‘ಶಾವೋಲಿನ್ ಮಕ್ಕಳಿಗಾಗಿ ಕಥೆಗಳು’ ಕೃತಿಯು ಕೆ. ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕತಾಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಆನಂದ ಪಾಟೀಲ ಅವರು, ಮಕ್ಕಳ ಕಥಾಲೋಕ ನಿಧಾನವಾಗಿಯಾದರೂ ಭಾರತದಲ್ಲಿ ತನ್ನ ಅಗತ್ಯವನ್ನ ಹೇಳತೊಡಗಿದೆ. ಮಕ್ಕಳ ಜಗತ್ತಿನ ಪ್ರೇರಣೆಯಲ್ಲಿ ಬರೆಯುತ್ತಿರುವ ಅನೇಕ ಲೇಖಕರು ಈಗ ಕಾಣಿಸಿಕೊಳ್ಳುತ್ತಿದ್ದಾರೆ. ರಾಮೇಂದ್ರ ಕುಮಾರ ಇಂಗ್ಲಿಷಿನಲ್ಲಿ ಬರೆಯುತ್ತಿರುವ ಹೆಸರುವಾಸಿ ಲೇಖಕ, ಭಾರತದಲ್ಲಿ ಹಾಗೆಯೇ ವಿದೇಶಗಳಲ್ಲಿಯೂ ಮಕ್ಕಳ ಸಾಹಿತ್ಯದ ವಿಶೇಷದ ಕಾರ್ಯಕ್ರಮಗಳಲ್ಲಿ ರಾಮೇಂದ್ರ ಕಾಣಿಸಿಕೊಳ್ಳುತ್ತಿರುವುದು ಈಗ ವಾಡಿಕೆಯಾಗಿಬಿಟ್ಟಿದೆ. ಇಂಥ ಉತ್ಸಾಹಿ ಪ್ರತಿಭೆಯ ಲೇಖಕನ ಕತೆಗಳೀಗ ಕನ್ನಡಕ್ಕೆ ಬಂದಿವೆ. ಉತ್ಸಾಹಿ ಯುವ ಲೇಖಕ, ವೈಚಾರಿಕ ಗುಂಗಿನ ಸಂಶೋಧನೆ ಆಸಕ್ತಿಯ, ಮಕ್ಕಳ ಕುರಿತು ಇನ್ನಿಲ್ಲದ ಆಸಕ್ತಿ ವಹಿಸುವ, ಅದರಲ್ಲೂ ಗ್ರಾಮೀಣ ಪರಿಸರದ ಅನನುಕೂಲದ ಮಕ್ಕಳ ಕಡೆಗೆ ಸದಾ ತುಡಿಯುವ ಕೆ. ಶಿವಲಿಂಗಪ್ಪ ಹಂದಿಹಾಳು, ಈ ಇಂಗ್ಲಿಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ.
ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ವಿದ್ಯಾಭ್ಯಾಸ ಎಂ.ಎ., ಬಿ.ಇಡಿ (ಪಿ.ಹೆಚ್.ಡಿ).,ಎನ್.ಇ.ಟಿ.(ಕನ್ನಡ) ಪದವೀಧರರು. ಪ್ರಸ್ತುತ ಸ. ಹಿ. ಪ್ರಾ. ಶಾಲೆ ಹಂದಿಹಾಳ ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರು. ಬಳಪ (ಮಕ್ಕಳ ಮಾಸ ಪತ್ರಿಕೆ) ಸ್ಥಾಪಕ ಸಂಪಾದಕರಾಗಿ, ಕನಕ ಅಧ್ಯಯನ ಸಂಶೋಧನಾ ಸಂಸ್ಥೆಯಿಂದ ಹೊರತರುತ್ತಿರುವ ತತ್ವಪದಗಳ ಸಂಪುಟ ಸಂಪಾದನಾ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು: ನಾನು ಮತ್ತು ಕನ್ನಡಕ (ಕವನ ಸಂಕಲನ), ಎಳೆಬಿಸಿಲು (ಮಕ್ಕಳ ಸಾಹಿತ್ಯ ಸಂಪದ), ಶಾವೋಲಿನ್ (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ಆನಂದಾವಲೋಕನ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ಬಳ್ಳಾರಿಯ ಬೆಡಗು (ಪ್ರಾತಿನಿಧಿಕ ಕತಾ ಸಂಕಲನ), ದಿ ಯಂಗ್ ಸೈಂಟಿಸ್ಟ್, (ಮಕ್ಕಳ ಕಾದಂಬರಿ) ...
READ MORE