‘ಮುತ್ತು ಕೊಟ್ಟ ಮೀನು’ ಲೇಖಕ ಹ.ಸ. ಬ್ಯಾಕೋಡ ಅವರ ಮಕ್ಕಳ ಕಥಾ ಸಂಕಲನ. ಕೃತಿಯ ಕುರಿತು ಬರೆಯುತ್ತಾ ಹತ್ತು ವರ್ಷಗಳ ಹಿಂದೆ ಪ್ರಕಟಗೊಂಡ ನನ್ನ ಮಕ್ಕಳ ಕಥಾಸಂಕಲನವನ್ನು ಓದಿ ಆತ್ಮೀಯ ಸ್ನೇಹಿತರಾದವರಲ್ಲಿ ಪ್ರಮುಖರೆಂದರೆ ಕೇಂದ್ರ ಬಾಲಸಾಹಿತ್ಯ ಪುರಸ್ಕಾರವನ್ನು ಪಡೆದ ದಿವಂಗತ ಚಂದ್ರಕಾಂತ ಕರದಳ್ಳಿ ಅವರು. ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಅವರು ದಿನವೂ ಎಲ್ಲಾ ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅದರಲ್ಲಿಯೂ ರವಿವಾರದ ಪುರವಣಿಗೆಗಳನ್ನು ತಪ್ಪದೇ ಗಮನಿಸುತ್ತಿದ್ದ ಅವರು ಆಗಾಗ ಪ್ರಕಟಗೊಂಡ ನನ್ನ ಕಥೆಗಳನ್ನು ಓದುತ್ತಿದ್ದರು. ಓದಿದ ದಿನವೇ ಅರ್ಧ ಗಂಟೆಗೂ ಹೆಚ್ಚು ಕಾಲ ನನ್ನೊಡನೆ ಮೊಬೈಲ್ ಮೂಲಕ ಕರೆ ಮಾಡಿ ಮಾತನಾಡುತ್ತಿದ್ದರು. ಕಳೆದೆರಡು ವರ್ಷಗಳಲ್ಲಿ ನಾನು ಇಂದಿನ ಮಕ್ಕಳಿಗಾಗಿ ಹೊಸತನದ ಕಥೆಗಳನ್ನು ಬರೆದದ್ದನ್ನು ಗಮನಿಸಿದ ಅವರು ಬ್ಯಾಕೋಡ ಯಾಕೋ ನೀವು ನಿಮ್ಮ ಕಾಲದ ಹಿಂದಿನ ಶೈಲಿಯ ಕಥೆಗಳನ್ನು ರಚಿಸುವುದನ್ನು ಮರೆತು ಬಿಟ್ರಾ? ಆರಂಭದಲ್ಲಿ ನೀವು ಬರೆದ ಪ್ರಾಣಿ, ಪಕ್ಷಿಗಳನ್ನು ಇಟ್ಟುಕೊಂಡು ಬರೆದ ಕಥೆಗಳು ಬಹಳ ಆಕರ್ಷಕವಾಗಿದ್ದವು. ಮತ್ತೆ ಅಂತಹ ಕಥೆಗಳನ್ನು ಆಗಾಗ ಬರೀರಿ. ಪುಟ್ಟ ಪುಟ್ಟ ಮಕ್ಕಳಿಗೆ ಅಂತಹ ಕಥೆಗಳು ಬಹಳ ಇಷ್ಟವಾಗುತ್ತವೆ ಅಂತ ಹೇಳಿದ್ದರು. ಹಾಗಾಗಿ ನಾನು ಆಗಾಗ ಒಂದಿಷ್ಟು ಕಥೆಗಳನ್ನು ಪ್ರಾಣಿ ಪಕ್ಷಿಗಳನ್ನು ಇಟ್ಟುಕೊಂಡು ರಚಿಸಿದೆ ಎನ್ನುತ್ತಾರೆ ಲೇಖಕ ಬ್ಯಾಕೋಡ. ಜೊತೆಗೆ ಆ ಕತೆಗಳು ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಅವುಗಳೆಲ್ಲವನ್ನು ಓದಿದ್ದ ಚಂದ್ರಕಾಂತ ಕರದಳ್ಳಿ ಅವರು, ಹೊಸತನದ ಕಥೆಗಳೊಂದಿಗೆ ಪ್ರಾಣಿ ಪಕ್ಷಿಗಳ ಕಥೆಗಳನ್ನು ಸೇರಿಸಿ ಅಂದವಾದ ಚಿತ್ರಗಳೊಂದಿಗೆ ಪುಸ್ತಕವನ್ನು ಹೊರತನ್ನಿ ಅಂತ ಹೇಳುತ್ತಲೇ ಇದ್ದವರು. ಏಕಾಏಕಿ ಕಳೆದ 2019ರಲ್ಲಿ ನಮ್ಮನ್ನು ಬಿಟ್ಟು ಹೊರಟು ಹೋದರು. ಅವರ ಆಶಯದಂತೆ ಈ ನನ್ನ ಮುತ್ತು ಕೊಟ್ಟ ಮೀನು ಮಕ್ಕಳ ಕಥಾಸಂಕಲನ ಹೊರ ಬಂದಿದೆ. ಇದು ಏಳನೆಯ ಮಕ್ಕಳ ಕಥಾಸಂಕಲನವಾಗಿದೆ ಎಂದು ತಿಳಿಸಿದ್ದಾರೆ. ಈ ಕೃತಿಯಲ್ಲಿ ಮುತ್ತು ಕೊಟ್ಟ ಮೀನು, ಪ್ರಶಾಂತನ ಪಾರಿವಾಳ ಪ್ರೀತಿ, ಆಸೆಬುರುಕ ಭರಮಣ್ಣಿ ಮತ್ತು ಗಿಳಿ, ಮೂರ್ಖ ಕೊಕ್ಕರೆ ಮತ್ತು ಕಪ್ಪೆ, ಹಲಸು ಯಾರದು, ಜೀವ ಉಳಿಸಿದ ನ್ಯೂಸ್ ಪೇಪರ್, ಹೆಗ್ಗಣ ನುಂಗದ ಹಾವು, ಕಪ್ಪೆಗಳ ಪ್ರಾರ್ಥನೆ, ಗಿಡುಗನ ಗೆಳೆಯ ಗಿರೀಶ ಹಾಗೂ ಕ್ಷಮಿಸಿ ಮರಗಳೇ ಎಂಬ 10 ಕತೆಗಳು ಸಂಕಲನಗೊಂಡಿವೆ.
©2024 Book Brahma Private Limited.