’ ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು’ ಕೃತಿಯು ಜೆ. ಆರ್. ಪರಿಮಳಾರಾವ್ ಅವರ ಕತಾಸಂಕಲನವಾಗಿದೆ. ಕೃತಿಯ ಕುರಿತು ಲೇಖಕಿ, 'ಒಂದಾನೊಂದು ಕಾಲದಲ್ಲಿ ........ ಎಂದು ಅಜ್ಜಿ ಕಥೆ ಆರಂಭಿಸುವುದೇ ತಡ ಮಕ್ಕಳೆಲ್ಲರೂ ಸುತ್ತುವರೆದು ಕಥೆ ಆಲಿಸಲು ಕಾತರರಾಗುತ್ತಾರೆ. ಮಕ್ಕಳಿಗೆ ಕಥೆ ಕೇಳುವುದಾಗಲಿ, ಓದುವುದಾಗಲಿ ಬಲುಪ್ರಿಯವಾದುದು. ಅದು ಅವರಿಗೆ ಹೂರಣದ ಹೋಳಿಗೆ, ಕಡುಬು ಮೆದ್ದಂತೆ. ಒಂದು ಕಥೆ ಮುಗಿದರೆ ಇನ್ನೊಂದು ಮತ್ತೊಂದು ಹೇಳಿ ಎನ್ನುವ ಮಕ್ಕಳಿಗೆ ವಿಧ ವಿಧವಾದ ಸಾವಿರಾರು ಕಥೆಗಳು ಬೇಕು. ಹಿಂದಿನ ಕಾಲದ ಅಡಗೂಲಜ್ಜಿಯ ಕಥೆಗಳು, ರಾಜಕುಮಾರರ, ರಾಜಕುಮಾರಿಯರ, ಏಳು ಸಮುದ್ರ ದಾಟುವ ವೀರರ, ಕ್ರೂರ ರಾಕ್ಷಸರ, ಮಂತ್ರವಾದಿ, ಮಂತ್ರಗಾತಿಯರ ಕಥೆಗಳು ಪ್ರಚಲಿತವಿದ್ದವು. ಅವು ಬಹಳ ಮಟ್ಟಿಗೆ ದೇಶಿಕಥೆಗಳಾಗಿದ್ದವು. ಮಕ್ಕಳು ಹುಟ್ಟಿ ಬೆಳೆವ ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುತ್ತಿದ್ದವು, ಮಕ್ಕಳಿಗಾಗಿ ಕನ್ನಡದಲ್ಲಿ ಬರೆದಿರುವ ದೇಶ ವಿದೇಶದ ಹೊಸ ಹೊಸ ಕಥೆಗಳು, ಅವರಿಗೆ ಹೊಸ ಸೀಮೆಗಳ, ಹೊಸ ಭಾವಗಳ, ಹೊಸಕ್ರಿಯಾಶೀಲತೆಯ, ಹೊಸದೃಷ್ಟಿಯ ಅನುಭವವನ್ನು ಕೊಡಬಲ್ಲವು, ಕಥೆಗಳ ಮೂಲಕ ಮಕ್ಕಳಿಗೆ ಬೇರೆ ಬೇರೆ ದೇಶಗಳ ಭೌಗೋಳಿಕ, ಚಾರಿತ್ರಿಕ ಸನ್ನಿವೇಶಗಳು ವೇದ್ಯವಾಗುತ್ತವೆ. ಈಗಿನ ಮಕ್ಕಳು "ಪ್ರಪಂಚದ ಮಕ್ಕಳು" (Children of the World) ಅವರಲ್ಲಿ 'ವಸುದೈವ ಕುಟುಂಬ'ದ ಮಹತ್ತ್ವ ಅರಿತು ಬಾಳುವ ಸಂದೇಶ ಅವರ ಮನದಲ್ಲಿ ನೆಲಗೊಳ್ಳಬೇಕು. ಪ್ರಪಂಚ ಎಲ್ಲಾ ತಂದೆ ತಾಯಿಗಳು, ಶಿಕ್ಷಕರು ಮಕ್ಕಳನ್ನು ಪ್ರಪಂಚದ ಮಕ್ಕಳಾಗಿ ಬೆಳಸಿ ಅವರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಆದರಿಸಿ, ಅನ್ಯದೇಶದ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಬೇಕು. ಇದರಿಂದ ದೇಶವಿದೇಶಗಳ ನಡುವೆ ಏಳಬಹುದಾದ ಬಹಳಷ್ಟು ಸಂಕುಚಿತ ಭಾವನೆಗಳು ಮಾಯವಾಗಿ ಶಾಂತಿ ಸೌಹಾರ್ದ ವಾತಾವರಣ ವಿಶ್ವದಲ್ಲಿ ಮೂಡುವುದರಲ್ಲಿ ಸಂದೇಹವಿಲ್ಲ. ಕನ್ನಡದ ನನ್ನ ಈ ಕಥೆಗಳಿಗೆ ಸ್ಫೂರ್ತಿ ಇತ್ತಿರುವ ಎಲ್ಲಾ ಮೂಲ ಕಥೆಗಳಿಗೆ ನಾನು ಚಿರಋಣಿಯಾಗಿರುವುದಲ್ಲದೆ, ನನ್ನ ಧನ್ಯತೆಯನ್ನು ಈ ಮೂಲಕ ಅರ್ಪಿಸುತ್ತಿರುವೆ. ಈ ಕೃತಿ ಮಕ್ಕಳಿಗೆ ರುಚಿಸಿ, ಅವರ ಆಸಕ್ತಿ ಕೆರಳಿಸಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.