About the Author

ರಾಮಚಂದ್ರ ಪಾಟೀಲ ಅವರು ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಕಗಲಗೊಂಬ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಗಲಗೊಂಬದಲ್ಲಿ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಬಾಗಲಕೋಟೆಯಲ್ಲಿ, ಬಿ.ಇ.ಡಿ. ಪದವಿಯನ್ನು ಜಮಖಂಡಿಯಲ್ಲಿ, ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಡೆದರು.

ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂಬಲದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸೇರಿ, ಬಾಗಲಕೋಟೆ, ಮುಧೋಳ ಮತ್ತು ಧಾರವಾಡದ ಪ್ರತಿಷ್ಠಿತ ಸರಕಾರಿ ಟ್ರೇನಿಂಗ್ ಕಾಲೇಜು (DIET) ನಲ್ಲಿ ಸೇವೆ ಸಲ್ಲಿಸಿದರು. ಜೊತೆಗೆ ಟ್ರೇನಿಂಗ್ ಕಾಲೇಜಿನ ಮುಖವಾಣಿಯಾದ 'ಜೀವನ ಶಿಕ್ಷಣ' ಶೈಕ್ಷಣಿಕ ಮಾಸಪತ್ರಿಕೆಯ ಸಂಪಾದಕರಾಗಿ ಸುಮಾರು ಹದಿನೈದು ವರ್ಷ ಸೇವೆ ಸಲ್ಲಿಸಿದರು. ಇಂಥ ಅಮೂಲ್ಯ ಸೇವೆಗೆ ಇವರನ್ನು ಅಣಿಗೊಳಿಸಿದವರು ಅಂದಿನ ಟ್ರೇನಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದ ಶ್ರೀ ಶಿವಶಂಕರ ಹಿರೇಮಠ ಮತ್ತು ಡಿ.ಬಿ.ಯಲ್ಲರೆಡ್ಡಿಯವರು.

ನಿವೃತ್ತಿ ನಂತರ ಇವರು ಧಾರವಾಡದ ವೇಮನ ವಿದ್ಯಾವರ್ಧಕ ಸಂಘದ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸುಮಾರು ಎಂಟುವರ್ಷ ಸೇವೆ ಸಲ್ಲಿಸುವ ಮೂಲಕ ಆ ಕಾಲೇಜಿಗೆ ಭದ್ರ ಬುನಾದಿ ಹಾಕಿದರು. ಸಾಹಿತ್ಯಿಕ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದ ರಾಮಚಂದ್ರರು ಐದು ಕವನ ಸಂಕಲನಗಳನ್ನು ರೂಪಕಗಳನ್ನು ಚರಿತ್ರೆಗಳನ್ನು ಪಠ್ಯಾಧಾರಿತ ನಾಟಕಗಳನ್ನು ರಚಿಸಿದ್ದಾರೆ. ಇವರು ಧಾರವಾಡ ಆಕಾಶವಾಣಿಯ ಅನುಮೋದಿತ ಕವಿಯೂ ಆಗಿದ್ದಾರೆ.

ಇವರ ಶೈಕ್ಷಣಿಕ ಮತ್ತು ಸಾಹಿತ್ಯದ ಸೇವೆ ಪರಿಗಣಿಸಿ ಚಿಲಿಪಿಲಿ ಪ್ರಕಾಶನದವರು ಶಿಕ್ಷಣ ಸಿರಿ' ರಾಜ್ಯ ಪ್ರಶಸ್ತಿಯನ್ನೂ ಸಿಂದಗಿಯ ವಿದ್ಯಾಚೇತನ ಪ್ರಕಾಶನದವರು ರಾಜ್ಯ ಪ್ರಶಸ್ತಿಯನ್ನೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯವರು ಅಭಿನಂದನಾ ಪದಕ, ಬೆಂಗಳೂರಿನ ಬಸವ ಸಮಿತಿಯವರು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ರಾಮಚಂದ್ರ ವ್ಹಿ. ಪಾಟೀಲ