ಮುಗ್ಧತೆಯೇ ಮೈವೆತ್ತಂತಿದ್ದ ಗೋಂಡಿ ಬುಡಕಟ್ಟಿಗೆ ಸೇರಿದವನು ಕೊಮುರಂ ಭೀಮು. ಇದ್ದಕ್ಕಿದ್ದಂತೆ ನಿಜಾಂ ಸರ್ಕಾರ ಅವನ ಸಮುದಾಯದ ವಿರುದ್ಧ ಹಲ್ಲು ಮಸೆಯುತ್ತದೆ. ಅವರು ವಾಸಿಸುತ್ತಿದ್ದ ಕಾಡಿನ ಮೇಲೆ ದಾಳಿ ಮಾಡುತ್ತದೆ. ಭೀಮು ತನ್ನ ಜನರನ್ನೆಲ್ಲ ಸಂಘಟಿಸಿ ಅದಕ್ಕೆ ಪ್ರತ್ಯುತ್ತರ ನೀಡುತ್ತಾನೆ. ಹಾಗೆ ಅವನು ನಡೆಸುವ ಹೋರಾಟ ಚಿಕ್ಕದಾದರೂ ಮಹತ್ವದ್ದಾಗುತ್ತದೆ.
ತೆಲುಗಿನ ಮುಖ್ಯ ಐತಿಹಾಸಿಕ ಕಾದಂಬರಿಗಳಲ್ಲಿ ’ಕೊಮುರಂ ಭೀಮು’ ಒಂದು. ಅವನ ಹೋರಾಟವನ್ನು ಮೊದಲು ಅಕ್ಷರಕ್ಕಿಳಿಸಿದ್ದು ಸಾಹು ಮತ್ತು ಅಲ್ಲಂ ರಾಜಯ್ಯ ಎಂಬ ಹೋರಾಟಗಾರರು. ಕಾಲಾನಂತರ ಚಿಂತಕ ವರವರರಾವ್ ಇದನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ಕನ್ನಡಕ್ಕೆ ’ಕೊಮುರಂ ಭೀಮು ವರ್ತಮಾನದ ಮುಖಾಮುಖಿ’ ಹೆಸರಿನಲ್ಲಿ ಅನುವಾದಿಸಿದವರು ಬಿ. ಸುಜ್ಞಾನ ಮೂರ್ತಿ.
ವರವರರಾವ್ ಬರೆದಿರುವ ಸುದೀರ್ಘ ಮುನ್ನುಡಿ ಕೂಡ ಅನೇಕ ಕಾರಣಗಳಿಗೆ ಮುಖ್ಯವಾಗಿದೆ. ಆ ಮುನ್ನುಡಿ ಕುರಿತಂತೆಯೇ ಚರ್ಚೆಗಳು ನಡೆದಿವೆ. ಭೀಮು ಹೋರಾಟಕ್ಕೂ ಈಗ ನಡೆಯುತ್ತಿರುವ ಆದಿವಾಸಿ ಹೋರಾಟಗಳಿಗೂ ಇರುವ ವ್ಯತ್ಯಾಸವನ್ನು ಲೇಖಕರು ಗುರುತಿಸಿದ್ದಾರೆ. ಸಂದಿಗ್ಧತೆಯನ್ನು ಎದುರಿಸುತ್ತಿರುವ ಸಮುದಾಯಗಳು ಕೊಮರಂ ಚಳವಳಿಯಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತಾರೆ.
©2024 Book Brahma Private Limited.