ಕೇರಳದಲ್ಲಿ ಒಂದು ಕಾಲಕ್ಕೆ ಅಸಮಾನತೆಯೇ ನೆಲೆಗೊಂಡಿತ್ತು. ಮೇಲ್ವರ್ಗದವರು ಕೆಳವರ್ಗದ ಜನರನ್ನು ಧರ್ಮದ ಸೋಗಿನಲ್ಲಿ ಹೊಸಕಿ ಹಾಕುತ್ತಿದರು. ನಿತ್ಯನೋವು, ಅವಮಾನಗಳೇ ತುಂಬಿತ್ತು. ಕೆಳ ವರ್ಗದವರಿಗೆ ಶಾಲೆ ದೇವಾಲಯಗಳಿಗೆ ಮುಕ್ತ ಪ್ರವೇಶವಿರಲಿಲ್ಲ. ಅತ್ಯಂತ ಅಮಾನವೀಯ ಕಾನೂನುಗಳನ್ನು ನಿರ್ಮಿಸಿಕೊಂಡು ಕೆಳವರ್ಗದ ಜನರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಹಿಂಸಿಸುತ್ತಿದ್ದರು. ಈ ಕಾರಣದಿಂದ ನಾರಾಯಣಗುರುಗಳು ಈ ವರ್ಗಭೇದವನ್ನು ತೊಡೆದು ಹಾಕುವುದನ್ನೇ ತಮ್ಮ ಜೀವನದ ಗುರಿಯನ್ನಾಗಿಸಿಕೊಳ್ಳುತ್ತಾರೆ. ಮತ್ತು ತುಳಿತಕ್ಕೊಳಗಾದ ಜನಾಂಗಕ್ಕಾಗಿ ಶಾಲೆ-ದೇವಾಲಯಗಳನ್ನು ನಿರ್ಮಿಸುತ್ತಾರೆ. ಆ ದೇವಾಲಯಗಳಲ್ಲಿ ಕೆಳ ವರ್ಗದ ಜನರನ್ನೇ ಪೂಜಾರಿಗಳನ್ನಾಗಿ ನೇಮಿಸುತ್ತಾರೆ. ಆ ಮುಖೇನ ಮೇಲ್ವರ್ಗದವರ ದಬ್ಬಾಳಿಕೆಗೆ ಸೆಡ್ಡು ಹೊಡೆದು, ಅಸಮಾನತೆ ಮತ್ತು ಶೋಷಣೆಗಳ ನಿವಾರಣೆಗೆ ದುಡಿಯುತ್ತಾರೆ. ಧರ್ಮಗಳ ತಿಕ್ಕಾಟದಿಂದ ಯುದ್ದ-ರಕ್ತಪಾತಗಳನ್ನು ಕಂಡ ನಾರಾಯಣಗುರುಗಳು - ವಿಶ್ವಧರ್ಮದ ಅಡಿಪಾಯದ “ಮಾನವ ಜಾತಿಯೊಂದೇ, ದೇವನೊಬ್ಬನೇ ಹಾಗೂ ಧರ್ಮವೊಂದೇ ಮನುಕುಲಕೆ” ಎಂಬ ಘೋಷ ವಾಕ್ಯವನ್ನು ಅಂಗೀಕರಿಸಿ ತಮ್ಮ ಸಕಲ ಆಚಾರ ವಿಚಾರ ಕ್ರಿಯೆಗಳಲ್ಲಿ ಈ ತತ್ವವನ್ನೇ ಬಿತ್ತರಿಸಿದರು ಹೋರಾಟಮಯ ಜೀವನದಿಂದ ಸಮ ಸಮಾಜದ ರೂವಾರಿಗಳಾಗಿ ಜನಮಾನಸದಲ್ಲಿ ಸಮಾನತೆಯ, ಸರ್ವೋದಯದ, ಭ್ರಾತೃತ್ವದ ಮತ್ತು ಮಾನವೈಕ್ಯತೆಯ ಬೀಜಗಳನ್ನು ಬಿತ್ತಿ ಹೋಗಿದ್ದಾರೆ. ಈ ಎಲ್ಲ ಆಶಯ-ಅಂಶಗಳನ್ನು ಡಾ.ಕಾರಿಯಪ್ಪ ಅವರು ತಮ್ಮ ಕೃತಿಯಲ್ಲಿ ಬಹು ಮನೋಜ್ಞವಾಗಿ ವಿಶ್ಲೇಷಿಸುವ ಮುಖಾಂತರ ನಾರಾಯಣಗುರುಗಳ ಕುರಿತು ಆಕರ ಗ್ರಂಥವೊಂದನ್ನು ಕನ್ನಡನಾಡಿಗೆ ಧಾರೆ ಎರೆದಿದ್ದಾರೆ.
©2024 Book Brahma Private Limited.