ಲೇಖಕ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಕಲನ-ನೋಟ್ ಬುಕ್. ಮಕ್ಕಳ ಕಥಾ ಸಾಹಿತ್ಯ ಸಂಕಲನಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದ್ದು,, ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಗಮನಾರ್ಹವಾಗಿವೆ. ಸರಳ ಭಾಷೆಯಿಂದ ಬರೆದ ಇಲ್ಲಿಯ ಕಥೆಗಳು ಮಕ್ಕಳ ಕಲ್ಪನಾ ಲೋಕದ ವಿಸ್ತರಣೆಗೆ ಅನುಕೂಲ ಕಲ್ಪಿಸುತ್ತವೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ಅನಂದ ಪಾಟೀಲ ‘ಇಲ್ಲಿನ ಎಲ್ಲ ಕತೆಗಳಲ್ಲಿ ಮೇಲು ನೋಟಕ್ಕೆ ಕಾಣುವಂತೆ ಎಲ್ಲೆಲ್ಲೂ ಬಾಲ್ಯವೇ ಹರಡಿಕೊಂಡಿದೆ. ಬಾಲ್ಯದ ಸಮಯದಲ್ಲಿ ಮನುಷ್ಯ ಜೀವಿ ಕಟ್ಟಿಕೊಳ್ಳುವ ಮುಗ್ಧ ಕನಸುಗಳು, ತಳೆಯುವ ಕುತೂಹಲಗಳು, ಸ್ವಚ್ಛಂದಗಳು, ಜೊತೆಗೆ ಅವಕ್ಕೆ ಅರ್ಥವಾಗದೆ ಅಂಟಿಕೊಂಡೇ ಬರುವ ವಾಸ್ತವದ ಬೇಸರಗಳು, ನೋವುಗಳು ಇಲ್ಲಿ ವಿಶೇಷವಾಗಿ ಹರಡಿಕೊಂಡಿವೆ. ಗ್ರಾಮೀಣ, ಬಡ ಮಕ್ಕಳೇ ಇಲ್ಲಿನ ಎಲ್ಲ ಕತೆಗಳಲ್ಲಿ ಕಾಣಸಿಗುತ್ತಾರೆ. ಒಂದಿಷ್ಟು ಅನುಕೂಲತೆಗಳಿರುವ ಮಕ್ಕಳ ಜೊತೆಗೆ ತುಸು ತುಸುವಿಗೂ ಪಡಬಾರದ ಕಷ್ಟಪಡುವ, ತಾನು ಕಾಣುವ ಕನಸನ್ನೇ ಅರ್ಧಕ್ಕೆ ನಿಲ್ಲಿಸಿಕೊಂಡು ಬಿಡುವ ಮಕ್ಕಳ ಚಿತ್ರಗಳು ಇಲ್ಲಿ ಸಾಮಾನ್ಯವಾಗಿ ಕತೆಗಳಿಗೆ ತೆರೆದುಕೊಂಡಿವೆ. ಅದರಲ್ಲೂ ಬಳ್ಳಾರಿ ಭಾಗದ ಮಕ್ಕಳ ಜಗತ್ತು ಇದು ಎನ್ನುವಂತೆ ಅಲ್ಲಿನದೇ ಪರಿಸರದಲ್ಲಿ ಅರಳಿದ ಕತೆಗಳು ಇವಾಗಿವೆ. ಈಗಾಗಲೇ ಹೇಳಿದಂತೆ ಓದುವ ಮಗುವಿಗೆ ಏನನ್ನೋ ಉಪದೇಶವೋ, ನೀತಿಯ ಮಾತನ್ನೋ ಹೇಳಲು ಕಟ್ಟಿಕೊಂಡ ಚೌಕಟ್ಟುಗಳಲ್ಲ ಇವು. ಬದಲಿಗೆ, ಸುತ್ತಲಿನ ವಾತಾವರಣದ ಅನುಭವಗಳೇ ಮೈತಳೆದುಕೊಂಡು ರೂಪುಗೊಂಡವು. ಹಾಗಾಗಿ ಈ ಕತೆಗಳ ಓದು ಎನ್ನುವುದು ಕೇವಲ ಪಾಠದ ಓದಾಗದೆ ಅದೇ ಒಂದು ಅನುಭವವಾಗಿ ಬಿಡುತ್ತದೆ, ಆಗಬೇಕಾದ್ದೇ ಅದು’ ಎಂದು ಪ್ರಶಂಸಿಸಿದ್ದಾರೆ.
ಶಿವಲಿಂಗಪ್ಪ ಈ ಕತೆಗಳನ್ನು ಬಹು ತಾಳ್ಮೆಯಿಂದ, ಹೆಚ್ಚು ಹೆಚ್ಚು ಕಲಾತ್ಮಕವಾಗುವಂತೆ ಮುಂದಿರಿಸುವಲ್ಲಿ ಶೃದ್ಧೆಯಿಂದ ತೊಡಗಿಕೊಂಡಿರುವುದು ಎದ್ದು ಕಾಣುತ್ತದೆ. ಈ ಕತೆಗಳು ದೀರ್ಘವಾಗಿ ಹರಡಿಕೊಂಡಿವೆ. ಆಡುಮಾತಿನ ಬನಿಯನ್ನು ಬಲು ಅಗತ್ಯವಾಗಿ ಬಳಸಿಕೊಂಡಿವೆ. ಸುತ್ತಲಿನ ಪರಿಸರವನ್ನು ಕೈಗೆ ಅಂಟುವಂತೆ ದಟ್ಟವವಾಗಿಸಿಕೊಂಡುದು ಎಲ್ಲವೂ ಈ ಕತೆಗಳು ಸಹಜವಾಗಿ ಅರಳುವುದಕ್ಕೆ ತಕ್ಕ ಮೈಯನ್ನು ಒದಗಿಸಿವೆ. ಇಲ್ಲಿನ ಮಣ್ಣಿನ ಮಕ್ಕಳ ನಿತ್ಯದ ದನಿ ಗಟ್ಟಿಯಾಗಿ ಕೇಳಿದೆ. ಜೊತೆಗೆ ಈ ಬಗೆಯ ಕತೆಗಳನ್ನು ಕಲಾತ್ಮಕವಾಗಿಸುವಲ್ಲಿ ಭಾಷೆಯನ್ನು ದುಡಿಸಿಕೊಂಡಿರುವ ಬಗೆ ಆಕರ್ಷಿಸುತ್ತದೆ. ಅದೂ ಮಕ್ಕಳ ಮನೋಲೋಕಕ್ಕೆ ತಕ್ಕುದಾಗಿ ತನ್ನನ್ನು ಕಂಡುಕೊಂಡಿರುವುದು ಇನ್ನೊಂದು ಮಗ್ಗಲಾಗಿದೆ’ ಎಂದೂ ಶ್ಲಾಘಿಸಿದ್ದಾರೆ.
©2024 Book Brahma Private Limited.