ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ, ಸಹಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ ೨೦೧೮ರಲ್ಲಿ ವಯೋನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಇವರು ಇದುವರೆಗೆ ಪ್ರಕಟಿಸಿರುವ ಕೃತಿಗಳು : ಬಣ್ಣದ ಚಿಟ್ಟೆ, ಮಕ್ಕಳ ಮಂದಾರ, ಜಂಗಮಜೋಗಿ, ಕಂದನ ಕವಿತೆ, ಬಕಾಸುರನ ಹೊಟ್ಟೆ, ಪದ್ಯ ಹೇಳುವ ಮರ, ಚಿಣ್ಣರಲೋಕದ ಬಣ್ಣದ ಹಾಡು, ಬಾರೆಲೆ ಹಕ್ಕಿ ಬಣ್ಣದ ಹಕ್ಕಿ, ಬಣ್ಣದ ತಗಡಿನ ತುತ್ತೂರಿ, ಗೀಜಗನ ಗೂಡು, ಭೀಮನ ಬದುವೆ, ಚಿಣ್ಣರ ಚಿಲಿಪಿಲಿ -ಮುಂತಾದ ಮಕ್ಕಳ ಕವನ ಸಂಕಲನಗಳು, ಚಿಣ್ಣರ ಪಯಣ (ಮಕ್ಕಳ ಕಾದಂಬರಿ), ಬಲಿ, ಸಿರಿಧಾನ್ಯ, ಹುತ್ತಯ್ಯ (ಮಕ್ಕಳ ನಾಟಕಗಳು), ಮತ್ತೊಂದು ಮಹಾಭಾರತ (ಮಕ್ಕಳಿಗಾಗಿ ಮಹಾಕಾವ್ಯ), ಹಸ್ತಿನಾವತಿ, ಪರ್ವತಾರಣ್ಯ, ಕುರುಕ್ಷೇತ್ರ, ಮಹಾಪ್ರಸ್ಥಾನ (ಮಕ್ಕಳಿಗಾಗಿ ಮಹಾಭಾರತ) ಆನಂದ (ಅನುವಾದಿತ ಮಕ್ಕಳ ಕತೆಗಳು), ಗೋವಿಂದ ಗೀತೆ (ಮಕ್ಕಳಿಗಾಗಿ ಭಗವದ್ಗೀತೆ), ಕತ್ತಲೊಡಲ ಬೆಳಕು, ಉರಿವ ಏಕಾಂತ ದೀಪ, ಒಂದು ತೇವದ ಗೀತೆ (ಕವನಸಂಕಲನಗಳು), ಜಡಿಮಳೆ (ಹನಿಗವನ ಸಂಕಲನ), ಊರು-ತೇರು (ಪಿಎಚ್.ಡಿ.ಮಹಾಪ್ರಬಂಧ), ಶೂದ್ರದೀವಿಗೆ, ಸ್ಮಶಾನ ಕುರುಕ್ಷೇತ್ರದಲ್ಲಿ ಕುರುಕುಲ ಸೂರ್ಯ (ನಾಟಕಗಳು), ಸವುಡಿ (ಕಥಾಸಂಕಲನ), ಜನಪರ ಕವಿ ಯೋಗಿ ವೇಮನ (ಜೀವನ ಚರಿತ್ರೆ), ಭಾನುಮತಿ (ಖಂಡಕಾವ್ಯ) ಒಳಗೊಂಡಂತೆ ೩೩ ಕೃತಿಗಳನ್ನು ರಚಿಸಿದ್ದಾರೆ.
ಶ್ರೀಯುತರಿಗೆ ಇದುವರೆಗೆ ಸಂದಿರುವ ಪ್ರಶಸ್ತಿ, ಬಹುಮಾನಗಳು ಹೀಗಿವೆ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪುಸ್ತಕ ಬಹುಮಾನ (೨೦೧೨), ಪ್ರಜಾವಾಣಿ ದೀಪಾವಳಿ ಶಿಶುಕಾವ್ಯಸ್ಪರ್ಧೆಯಲ್ಲಿ ಆರು ಬಾರಿ ಬಹುಮಾನ (೧೯೯೨,೧೯೯೬,೧೯೯೭,೧೯೯೮,೧೯೯೯, ೨೦೦೬), ಕನ್ನಡ ಸಾಹಿತ್ಯ ಪರಿಷತ್ತಿನ ‘ಸಿಸು’ಸಂಗಮೇಶ ದತ್ತಿ ಪುರಸ್ಕಾರ (೨೦೦೩,೨೦೧೧), ಪೆರ್ಲ ಕೃಷ್ಣಭಟ್ಟ ಸಾಂಸ್ಕೃತಿಕ ಪ್ರತಿಷ್ಠಾನದ ಪೆರ್ಲ ಕಾವ್ಯ ಪ್ರಶಸ್ತಿ (೨೦೦೪), ಶಿವಮೊಗ್ಗ ಕರ್ನಾಟಕ ಸಂಘದ ನಾ.ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ (೨೦೧೧,೨೦೧೭), ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪುರಸ್ಕಾರ (೨೦೧೨), ತುಮಕೂರು ಅನನ್ಯ ಪ್ರಕಾಶನದ ಕೆ.ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ (೨೦೧೩), ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ನ ಕಾವ್ಯಾನಂದ ಪುರಸ್ಕಾರ (೨೦೧೩), ನಾಗನೂರು ರುದ್ರಾಕ್ಷಿಮಠದ ಹರ್ಡೇಕರ್ ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿ (೨೦೧೪), ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ (೨೦೧೧, ೨೦೧೫), ೧೮ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ (೧೬-೧೭, ಜನವರಿ ೨೦೨೦), ಕರ್ನಾಟಕ ಬಾಲವಿಕಾಸ ಅಕಾಡೆಮಿಯ ೨೦೧೮-೧೯ನೇ ಸಾಲಿ ಗೌರವ ಪ್ರಶಸ್ತಿ (೨೦೨೧).
ಇವುಗಳಲ್ಲದೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ೬ನೇ ತರಗತಿಯ ಪ್ರಥಮಭಾಷೆ ಕನ್ನಡ ಪಠ್ಯದಲ್ಲಿ ‘ಮಂಗಳ ಗ್ರಹದಲ್ಲಿ ಪುಟ್ಟಿ’ ಎಂಬ ಕವಿತೆಯನ್ನು & ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಬಿ.ಎ ಮೂರನೇ ಸೆಮಿಸ್ಟರಿನ ಕನ್ನಡ ಭಾಷಾಪಠ್ಯದಲ್ಲಿ ‘ಅಮೃತಮತಿ’ ಎಂಬ ಕವಿತೆಯನ್ನು ಬಳಸಿಕೊಳ್ಳಲಾಗಿದೆ