‘ಮಹಾಪ್ರಸ್ಥಾನ’ ಮಕ್ಕಳಿಗಾಗಿ ರಚಿಸಿದ ಮಹಾಭಾರತದ ನಾಲ್ಕನೆಯ ಭಾಗ. ಈ ಭಾಗದಲ್ಲಿ ಕಥನವು ಕುರುಪಾಂಡವರ ಯುದ್ಧ ಮುಗಿದ ನಂತರದಿಂದ ಪ್ರಾರಂಭವಾಗಿ, ಪಾಂಡವರ ಅಂತ್ಯದವರೆಗೆ ಹರಡಿಕೊಂಡಿದೆ. ದ್ವಿಪದಿಯಲ್ಲಿರುವ ಈ ಕಾವ್ಯದ ಸರಳ ಭಾಷೆ ಈವತ್ತಿನ ಆಡುನುಡಿಗೆ ಹತ್ತಿರದ್ದು. ಹಾಗಾಗಿ ಮಹಾಭಾರತ ಈವತ್ತಿನ ಕಥೆಯಾಗಿ ಭಾಷಿಕವಾಗಿಯೂ ತನ್ನನ್ನು ತೋರಿಸಿಕೊಳ್ಳುವುದು. ನಿಷ್ಠುರವಾದ ಜೀವನಪರ ನಿಲುವು ಕಥನದ ಉದ್ದಕ್ಕೂ ಕಂಡುಬರುವುದು. ಸಮಾಜಮುಖತೆ, ಶೋಷಿತ ವರ್ಗದ ಪರವಾದ ನಿಲುವು ಭಾರತ ಕಥೆಗೆ ಒಂದು ಹೊಸ ಪರಿವೇಷವನ್ನೇ ನೀಡಿವೆ. ಮಕ್ಕಳಿಗಾಗಿ ತಾನು ಭಾರತವನ್ನು ಪುನಾರಚಿಸುತ್ತಿರುವೆನು ಎಂಬ ಸ್ಪಷ್ಟ ನಿಲುವಿನಿಂದಲೇ ಕವಿಯು ಹೊರಟಿರುವುದರಿಂದ ಸರಳತೆ, ಸ್ಪಷ್ಟತೆ, ಸಂಕ್ಷಿಪ್ತತೆಯ ಮಾರ್ಗವನ್ನು ಅವರು ಅನುಸರಿಸುತ್ತಾರೆ. ಸಹಜಧರ್ಮದಲ್ಲಿ ಸಲೀಸಾಗಿ ಸಾಗುವ ಮನೋಹರವಾದ ಕಥನವು ಮಕ್ಕಳಿಗೆ ಮಾತ್ರವಲ್ಲ ಭಾರತ ಕಥೆಯಲ್ಲಿ ಆಸಕ್ತಿಯುಳ್ಳ ಹಿರಿಯರಿಗೂ ಪ್ರಿಯವಾಗುವುದರಲ್ಲಿ ಸಂಶಯವಿಲ್ಲ.
