‘ಕಾವ್ ಕಾವ್ ಕಾಗಕ್ಕ ಚೀಂವ್ ಚೀಂವ್ ಚಣಿಲಮ್ಮ’ ವಾಣಿರಾವ್ ಅವರ ಮಕ್ಕಳ ಕಥೆಯಾಗಿದೆ. ಇದಕ್ಕೆ ವಾಣಿರಾವ್ ಅವರ ಬೆನ್ನುಡಿ ಬರಹವಿದೆ: ಶ್ರೀಮತಿ ವಾಣಿರಾವ್‌ರವರು ಅಪರೂಪದ ಸಾಧಕಿ, ಅವರದು ಬಹುಮುಖ ಪ್ರತಿಭೆ. ಅವರು ವೃತ್ತಿಯಲ್ಲಿ ಅಧ್ಯಾಪಕಿಯಾಗಿ ದುಡಿದಿದ್ದರೂ ಪ್ರವೃತ್ತಿಯಿಂದ ಸಾಹಿತ್ಯ, ಸಂಗೀತ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರಕಾಶಿಸಿದ್ದಾರೆ. ಅವರು ಬಹುಭಾಷಾ ಜ್ಞಾನಿ ಕೂಡ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಪಾಂಡಿತ್ಯಗಳಿಸಿ ಅನೇಕ ಕೃತಿಗಳನ್ನು ಹೊರತಂದಿದ್ದಾರೆ. ಸಾಹಿತ್ಯ ಕ್ಷೇತ್ರದ ನಾನಾ ಪ್ರಕಾರಗಳಲ್ಲಿ ದುಡಿಮೆ ಮಾಡಿದ್ದಾರೆ.
ಕಾದಂಬರಿ ಸಣ್ಣಕತೆಗಳು, ಶಿಶು ಸಾಹಿತ್ಯ, ಕವನ, ನಾಟಕ, ಪ್ರವಾಸ ಸಾಹಿತ್ಯ, ಹರಟೆ, ಪ್ರಬಂಧಗಳು, ಹಾಸ್ಯ ಬರಹ, ರೇಡಿಯೊ ರೂಪಕಗಳು ಮುಂತಾದ ಪ್ರಕಾರಗಳಲ್ಲಿ ಇವರ ಕೃತಿಗಳು ಹೊರಬಂದಿವೆ. ಪರಭಾಷೆಗಳಿಂದಲೂ ಕೆಲವು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಭಾರತವನ್ನೆಲ್ಲ ಅನೇಕ ಬಾರಿ ಸುತ್ತಿರುವರಲ್ಲದೆ, ವಿದೇಶಗಳಲ್ಲೂ ಸಂಚರಿಸಿ ಪ್ರವಾಸದಲ್ಲಿ ಕಂಡ ಅನ್ಯ ಸಂಸ್ಕೃತಿ, ಭಾಷೆ, ನಡವಳಿಕೆಗಳನ್ನು ಅಧ್ಯಯನ ಮಾಡಿ ತಮ್ಮ ಅನುಭವವನ್ನು ತಮ್ಮ ಕೃತಿಗಳಲ್ಲಿ ಪ್ರಕಟಪಡಿಸಿದ್ದಾರೆ.
ಸುಮಾರು 25 ವರ್ಷಗಳಿಂದಲೂ ಹೋಮಿಯೋಪತಿ ಪದ್ಧತಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಸಮಗ್ರ ಸಾಹಿತ್ಯ ಸೇವೆಗಾಗಿ ಅನೇಕ ಪ್ರತಿಷ್ಠಿತ ಸಂಘ, ಸಂಸ್ಥೆಗಳು ಶ್ರೀಮತಿ ರಾವ್‌ರವರನ್ನು ಸನ್ಮಾನಿಸಿವೆ. ಗೊರೂರು ಪ್ರತಿಷ್ಠಾನದಿಂದ ಎರಡು ಸಲ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಎರಡು ಸಲ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಪಡೆದಿರುವುದಲ್ಲದೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿಯನ್ನೂ ಗಳಿಸಿದ್ದಾರೆ.
©2024 Book Brahma Private Limited.