‘ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕಥಾಸರಿತ್ಸಾಗರದ ಕಥೆಗಳು’ ಲೇಖಕ ವೈ.ಎನ್.ಗುಂಡೂರಾವ್ ಅವರ ಕಥಾ ಸಂಕಲನ. ಹಿಂದೆ ಮಕ್ಕಳಿಗೆ ಇದ್ದ ಮನರಂಜನೆಯ ದಾರಿ ಎಂದರೆ ಆಟ- ಓಟ ಅಥವಾ ಕಥೆ ಕೇಳುವುದು. ಹಳ್ಳಿಯ ಶಾಲೆಗಳಲ್ಲಿ ಕಥೆ ಹೇಳುತ್ತಲೇ ಪಾಠಗಳನ್ನು ಕಲಿಸುತ್ತಿದ್ದರು. ಕಥೆ ಹೇಳಲೆಂದೇ ವಾರಕ್ಕೊಂದು ದಿನ, ಒಂದು ವೇಳೆಯನ್ನು ನಿಗದಿಪಡಿಸುತ್ತಿದ್ದರು. ಹೀಗೆ ಹೇಳುತ್ತಿದ್ದ ಕಥೆಗಳಲ್ಲಿ ಬುದ್ಧನ ಜಾತಕ ಕಥೆಗಳು, ಬೀರಬಲ್ಲನ ಕಥೆಗಳು. ಬೇತಾಳ ಕಥೆಗಳು ಮುಂತಾದವೆಲ್ಲದರಿಂದಲೂ ಹೆಕ್ಕಿ ತೆಗೆದು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಸರಿ ಹೊಂದುವಂತಹದ್ದನ್ನು ಆರಿಸಿ ಹೇಳುತ್ತಿದ್ದರು. ಈ ಕಥೆಗಳಲ್ಲಿ ಹಾಸ್ಯ, ವಿನೋದ, ಗಂಭೀರ ಕಥೆಗಳು, ಬುದ್ಧಿವಂತಿಕೆಯ ಕಥೆಗಳು, ವಿಚಾರವಂತಿಕೆಯ ಕಥೆಗಳೆಲ್ಲವೂ ಕೂಡಿದ್ದು ಬಾಲಕರಾದಿಯಾಗಿ ಎಲ್ಲರನ್ನೂ ಚಿಂತನೆಗೆ ಹಚ್ಚುವಂತಿರುತ್ತಿದ್ದವು.
ಈ ಕಥೆಗಳು ವಿವಿಧ ಕ್ಷೇತ್ರದ ಲೋಕ ವ್ಯವಹಾರಗಳನ್ನೊಳಗೊಂಡಿದ್ದು ಇದರಲ್ಲಿ ರಾಜರು, ರಾಣಿಯರು, ಪ್ರಾಣಿ-ಪಕ್ಷಿಗಳು, ವರ್ತಕರು, ಅಂತರಿಕ್ಷದಲ್ಲಿ ಹಾರುವವರು, ಗಣಿಕೆಯರು, ಸತೀಮಣಿಯರು, ಅವಧೂತರು ಜ್ಞಾನಿಗಳು ಎಲ್ಲರೂ ಸ್ಥಾನ ಪಡೆದುಕೊಂಡಿರುತ್ತಿದ್ದರು. ಇಂತಹ ಕಥೆಗಳನ್ನು ಕೇಳಿದ ಎಳೆಯರ ಮನಸ್ಸಿನಲ್ಲಿ ಪ್ರಾಮಾಣಿಕತೆ, ವಿವೇಕ, ಮಾನವೀಯತೆ, ಸಹಕಾರಬುದ್ಧಿ, ಉಂಟಾಗಲೆಂದು, ಗೌರವಿಸುವ ಗುಣ, ಬುದ್ಧಿವಂತಿಕೆ, ಉನ್ನತ ನಡವಳಿಕೆ ಇವುಗಳನ್ನು ರೂಢಿಸಿಕೊಳ್ಳಲೆಂಬ ಆಶಯದಿಂದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. ಬುದ್ಧನ ಜಾತಕ ಕಥೆಗಳು. ಬೀರಬಲ್ಲನ ಕಥೆಗಳು, ಪಂಚತಂತ್ರದ ಕಥೆಗಳಂತೆ ಹಲವಾರು ಕಥೆಗಳ ನದಿಗಳು ಬಂದು ಸೇರಿ ಮಹಾ ಸಮುದ್ರದಂತಹ ಸ್ವರೂಪ ಪಡೆದುಕೊಂಡಿರುವ ಕಥಾಸರಿಸ್ಸಾಗರದಲ್ಲೂ ಸೇರಿವೆ. ಮಕ್ಕಳ ಸೃಜನಶೀಲ ಬೆಳವಣಿಗೆಗೆ ಈ ಪುಸ್ತಕ ಸಹಕಾರಿಯಾಗಲಿದೆ.
©2024 Book Brahma Private Limited.