‘ಶಾಲೆಗೆ ಬಂದರು ಗಾಂಧಿ ತಾತ’ ಲೇಖಕ ಹ.ಸ. ಬ್ಯಾಕೋಡ ಅವರು ರಚಿಸಿದ ಮಕ್ಕಳ ಕಥಾ ಸಂಕಲನ. ಕೃತಿಯ ಕುರಿತು ಬರೆಯುತ್ತಾ ‘ಕಥೆ ಕಟ್ಟುವ ಕಲೆಯನ್ನು ಕಲಿಸಿದ್ದು ಅಪ್ಪ. ಚಿಕ್ಕಂದಿನಲ್ಲಿ ಅಪ್ಪ ರಾತ್ರಿ ಹೊತ್ತು ಮಲಗುವ ಮುನ್ನ ಒಂದೆರಡು ಕಥೆಗಳನ್ನು ಹೇಳಿ ನನ್ನನ್ನು ಮತ್ತು ನನ್ನ ಮೂವರು ತಂಗಿಯರನ್ನು ರಂಜಿಸಿ ಮಲಗಿಸುತ್ತಿದ್ದರು. ಇನ್ನು ಓದಲು ಬರೆಯಲು ಬಾರದ ನನ್ನ ಅವ್ವ ಕೂಡ ಜನಪದ ಕಥೆಗಳನ್ನು ಹೇಳುತ್ತಿದ್ದರು. ರಜೆ ಇದ್ದಾಗ ಊರಿಗೆ ಹೋದಾಗ ಅಜ್ಜಿ ಹೇಳುತ್ತಿದ್ದ ಹಳೆಯ ಕಾಲದ ಸಾಹಸದ ಕಥೆಗಳನ್ನು ಕೇಳುತ್ತಿದ್ದೆವು. ಒಟ್ಟಾರೆಯಾಗಿ ಅಜ್ಜಿ ಮನೆ ಮತ್ತು ನಮ್ಮ ಮನೆಯಲ್ಲಿ ಅಪ್ಪ, ಅವ್ವ ಹೇಳಿದ ಕಥೆಗಳನ್ನು ಕೇಳುತ್ತಲೇ ಸಾಹಿತ್ಯದತ್ತ ಒಲವು ಮೂಡಿದ್ದಂತೂ ಸತ್ಯ, ನಾನೂ ಕಥೆಗಳನ್ನು ಕಟ್ಟಬೇಕು ಎಂದುಕೊಂಡ ನನಗೆ ಅಪ್ಪ ಕಥೆಗಳನ್ನು ಕಟ್ಟುವ ಕಲೆಯನ್ನು ಹೇಳಿಕೊಟ್ಟರು. ಹಾಗೆಯೇ ಒಂದಿಷ್ಟು ಕಥೆ ಸಂಕಲನಗಳನ್ನು ತಂದು ಕೊಟ್ಟು ಓದಿಸುತ್ತಿದ್ದರು. ಓದಿದ ಕಥೆಗಳನ್ನು ತಂಗಿಯರಿಗೆ ಹೇಳು ಅನ್ನುತ್ತಿದ್ದದ್ದು ಇನ್ನೂ ನೆನಪಿದೆ. ಈಗಲೂ ಸಹ ನಾನು ಸಾಹಿತ್ಯಿಕವಾಗಿ ಮುನ್ನಡೆಯಲು ಅಪ್ಪ ಬೆನ್ನು ತಟ್ಟುತ್ತಲೇ ಇದ್ದಾರೆ. ಹಾಗಾಗಿಯೇ ಈ ನನ್ನ ಹೊಸ ಮಕ್ಕಳ ಕಥಾ ಸಂಕಲನ ಸಿದ್ಧಗೊಂಡಿದೆ. ಇನ್ನು ಆಗಾಗ ಬೆಂಗಳೂರಿಗೆ ಬಂದರೆ ತಪ್ಪದೇ ಭೇಟಿಯಾಗುವ ಹಿರಿಯ ಮಕ್ಕಳ ಸಾಹಿತಿ ತಿಪಟೂರಿನ ಟಿ.ಎಸ್. ನಾಗರಾಜ ಶೆಟ್ಟಿ ಮತ್ತು ಯಾವುದೇ ಮುನ್ಸೂಚನೆ ಕೊಡದೆ ಧಿಡೀರನೆ ಹೇಳದೆ ಹೊರಟುಹೋದ ಮತ್ತೊಬ್ಬ ಹಿರಿಯ ಮಕ್ಕಳ ಸಾಹಿತಿ ಶಹಾಪುರದ ಚಂದ್ರಕಾಂತ ಕರದಳ್ಳಿ ಅವರು ಈಗಿನ ಮಕ್ಕಳಿಗೆ ಹೊಸತನದ ಕಥೆಗಳನ್ನು ಬರೀರಿ ಅಂತ ದುಂಬಾಲು ಬಿದ್ದಿದ್ದರು. ಅವರ ಒತ್ತಾಸೆಯಿಂದ ಈ ಕೃತಿಯಲ್ಲಿನ ಎಲ್ಲ ಕಥೆಗಳು ರಚಿತಗೊಂಡಿವೆ’ ಎನ್ನುತ್ತಾರೆ ಲೇಖಕ ಬ್ಯಾಕೋಡ. ಈ ಕೃತಿಯಲ್ಲಿ ಶಾಲೆಗೆ ಬಂದರು ಗಾಂಧಿ ತಾತ, ಪಾರಿವಾಳ ಪ್ರೀತಿ, ಮಾವು ಮರವಾಯಿತು, ಪೂಪಾದಿಂದ ಬಂದ ಚಿಟ್ಟೆಗಳು, ಕೆಡಕು ಬಯಸಿದರೆ, ಸುವಿಧಾಳ ಮನೆಯಲ್ಲಿ ಸುವ್ವಿ ಹಕ್ಕಿಮರಿ, ಹಾರಿಹೋದ ಬೆಳ್ಳಕ್ಕಿ, ಪುಟ್ಟಿ, ಚಿಟ್ಟೆ ಮತ್ತು ಜೇನುಕುಟುಕ, ನಿತೀಶನ ಹೈಜಂಪ್ ಸಾಹಸ ಹಾಗೂ ನನಸಾಯಿತು ನಿರ್ಮಲಾಳ ಕನಸು ಎಂಬ ಹತ್ತು ಕಥೆಗಳು ಸಂಕಲನಗೊಂಡಿವೆ.
©2024 Book Brahma Private Limited.