ಲೇಖಕ ಜಿ. ಪಿ. ರಾಜರತ್ನಂ ಅವರ ಮಕ್ಕಳ ಸಾಹಿತ್ಯ ಕೃತಿ ʻಪಂಚಾಯುಧ ಕುಮಾರ ಮೊದಲಾದ ಬೋಧಿಸತ್ವನ ಕತೆಗಳುʼ. ಲೇಖಕ ಸುಮತೀಂದ್ರ ನಾಡಿಗ ಅವರು ಪುಸ್ತಕದಲ್ಲಿ, “ಶಿಶುವಿಹಾರದಿಂದ ಪ್ರೌಢಶಾಲೆಯವರೆಗೆ 2ರಿಂದ 6, 7ರಿಂದ 10, 11ರಿಂದ 16 ವರ್ಷದ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಶಿಶುಸಾಹಿತ್ಯ, ಬಾಲಸಾಹಿತ್ಯ, ಕಿಶೋರ ಸಾಹಿತ್ಯ ಬೇರೆ ಬೇರೆಯದಾಗಿರಬೇಕೆನ್ನುವ ಹೊಳಹು ನನ್ನ ಗುರುಗಳಾದ ಜಿ. ಪಿ. ರಾಜರತ್ನಂ ಅವರಿಗಿತ್ತು. ಅದಕ್ಕಾಗಿ ಅವರು ಶಿಶುಪ್ರಾಸಗಳು, ಪದ್ಯಕತೆಗಳು, ಹಾಡುಗಳು, ಅಭಿನಯಗೀತೆಗಳು, ಗದ್ಯಕತೆಗಳನ್ನು ಬರೆದರು. ಅವುಗಳ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳು ಮಕ್ಕಳ ಸಂವೇದನೆಯಲ್ಲಿ ಸೇರುವ ಹಾಗೆ ನೋಡಿ ಕೊಂಡರು. ಮಕ್ಕಳ ಮನಸ್ಸನ್ನು ಬೆಳೆಸಿದರು. ರಾಜರತ್ನಂ ಶಿಶುವಿಹಾರದಲ್ಲಿ ಮತ್ತು ಮಿಡ್ಲ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾಗ ಮಕ್ಕಳ ಸಹವಾಸದಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸಿದರು. ಅವರು ಭಾರತದ ಪೌರಾಣಿಕ, ಧಾರ್ಮಿಕ, ಚಾರಿತ್ರಿಕ ಆದರ್ಶ ವ್ಯಕ್ತಿಗಳ ಬಗ್ಗೆ ಬರದದ್ದೆಲ್ಲವು ಕತೆಗಳ ಹಾಗಿವೆ. ಶಾಲೆಗಳಲ್ಲಿ ಮೇಷ್ಟ್ರುಗಳು ಪಾಠದ ನಡುವೆ ಈ ಕತೆಗಳನ್ನು ಸಮಯಾನುಸಾರವಾಗಿ ಉಪಯೋಗಿಸಿದರೆ, ಮಕ್ಕಳ ಮನಸ್ಸನ್ನು ಉಲ್ಲಾಸಭರಿತವಾಗಿಡುವುದು, ಅವರಿಗೆ ಎಚ್ಚರಿಕೆ, ಸ್ಫೂರ್ತಿ ಮತ್ತು ಅವರ ಬದುಕಿಗೊಂದು ಅರ್ಥವನ್ನು ಕೊಡುವುದು ಕೂಡ ಸಾಧ್ಯವಾಗುತ್ತದೆ. ರಾಜರತ್ನಂ ಅವರ ಶಿಶುಸಾಹಿತ್ಯ ಮತ್ತು ಬಾಲಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರು ಒಳ್ಳೆಯ ಶಿಕ್ಷಕರಾಗಲಿಕ್ಕೂ, ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಥಿಗಳಾಗುವುದಕ್ಕೂ ಅತ್ಯವಶ್ಯಕ” ಎಂದು ಹೇಳಿದ್ದಾರೆ.
©2024 Book Brahma Private Limited.