.
ಖ್ಯಾತ ಲೇಖಕಿ ಅನುಪಮಾ ನಿರಂಜನ ಅವರು ಮಕ್ಕಳಿಗಾಗಿ ಬರೆದ ಕತೆಗಳ ಸಂಪುಟಗಳು. ’ದಿನಕ್ಕೊಂದು ಕತೆ’ ಶೀರ್ಷಿಕೆಯೇ ಸೂಚಿಸುವಂತೆ ಲೇಖಕಿ ಮಕ್ಕಳಿಗಾಗಿ ಪ್ರತಿದಿನ ಹೇಳಿದ ಕತೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಪ್ರತಿ ತಿಂಗಳಿಗೆ ಒಂದರಂತೆ ಹನ್ನೆರಡು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಆ ಪೈಕಿ ಭಾದ್ರಪದ ಮಾಸದ ಕತೆಗಳು ಈ ಸಂಪುಟದಲ್ಲಿವೆ.
ಈ ಸಂಪುಟಗಳು ರೂಪುಗೊಂಡ ಬಗೆಯನ್ನು ಲೇಖಕಿ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಅದು ಹೀಗಿದೆ- ’ನನ್ನ ಮಕ್ಕಳು "ಅಮ್ಮ ಕಥೆ ಹೇಳು" ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿ ಕಥೆಗಳನ್ನು ಹೆಣೆದು ಹೇಳಿದೆ. ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, 'ಕನ್ನಡ ನಾಡಿನ ಇತರ ಮಕ್ಕಳೂ ಇವುಗಳಿಂದ ಸಂತೋಷಪಡುವಂತಾಗಬೇಕು' ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ರಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ. ಈ ರೀತಿ 'ದಿನಕೊಂದು ಕಥೆ'ಯ ಉದಯವಾಯಿತು’ ಎಂದು ಲೇಖಕಿ ವಿವರಿಸಿದ್ದಾರೆ. ’ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ಧಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಯರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವಣಿಗೆಗೆ ನೆರವಾಗುತ್ತವೆ. ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ’ ಎಂದು ಈ ಸಂಕಲನದ ಬಗ್ಗೆ ವಿವರಿಸಿದ್ದಾರೆ.
©2024 Book Brahma Private Limited.