ಶಿಶುಸಾಹಿತ್ಯ ಕ್ಷೇತ್ರದಲ್ಲೇ ಚಾರಿತ್ರಿಕ ದಾಖಲೆ -ಬಿ.ಗಣಪತಿ
ಮಕ್ಕಳಿಗೆ ‘ಮಹಾಭಾರತ’ ಅಂದಾಗ ಮೊದಲು ಉದ್ಭವಿಸುವ ಪ್ರಶ್ನೆ ಅದನ್ನು ಪ್ರಚುರಪಡಿಸುವ ಬಗೆ, ವಿಧಾನ, ರೀತಿ, ಹೇಗೆ ಹೇಳಬೇಕು? ಮಕ್ಕಳ ಮನೋಭೂಮಿಕೆ, ಧರ್ಮ, ಗ್ರಹಣಶಕ್ತಿಗೆ ಅನುಸಾರ ಹೇಳಬೇಕೆ? ಅಥವಾ ಹೇಳುವವರ ದರ್ಶನದ ನೆಲೆಯಿಂದ ಹೊಮ್ಮಬೇಕೆ? ಹಾಗೇ ‘ಮಹಾಭಾರತ’ ಅಂದಾಗ ಕನ್ನಡದಲ್ಲಿ ಸಾವಿರ ವರ್ಷಗಳಷ್ಟು ಪುರಾತನ ಮಹಾಭಾರತ ಕಥನ ಪರಂಪರೆ ಇದೆ. ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ಕುವೆಂಪು ನಂತರ ಬೈರಪ್ಪ ಮೊದಲಾದವರು ಇಂಥ ಪರಂಪರೆಯ ಜನಕರು. ಈ ಮಹಾನುಭಾವರೆಲ್ಲ ತಂತಮ್ಮ ದೃಷ್ಟಿಗೆ ತಕ್ಕಂತೆ ಮಹಾಭಾರತವನ್ನು ಪುನರ್ ಸೃಷ್ಟಿಗೆ ಒಡ್ಡಿದ್ದಾರೆ. ಎಸ್.ಎಲ್.ಬೈರಪ್ಪನವರಂತೂ ‘ಪೂರ್ಣ ಭಾರತ’ವನ್ನು ವಸ್ತುಶಃ ಅದರ ಕಾಲಧರ್ಮ, ಘಟಿತ, ಪ್ರಾದೇಶಿಕ ಅಧ್ಯಯನ ಸಂಶೋಧನೆಯ ಮೂಲಕ ಅತ್ಯಂತ ವಾಸ್ತವಿಕ ನೆಲೆಗಟ್ಟಿನಲ್ಲಿ ಮರುನಿರೂಪಿಸಿದವರು.
ಇದನ್ನ ಬಿಟ್ಟರೆ ಕನ್ನಡದ ಆಚೆಗೆ ನಮಗೆ ದೊರಕುವುದು ಇರಾವತಿ ಕರ್ವೆ ಅವರ ‘ಯುಗಾಂತ’. ಇಷ್ಟಾಗಿಯೂ ಈವರೆಗೆ ಯಾರೂ ಮಕ್ಕಳಿಗಾಗಿ ‘ಮಹಾಭಾರತ’ವನ್ನ ಪುನರ್ ಕಥನಕ್ಕೆ ಒಡ್ಡಿದ್ದಿಲ್ಲ. ಬಲ್ಲರಿಗೆ, ಹಿರಿಯರಿಗೆ ‘ಮಹಾಭಾರತ’ ಕಥಿಸುವುದು ತುಂಬಾ ಕಠಿಣವೇನಲ್ಲ. ಆದರೆ ಮಕ್ಕಳ ಮನಸ್ಸಿಗೆ, ಚಿಂತನೆಗೆ ಅವರ ಅರಿವಿನ ಮಟ್ಟಕ್ಕೆ ಇಳಿದು ಸರಳಭಾರತ, ಶುದ್ಧಭಾರತ, ಸಿದ್ಧ-ಪ್ರಸಿದ್ಧ ಭಾರತವನ್ನು ಕಟ್ಟಿಕೊಡುವುದು ಮಹತ್ತರವಾದ ಸವಾಲು. ಅಂಥ ಸವಾಲಿನ ಕೆಲಸವನ್ನ ಮಕ್ಕಳ ಸಾಹಿತ್ಯ ಪ್ರಕಾರ ಪ್ರಪಂಚದ ಧೀಮಂತ ಲೇಖಕ, ಕವಿ, ಚಿಂತಕ ಡಾ.ಸಿ.ಎಂ.ಗೋವಿಂದರೆಡ್ಡಿ ಅವರು ಆಗುಮಾಡಿದ್ದಾರೆ. ಇದು ಶಿಶುಸಾಹಿತ್ಯ ಕ್ಷೇತ್ರದಲ್ಲೇ ಚಾರಿತ್ರಿಕ ಕೆಲಸ- ದಾಖಲೆ.
ಶಂತನು ಸತ್ಯವತಿಯರ ಪ್ರೇಮ ಪ್ರಸಂಗದಿಂದ ಆರಂಭಗೊಳ್ಳುವ ಈ ‘ಮಕ್ಕಳ ಮಹಾಭಾರತ’ ಸಂಪೂರ್ಣ ಕಥನಕಾವ್ಯದ ಸ್ವರೂಪದಲ್ಲಿ ಸಾಗುತ್ತದೆ. ಮಹಾಭಾರತದ ಹತ್ತು ಪರ್ವಗಳನ್ನೂ ಒಳಗೊಂಡ, ಪಾಂಡವರ ಅಶ್ವಮೇಧ, ಅರ್ಜುನನ ಯುದ್ಧ, ಯಾತ್ರೆ, ಕೊನೆಗೆ ಪಾಂಡವರ ಸ್ವರ್ಗಾರೋಹಣದಲ್ಲಿ ಕೊನೆಗೊಳ್ಳುತ್ತದೆ.
ಗೋವಿಂದರೆಡ್ಡಿಯವರ ‘ಮಕ್ಕಳ ಮಹಾಭಾರತ’ದ ವೈಶಿಷ್ಟ್ಯವೆಂದರೆ ಮನೋವೈಜ್ಞಾನಿಕವಾಗಿ ಇಲ್ಲಿನ ಅತಿವಾಸ್ತವದ, ಅಸಂಭಾವ್ಯ ಪ್ರಕರಣಗಳನ್ನು ಪುನರ್ ನಿರೂಪಿಸಿರುವುದು. ಪಾಂಡುವಿನ ಶಾಪ, ನಿಯೋಗ ಪದ್ಧತಿ, ಪಾಂಡವರ ಜನನ, ದ್ರೌಪದಿ ವಸ್ತ್ರಾಪಹರಣ, ಏಕಲವ್ಯನ ಹೆಬ್ಬೆರಳಿನ ಕಥೆ, ಕೃಷ್ಣನ ವ್ಯಕ್ತಿತ್ವ, ಯುದ್ಧಕೌಶಲ್ಯ, ಪಾಂಡವರ ಪತ್ನಿ ಪಾಂಚಾಲಿಯ ಕತೆ, ಕರ್ಣನ ಹುಟ್ಟು- ಹೀಗೆ ಮಹಾಭಾರತದ ಪ್ರತಿಯೊಂದು ಅನೇಕ ಅವಾಸ್ತವ, ಭ್ರಮಾತ್ಮಕ ಅನ್ನಿಸಬಹುದಾದ ಎಲ್ಲಾ ಪ್ರಸಂಗಗಳಿಗೂ ಸಿ.ಎಂ.ಗೋವಿಂದರೆಡ್ಡಿಯವರು ವಾಸ್ತವಿಕ ಗ್ರಹಿಕೆಯಲ್ಲಿ ವಿಸ್ತರಿಸಿರುವುದು ಮಕ್ಕಳ ಕೌತುಕ ಮನೋಭೂಮಿಕೆಗೆ ಹೆಚ್ಚು ಸೂಕ್ತವೆನಿಸುತ್ತದೆ. ವಿಜೃಂಭಿತ, ಅತಿಮಾನುಷ, ವೈಭವೀಕರಿತ ಸಂಗತಿಗಳೆಲ್ಲ ನೆಲದ ನೆಲೆಯಿಂದ ಚಿತ್ರಿಸಲ್ಪಟ್ಟಿವೆ. ಇಲ್ಲಿ ಇವರ ನಿರೂಪಣಾ ಶೈಲಿ, ಮಾಸ್ತಿಯವರ ರಾಮಾಯಣ ಕಥಾನಿರ್ವಹಣೆಯ ದಾಟಿಯನ್ನು ಮರುಸೃಷ್ಟಿಗೆ ಒಡ್ಡಿದ ನೆನಪನ್ನು ದಟ್ಟವಾಗಿ ಮರುನೆನಪಿಸುವಂತಿದೆ.
