ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರು ಮಕ್ಕಳಿಗಾಗಿ ಬರೆದಿರುವ ಕತಾ ಸಂಕಲನ ‘ಕೋಗಿಲೆಯ ಸ್ವಯಂವರ ಮತ್ತು ಮಕ್ಕಳ ಇತರ ಕತೆಗಳು. ಈ ಕೃತಿಯಲ್ಲಿ ಐವತ್ತು ವೈವಿಧ್ಯಮಯ ಕತೆಗಳು ಮಕ್ಕಳ ಮನವನ್ನು ರಂಜಿಸಿ ರೂಪಿಸುತ್ತವೆ. ಮಹದಾಕಾಂಕ್ಷೆ ಕತೆಯಲ್ಲಿ ಇರುವುದರಲ್ಲಿ ತೃಪ್ತಿ ಕಾಣುವ ಇರುವೆಗಳು ಬೆಲ್ಲ-ಸಕ್ಕರೆ ಇರುವಾಗ ನಮ್ಮಗಿನ್ನೇನು ಬೇಕು ಎನ್ನುತ್ತವೆ. ಮನೋಸ್ಥೈರ್ಯಕತೆಯಲ್ಲಿ ಮಕ್ಕಳ ಮನಸ್ಸು ಕಾಣುವ ಭವ್ಯ ದೃಶ್ಯಗಳಿಂದ ರೂಪುಗೊಳ್ಳತ್ತದೆ. ಸಕಾರಾತ್ಮಕ ಚಿಂತನೆ ಮನವನ್ನು ದೃಢಗೊಳಿಸುತ್ತದೆ ಎಂದು ಮಂತ್ರವಾದಿಯ ಕತೆಯಲ್ಲಿ ನಿರೂಪಿತವಾಗುತ್ತದೆ. ತಲೆಯಿಂದ ಸಮಸ್ಯೆ ಪರಿಹಾರಕ್ಕಿಂತ ಹೃದಯದಿಂದ ಸಮಸ್ಯೆ ಪರಿಹಾರ ಲೇಸು ಎಂದು ನರಿಯ ತರ್ಕದ ಕತೆ ಪ್ರತಿಪಾದಿಸುತ್ತದೆ. 'ಆಮೆಗುರು' ಕತೆಯಲ್ಲಿ ಶ್ರದ್ಧೆಗಿಂತ ಮಿಗಿಲಾದುದು ಇಲ್ಲ ಎಂಬ ತತ್ವವನ್ನು ಮಕ್ಕಳ ಮನದಲ್ಲಿ ಬೇರೂರಿಸುತ್ತದೆ. ಪೂರ್ಣ ಅರಿವಿನಿಂದ ಜಾಗೃತಿ ಮಾಡಿಕೋ, ಜೀವ ಜಂತುಗಳನ್ನು ಪ್ರೀತಿಸು, ಸಹಬಾಳ್ವೆ, ಸಹ ಚಿಂತನೆ ಸಹಸಾಧನೆಯಲ್ಲಿ ತೊಡಗು ಎಂದು ಆಮೆಗುರು ಬೋಧಿಸುತ್ತದೆ. ಪ್ರಕೃತಿಯಿಂದ ಕಲಿಯುವುದು ಬಹಳಷ್ಟಿದೆ. ಪ್ರಶ್ನಿಸಿ, ವಿಮರ್ಶಿಸಿ ಬದುಕಬೇಕು, ಕುತೂಹಲ ಜಿಜ್ಞಾಸೆ ಇಲ್ಲದ ಬಾಳು ಬರಡು, ಕಾಡನ್ನು ಕಾಡುಪ್ರಾಣಿಗಳನ್ನು ರಕ್ಷಿಸು, ಪುಟ್ಟ ಕ್ರಿಮಿಕೀಟಗಳ ಮೇಲೂ ಕರುಣೆ ತೋರಬೇಕು ಹೀಗೆ ಒಂದಲ್ಲ ಒಂದು ಆದರ್ಶ, ತತ್ವ, ನೀತಿ, ನಿಯಮ, ವಿನಯ, ಕರುಣೆ, ನಿಸ್ವಾರ್ಥತೆ, ಪ್ರೀತಿ, ಸಹಕಾರ, ಸೌಹಾರ್ದ, ಸ್ನೇಹ ಮುಂತಾದವುಗಳ ಸಂದೇಶವನ್ನು ಸಾರಿ ಹೇಳುವ ಈ ಕತೆಗಳನ್ನು ನಿಶ್ಚಯವಾಗಿ ಓದಿ ಆನಂದಿಸಬೇಕು ಎಂದಿದ್ದಾರೆ ಲೇಖಕಿ ಪರಿಮಳಾ ರಾವ್.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE