ಜಯಶ್ರೀ ಅರವಿಂದ್ ಗಾಯನ, ರಾಗ ಸಂಯೋಜನೆ, ಗೀತ ರಚನೆ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾಗಿದ್ದಾರೆ. ಮೂಲತಃ ಟಿ.ನರಸೀಪುರ ತಾಲೂಕಿನ ತಲಕಾಡಿನವಾರದ ಅವರು 1955ರ ಏಪ್ರಿಲ್ 26ರಂದು ಜನಿಸಿದರು. ತಂದೆ- ಗೋವಿಂದರಾಜು ಅಯ್ಯಂಗಾರ್, ತಾಯಿ - ರಂಗನಾಯಕಿ. ತಾಯಿ ರಂಗನಾಯಕಿ ಅವರು ಸಾಹಿತ್ಯ ಸಂಗೀತದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು. ತಾಯಿಯಿಂದ ಸಂಗೀತ, ಸಾಹಿತ್ಯ ಲೋಕದತ್ತ ಜಯಶ್ರೀ ಅವರು ಹೆಚ್ಚು ಆಕರ್ಷಿತರಾದರು.
ತಾಯಿ ಹಾಡುತ್ತಿದ್ದ ಸ್ವರಚಿತ ಗೀತೆಗಳಲ್ಲದೆ, ಸಂಪ್ರದಾಯ ಗೀತೆಗಳು, ಭಕ್ತಿ ಗೀತೆಗಳು ಜಯಶ್ರೀಯವರನ್ನು ಬಹಳಷ್ಟು ಆಕರ್ಷಿಸಿದವು. ಕೆಲವು ಹಾಡುಗಳನ್ನು ಕಲಿತು ಹಾಡುತ್ತಾ ಅದರ ಬಗ್ಗೆ ಒಲವು ಬೆಳೆಸಿಕೊಂಡ ಜಯಶ್ರೀ ಹೈಸ್ಕೂಲಿಗೆ ಬಂದ ಮೇಲೆ ಸಂಗೀತವನ್ನು ದ್ವೀತೀಯ ಭಾಷೆಯನ್ನಾಗಿ ತೆಗೆದುಕೊಂಡರು. ಇಲ್ಲಿಂದ ಶಾಸ್ತೀಯ ಸಂಗೀತ ಪಾಠವನ್ನು ಆರಂಭಿಸಿದರು. ಸುಗಮ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಇವರು ಪ್ರಸಿದ್ಧ ಸಂಯೋಜಕ ಪದ್ಮಚರಣ್ ಹಾಗೂ ಪಿ.ಕಾಳಿಂಗರಾವ್ ಬಗ್ಗೆ ಎರಡು ಪುಸ್ತಕ ಸೇರಿದಂತೆ ಸಂಗೀತ ಕ್ಷೇತ್ರದ ಬಗ್ಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.