ಮಹಾಕವಿ ಪಂಪನಂತೆ ಯುದ್ಧವೀರವನ್ನಾಗಲಿ, ಶೃಂಗಾರವನ್ನಾಗಲಿ ವೈಭವೀಕರಿಸಿಲ್ಲ. ಕೃಷ್ಣಭಕ್ತಿ, ಕೃಷ್ಣವಿಲಾಸ, ಕೃಷ್ಣನ ದೈವಿಕ ರೂಪ-ಸ್ವರೂಪಗಳನ್ನೆಲ್ಲ ನೆಲಕ್ಕಿಳಿಸಿದ ಕೀರ್ತಿಯೂ ರೆಡ್ಡಿ ಅವರದ್ದು. ಸೈಂಧವನ ವಧಾಪ್ರಸಂಗವನ್ನು ಕೃಷ್ಣನ ಸುದರ್ಶನ ಸೂರ್ಯಂಗೆ ಅಡ್ಡಹಿಡಿದಿದ್ದಲ್ಲ. ಅಂದು ಸೂರ್ಯಗ್ರಹಣ ಅನ್ನುವುದನ್ನು ಕಾವ್ಯಕ್ಕೆ ಯಾವುದೇ ಚ್ಯುತಿಬಾರದಂತೆ ವ್ಯಾಖ್ಯಾನಿಸುತ್ತಾರೆ.
ಶರಣಾಗತಿಯ ಭಕ್ತಿಮಾರ್ಗಕ್ಕಿಂತ ಅಸ್ಮಿತೆಯ ವಿಚಕ್ಷಕ ಭಾವ ‘ಮಕ್ಕಳ ಮಹಾಕಾವ್ಯ’ದ ಕವಿ ಗೋವಿಂದರೆಡ್ಡಿ ಅವರದ್ದು. ರಾಮಾಯಣ ಮತ್ತು ಮಹಾಭಾರತ ಈ ದೇಶದ ಸಾಂಸ್ಕೃತಿಕ ದೃಷ್ಟಿ. ಇದು ನಮ್ಮ ಜೀವಸತ್ವ. ಭಾರೇಚನದ ಅಮೃತಸಿಂಧು. ಗೋವಿಂದರೆಡ್ಡಿಯವರು ಮಕ್ಕಳಿಗಾಗಿಯೇ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಮೃದು ಭಾಷೆ, ವಿವೇಚನಾಶೀಲ ಬರಹ, ಮಕ್ಕಳ ಮನದ ಇಂಗಿತಕ್ಕೆ ತಕ್ಕುದಾದ ಕಾವ್ಯ, ಮಹಾಕಾವ್ಯ, ನೀಳ್ಗವಿತೆಗಳು, ಹನಿಗವಿತೆಗಳು, ಇವರ ಅಭಿವ್ಯಕ್ತಿಯ ಬಹುಭಾಗ ಕಾವ್ಯವ್ಯಾಪಿ. ಸರಳ, ಸುಂದರ, ಸುಲಲಿತ ಕಾವ್ಯಶೈಲಿ ರಡ್ಡಿಯವರ ವೈಶಿಷ್ಟ್ಯ. ಮಕ್ಕಳ ಸಾಹಿತ್ಯ ಯಾವಾಗಲೂ ಸುಲಿದಿಟ್ಟ ಅಥವಾ ಸುಲಿದು ಕೊಡಬಹುದಾದ ಬಾಳೆಹಣ್ಣಿನಂತಿರಬೇಕು. ರೆಡ್ಡಿ ಅವರ ಬರಹ, ದಾಟಿ, ಭಾಷಾಬಳಕೆ ಹಾಗೆ ಇದೆ.
