‘ಗೊಂಬೆಗೊಂದು ಚೀಲ’ ಲೇಖಕಿ ವಿಶಾಲಾ ಆರಾಧ್ಯ ಅವರು ಬರೆದ ಮಕ್ಕಳ ಕತಾಸಂಕಲನ. ಈ ಕೃತಿಗೆ ಲೇಖಕ ಚಿದಾನಂದ ಸಾಲಿ ಅವರು ಬೆನ್ನುಡಿ ಬರೆದು ‘ಈ ಅತೀವ ಸ್ಪರ್ಧೆ ಮತ್ತು ತಂತ್ರಜ್ಞಾನದ ದ್ವೀಪಕೂಪಗಳ ಸ್ವಾರ್ಥಕೇಂದ್ರಿತ ಕಾಲದಲ್ಲಿ ನಾಳಿನ ಮಕ್ಕಳ ನಾಳೆಗಳ ಬಗ್ಗೆ ಆತಂಕವಾಗುವಂಥ ಸಾಮಾಜಿಕ ಸಂದರ್ಭವಿದು. ಇದೇ ಕಾಲಕ್ಕೆ ಅನುವಾದ ಮಾಡುವುದನ್ನು ಮತ್ತು ಮಕ್ಕಳಿಗಾಗಿ ಬರೆಯುವುದನ್ನು ಎರಡನೇ ದರ್ಜೆಯ ಕೆಲಸವೆಂದು ತಾತ್ಸಾರ ಭಾವದಿಂದ ಕಾಣಲಾಗುತ್ತಿರುವ ವಿಚಿತ್ರ ಸಾಹಿತ್ಯಿಕ ಧೋರಣೆಯೂ ಇದೇ ಕಾಲದ್ದೇ. ಇಂಥ ಕಾಲದಲ್ಲಿ ಮಕ್ಕಳಿಗಾಗಿ ಬರೆಯುವುದು ಮತ್ತು ನಮ್ಮೊಳಗಿನ ಮಗುತನವನ್ನು ಕಾಪಾಡಿಕೊಳ್ಳುವುದು ಅತಿ ಜರೂರಿನ ಹಾಗೆಯೇ ಅಷ್ಟೇ ಮಹತ್ವದ ಸಂಗತಿಗಳಾಗಿವೆ’ ಎನ್ನುತ್ತಾರೆ.
ಜೊತೆಗೆ, ‘ಈಗಾಗಲೇ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದರೂ ಮಕ್ಕಳಿಗೆ ಬರೆಯುವುದರ ಮಹತ್ವವನ್ನರಿತ ವಿಶಾಲಾ ಆರಾಧ್ಯ ಅವರು ಒಂದು ಮಕ್ಕಳ ಕವನ ಸಂಕಲನ ಪ್ರಕಟಿಸಿದ ನಂತರ ಈಗ ಮಕ್ಕಳ ಕಥಾಸಂಕಲನದ ಪ್ರಕಟಣೆಗೆ ಸಿದ್ಧರಾಗಿದ್ದಾರೆ. ಇಲ್ಲಿಯ ಕಥೆಗಳು ಮಕ್ಕಳ ಅನುಭವಲೋಕದ ವಿಸ್ತರಣೆಗೆ ನೆರವಾಗುವಂತೆ ಸಹಜ, ಸರಳ, ಚೆಲುವಿನಿಂದ ಕೂಡಿವೆ. ಮಾಡಿದ ತಪ್ಪಿಗಾಗಿ ಕ್ಷಮಾಭಾವ, ಪಡೆದ ಸಹಾಯಕ್ಕೆ ಪ್ರತಿಯಾಗಿ ಧನ್ಯತಾಭಾವ ಮತ್ತು ತಪ್ಪನ್ನು ತಿದ್ದಿಕೊಳ್ಳಲೆಳಸುವ ಸ್ವಯಂ ಪರಿವರ್ತನಾಭಾವಗಳು ಈ ಎಲ್ಲ ಕಥೆಗಳ ಹಿಂದಿನ ಸ್ಥಾಯಿಭಾವಗಳಾಗಿರುವುದು ಗಮನಾರ್ಹವಾಗಿದೆ. ‘ಸ್ನೇಹ ಸೇತು’ ಹಾಗೂ ‘ಸಿಹಿಗಿಣ್ಣು’ ಕಥೆಗಳಂಥ ವಸ್ತುಗಳನ್ನು ಈಗಿರುವ ರೀತಿಗಿಂತ ಭಿನ್ನವಾಗಿ ನಿರ್ವಹಿಸಲು ಸಾಧ್ಯವಿದೆ ಎಂಬುದನ್ನು ಅವರು ತಮ್ಮಷ್ಟಕ್ಕೆ ತಾವೇ ಮರುಓದು ಮತ್ತು ಪರಿಷ್ಕರಣೆಗಳ ಕಾಲಕ್ಕೆ ಕಂಡುಕೊಳ್ಳಲು ಸಾಧ್ಯವಾದರೆ ಅವರಿಂದ ಶಿಶುಸಾಹಿತ್ಯಕ್ಕೆ ಇನ್ನೂ ಮಹತ್ವದ ಕೊಡುಗೆ ಕೊಡಲು ಸಾಧ್ಯವಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಸಿದ್ದಾರೆ. ಈ ಕೃತಿಗೆ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ 2019-2020ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿದೆ.
©2025 Book Brahma Private Limited.