’ಕಪ್ಪೆಯ ಪಯಣ’ ಕೃತಿಯು ತಮ್ಮಣ್ಣ ಬೀಗಾರ ಅವರ ಮಕ್ಕಳ ಕಥಾಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಆನಂದ ಪಾಟೀಲ ಅವರು, ಮಕ್ಕಳಲ್ಲಿನ ವಿಸ್ಮಯದ, ಕುತೂಹಲದ ಸಂಗತಿ ಅಭಿವ್ಯಕ್ತಿ ಪಡೆದುದು ಇನ್ನೂ ಗುಂಗಿನಲ್ಲಿದೆ. ಮಕ್ಕಳ ಸಾಹಿತ್ಯಕ್ಕೆ ಅಗತ್ಯವಾಗುವ ಸಾಮಗ್ರಿ ಮಕ್ಕಳ ಮನೋಲೋಕದ್ದು, ಈ ಗುಂಗು ಇರದವರು ಬರೆಯುವಾಗ ಅದು ಒರಟೊರಟಾಗಿರುತ್ತದೆ.
ಇಲ್ಲಿನ ಹಲವು ಕತೆಗಳು ಸಹಜವಾಗಿಯೇ ಓದಲು ತವಕ ಮೂಡಿಸಿದವು. ಅವರ ಬಾಲ್ಯದ ನೆನಪುಗಳನ್ನು ಆಧರಿಸಿದವು. ಮಲೆನಾಡ ಪರಿಸರದಲ್ಲಿ ಹುಡುಗರಾಗಿ ಅಡ್ಡಾಡಿ ಕೊಂಡಿದ್ದಾಗಿನ ಪ್ರಸಂಗಗಳು ಬರವಣಿಗೆಗಿಳಿಯುತ್ತ ಸ್ವಾಅನುಭವದ ಗಾಢತೆಯನ್ನು ಅಂಟಿಸಿಕೊಳ್ಳಲು ಪ್ರಯತ್ನಿಸಿವೆ. ಶಾಲೆ, ಗೆಳೆಯರು, ಅಪ್ಪ-ಅಮ್ಮ, ಕಾಡಿನ ಗಿಡಮರಗಳು, ಪ್ರಾಣಿಗಳ ನಡುವೆ ಹುಟ್ಟಿಕೊಳ್ಳುವ ಇವು ಹತ್ತಿರದಲ್ಲಿಯೇ ಮಾತನಾಡಿದಂತಿವೆ. ಮರದ ಪೊಟರೆಯಲ್ಲಿ ಗಿಳಿಮರಿಗಳಿಗಾಗಿ ಟಾರ್ಚ್ ಬಿಟ್ಟು ನೋಡುತ್ತಿದ್ದುದು, ಕೈಗೆ ಸಿಕ್ಕಾಗ ತಗಡಿನ ಡಬ್ಬ ಕತ್ತರಿಸಿ ಪಂಜರ ಮಾಡಿದುದು; ಒಂದು ಮರಿ ಬೆಕ್ಕಿಗೆ ಆಹಾರ ಆದಾಗ ಕಣ್ಣಲ್ಲಿ ನೀರು ತುಂಬಿಕೊಂಡುದುದು. ಪಕ್ಕದ ಮನೆಯ ಸುಬ್ಬುವಿನ ಉರಳುಗಳಿಂದ ನೀರುಗೋಳಿಗಳ ಸಾವನ್ನು ತಪ್ಪಿಸಿ, ತಮ್ಮಣ್ಣ ಈ ಸಂಕಲನದಲ್ಲಿ ಕೆಲ ಪ್ರಾಣಿಕತೆಗಳನ್ನು ರಚಿಸಿದ್ದಾರೆ. ಇವು ನಮ್ಮ ನೀತಿಕತೆಗಳು, ವ್ಯವಹಾರಿಕ ಜಾಣೆಯ ಪಂಚತಂತ್ರದ ಕತೆಗಳು, ಜಾನಪದ ಕತೆಗಳಾಚೆ ವಿಸ್ತರಿಸಿಕೊಳ್ಳುವುದು ಕಡಿಮೆ. ಇಂಥಲ್ಲಿ ಸರಳೀಕರಣಗೊಂಡ ಕೆಲ ನಿರ್ಣಯಗಳಿದ್ದು ಬಿಡುತ್ತವೆ. ಪರಿಸರದ ನಾಶ, ಮನುಷ್ಯನ ಆಕ್ರಮಣದ ಇವತ್ತಿನ ದಿನನಿತ್ಯದ ಸಂಗತಿಗಳನ್ನು ಮುಂದಿಡಲು ಇಲ್ಲಿನ ಒಂದೆರಡು ಕತೆಗಳು ಉದ್ದೇಶಗೊಂಡಿವೆ. ಇಂಥಲ್ಲಿ ಆಮೆ ಅಂದುಕೊಳ್ಳುವ ಮಾತು ಸಹಜವಾದುದೇ ಆಗಿದೆ. 'ಜಗಳವಾಡಬಾರದಿತ್ತು' ಅಂಥ ಕತೆ ಪುಣಾಣಿಗಳನ್ನು ಕೂರಿಸಿಕೊಂಡು ಸೊಗಸಾಗಿ ಹೇಳುವ ಬಗೆಯಲ್ಲಿದೆ. ತಮ್ಮಣ್ಣ ಬೀಗಾರ ಕೆಲವು ನಿರೀಕ್ಷೆಗಳನ್ನು ಈ ಸಂಕಲನದ ಮೂಲಕ ತಮ್ಮದೇ ಆದ ಅನುಭವದ ಹಿನ್ನೆಲೆಯಲ್ಲಿ ತೆರೆದಿಟ್ಟಿದ್ದಾರೆ ಎಂದಿದ್ದಾರೆ.
©2024 Book Brahma Private Limited.