‘ಮಕ್ಕಳ ಮಹಾಭಾರತ’ ಇಂದಿನ ಜಾಗತೀಕರಣ, ಯಂತ್ರಯುಗ ಮತ್ತು ಬದಲಾದ ಭಾರತೀಯ ಕೌಟುಂಬಿಕ, ಸಾಮಾಜಿಕ ಸ್ಥಿತ್ಯಂತರದ ಸಂಕ್ರಮಣಕ್ಕೆ ಅತ್ಯಂತ ಜರೂರತ್ತಾದ ಓದು. ಪರೀಕ್ಷೆ ಮತ್ತು ಮಾರ್ಕ್ಸ್ ಈ ಎರಡರ ಮಧ್ಯೆ, ಮಕ್ಕಳ ಓದು ಶುಷ್ಕ ಎನಿಸಿದೆ. ಅವರ ವ್ಯಕ್ತಿತ್ವ ನಿರೂಪಣೆಗೆ, ಭಾವ ನಿರೂಪಣೆಗೆ ಬೇಕಾದ ಯಾವ ಸಾಮಗ್ರಿಗಳೂ ಶಾಲಾ ಓದಿನಲ್ಲಿ ದಕ್ಕುತ್ತಿಲ್ಲ. ಈ ಕೊರತೆಯನ್ನು ಈ ಮಕ್ಕಳ ಮಹಾಕಾವ್ಯ ‘ಮತ್ತೊಂದು ಮಹಾಭಾರತ’ ತುಂಬಿಕೊಡಲಿದೆ. ಸರಳ ಭಾಷೆ, ಸುಲಲಿತ ಓಟ, ಲಯಲಾಲತ್ಯಪೂರ್ಣ ‘ಮಹಾಭಾರತ’ ಮಕ್ಕಳಿಗೆ ಹಿತ ಎನಿಸಲಿದೆ. ಖುಷಿಯ ಓದಾಗಲಿದೆ. ಗೋವಿಂದರೆಡ್ಡಿ ಅವರು ಪ್ರತೀ ಅಧ್ಯಾಯಕ್ಕೂ ಮೊದಲು ಒಂದು ಚಿಕ್ಕ ಗದ್ಯ ಪೀಠಿಕೆ ಕೊಡುತ್ತಾರೆ. ನಂತರ ನೇರ, ಸ್ಪಷ್ಟ, ಚುರುಕು, ಪದ್ಯರೂಪದಲ್ಲಿ ಕಥೆಯನ್ನು ಹೇಳುತ್ತಾ ಸಾಗುತ್ತಾರೆ. ಮಹಾಭಾರತದ ಸ್ತ್ರೀಪಾತ್ರಗಳ ಕುರಿತು ಲೇಖಕರಿಗೆ ಗಾಢವಾದ ಸ್ತ್ರೀಸಂವೇದನೆಯಿದೆ. ಅಂಬೆ, ಅಂಬಿಕೆ, ಅಂಬಾಲಿಕೆ, ಕುಂತಿ, ಗಾಂಧಾರಿ, ದ್ರೌಪದಿ ಇನ್ನಿತರ ಸ್ತ್ರೀಪಾತ್ರಗಳ ಕುರಿತು ಅವರ ಆತ್ಮವಿವೇದನೆಯ ಸ್ವರೂಪದಲ್ಲಿ ನಿಂತು ಅವರ ಆಳ ಅಂತರಂಗದ ದನಿಯಾಗುತ್ತಾರೆ. ಮಾದ್ರಯ ವಿವಾಹ ಸಂದರ್ಭದಲ್ಲಿ ಅವಳ ಅನುಮತಿ ಕೇಳದೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ,
ಹೆಣ್ಣಿನ ಇಷ್ಟಾನಿಷ್ಟವ ತಿಳಿಯುವ ಕಾಲವು ಬಂದೂ ಇರಲಿಲ್ಲ
ಹೆಣ್ಣನು ಸುಮ್ಮನೆ ಕೇಳುವುದೇತಕೆ ಎಂದು ಬಗೆದಿತ್ತು ಜಗವೆಲ್ಲ
ಇಡೀ ಕಾವ್ಯದ ನೆಲೆ ಅಲ್ಲಿನ ಸ್ತ್ರೀಪಾತ್ರದ ಕುರಿತು ಇದೇ ಸಂವೇದನೆಯಿಂದ ತುಡಿಯುತ್ತದೆ. ಇದೇ ರೀತಿ ಏಕಲವ್ಯ, ಕರ್ಣ ಇನ್ನಿತರರ ಸನ್ನಿವೇಶ ಬಂದಾಗ ಕವಿ, ಕುಲಸಮಾನತೆ ಮತ್ತು ಅಸಮಾನತೆಯ ಸ್ಪಷ್ಟ ಚಿತ್ರಣ ನೀಡುತ್ತಾರೆ.
ಆದಿಯಿಂದಲೂ ಶೂದ್ರರ ಶೋಷಣೆ ನಡೆಯುತಲಿದ್ದಿತು ಎಡೆಬಿಡದೆ
ಆದರೆ ಶೂದ್ರರು ಮಾನವರಲ್ಲವೆ? ಅವರಿಗೆ ಕಲಿಯಲು ಬಲು ಆಸೆ
ಅಯ್ಯೋ ನೀತಿ ನಿಜಾಯಿತಿ ತಿರುಳನು ಜಾತಿಯು ತಿಂದಿತೆ?
