂ ಬದುಕಿನ ಕುರಿತಾದ 108 ಪ್ರಸಂಗಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.