ಯುದ್ಧ ವಿನಾಶಕಾರಕ. ದುರಾಸೆಯಲ್ಲಿದೆ ಕ್ರೌರ್ಯ, ಪಾಪ. ಅಧಿಕಾರ ದಾಹ ಸರ್ವನಾಶಕ್ಕೆ ಮೂಲ. ಮಾನವತೆ, ಸಹೋದರತ್ವ, ಸಮಾನತೆ, ಸಹಬಾಳ್ವೆಯೇ ಬದುಕಿನ ಸತ್ವ, ಸೌಂದರ್ಯ, ಸಾರ್ಥಕತೆ. ಹೀಗೆ ಬಲಿಯುವ, ಪಕ್ವಗೊಳ್ಳುವ ಮಕ್ಕಳ ಮಹಾಭಾರತ ಮಕ್ಕಳ ಮನಸ್ಸಿಗೆ ಎಂತಹ ಜೀವನತತ್ವ, ಮೌಲ್ಯ, ಆದರ್ಶಗಳು ನೆಲೆಗೊಳ್ಳಬೇಕು ಅನ್ನುವುದರ ಕುರಿತು ಕವಿಗಿರುವ ನಿಖರತೆಯನ್ನು ಪಕ್ವಗೊಳಿಸುತ್ತದೆ.
ಹೀಗಾಗಿ ಮಹಾಭಾರತ ಕಥನಕಾವ್ಯ ಕತೆ ಹೇಳುವುದರ ಜತೆಜತೆಗೇ ಜೀವನಸಾರ, ಜೀವನಮೌಲ್ಯವನ್ನೂ ಪ್ರತಿಪಾದಿಸುತ್ತದೆ. ಓದು, ಮನನ, ಕಲ್ಪನೆ, ವಿಲಾಸ, ಚೋದ್ಯ, ಖುಷಿ ಎಲ್ಲವುಗಳ ಜತೆ ‘ಮಕ್ಕಳ ಮಹಾಭಾರತ’ ವಿಚಾರ ಪ್ರಚೋದಕ ಕೂಡ. ಹೀಗಾಗಿ ಇಂದು ಕವಲುದಾರಿಯಲ್ಲಿ ನಿಂತ ಮಕ್ಕಳ ಜಗತ್ತಿಗೆ ‘ವಿಶ್ವವಾಣಿ ವಿರಾಮ’, ‘ಮಕ್ಕಳ ಮಹಾಭಾರತ’ದ ಮೂಲಕ ದಾರಿದೀಪವಾಗಲಿದೆ. ‘ಸಂಸ್ಕಾರ’ದ ಸಶಕ್ತ ನೆಲೆಯೊದಗಿಸಲಿದೆ.
ಹಿಂದಿನ ಕಥೆಯನು ಇಂದಿಗೆ ಹೊಂದಿಸಿ ಸುಮಧುರ ಕನ್ನಡದಲ್ಲಿಂದು
ಅಂದದ ಚೆಂದದ ಸುಂದರ ಬಂಧದಿ ಹೇಳುತ ಸಾಗುವೆ ನಾನಿಂದು
ಆದಿಯಿಂದಲೂ ಅಂತ್ಯದವರೆಗೆ ಮಹಾಭಾರತದ ಕಥೆಯನ್ನು
ಕನ್ನಡ ಬಂಧುಗಳೆಲ್ಲರು ಹರಸಿರಿ ಗೋವಿಂದನ ಈ ಕೃತಿಯನ್ನು
ಪದ್ಯದ ರೂಪದಲ್ಲಿ ಮಹಾಭಾರತದ ಕಥೆಯನ್ನು ನಿರೂಪಿಸುವ ಮುನ್ನ ಕವಿ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಅರಿಕೆ ಮಾಡಿಕೊಳ್ಳುವುದು ಮೇಲಿನಂತೆ.
-ಬಿ.ಗಣಪತಿ
©2024 Book Brahma Private Limited.