ಲೇಖಕ ಮಂಡಲಗಿರಿ ಪ್ರಸನ್ನ ಅವರು ಸಂಪಾದಕರಾಗಿ ಹೊರತಂದಿರುವ ಕೃತಿ ‘ಮಕ್ಕಳ ಸಾಹಿತ್ಯ 2019’. ಈ ಕೃತಿಯಲ್ಲಿ ಕರ್ನಾಟಕ ಸಾಃಇತ್ಯ ಅಕಾಡೆಮಿಯ ಅಧ್ಯಕ್ಷರು ಬಿ.ವಿ.ವಸಂತಕುಮಾರ್ ಅವರು ತಮ್ಮ ನುಡಿಗಳನ್ನು ಬರೆದಿದ್ದಾರೆ.‘ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳ ಪ್ರಕಟಣಾ ಯೋಜನೆ ಕನ್ನಡ ಸಾಹಿತ್ಯದ ಬೆಳವಣಿಗೆಯ ಅಧ್ಯಯನವನ್ನು ಗುರುತಿಸುವ ಒಂದು ಮೈಲುಗಲ್ಲು. ರಾಜ್ಯದ ನಾನಾ ಭಾಗಗಳಲ್ಲಿರುವ ಸಾಹಿತಿಗಳ ಆಯಾ ವರ್ಷದ ಉತ್ತಮ ಬರಹಗಳನ್ನು ಅರಿಸಿ ಸಂಪಾದಿಸಿ, ಕೃತಿರೂಪದಲ್ಲಿ ಹೊರತರುತ್ತಿರುವುದು ಒಂದು ರೀತಿಯಲ್ಲಿ ಈ ಒಂದಿನ ಕಾಲದಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಯಲ್ಲಿ ಉತ್ತಮ ತೆನೆಗಳನ್ನು ಆರಿಸಿ ಸಂಗ್ರಹಿಸಿ ಮುಂದಿನ ಸುಗ್ಗಿಗೆ ಬಿತ್ತನೆ ಬೀಜಗಳನ್ನಾಗಿಸಿಕೊಳ್ಳುತ್ತಿದ್ದ ರೀತಿ, ನೀತಿ, ಪ್ರೀತಿಗಳನ್ನು ನೆನಪಿಸುತ್ತದೆ. ವಾರ್ಷಿಕ ಸಂಕಲನಗಳು ಮೊಸರನ್ನು ಕಡೆದು ಬೆನ್ಣೆಯನ್ನು ತೆಗೆದಂತೆ. ಆ ಕ್ರಿಯೆಯ ಮಹತ್ವ, ಪರಿಶ್ರಮ ಮತ್ತು ಪ್ರೀತಿ ಎಂಥದ್ದೆಂಬುದನ್ನು ಮಂಡಲಗಿರಿ ಪ್ರಸನ್ನ ಅವರು ಈ ಕೃತಿಯ ಸಂಪಾದಕೀಯದಲ್ಲಿ ದಾಖಲಿಸಿದ್ದಾರೆ. ಈ ವಾರ್ಷಿಕ ಸಂಕಲನಗಳು ಸಾಹಿತಿಗಳು ಮತ್ತು ಓದುಗರ ನಡುವಿನ ಶಾಶ್ವತ ಸೇತುವೆಗಳು, ಆ ವರ್ಷ ಪ್ರಕಟವಾದ ಬರಹದ ಬೆಳೆಯ ಬೆಲೆಗಟ್ಟುವಿಕೆಗೆ ಸರಕು ಹೌದೂ. ಬರಹದ ಆಗಾಧತೆ ಹಾಗೂ ಕೃತಿಯ ಸಂಪಾದನೆಯ ಕಾಲಾವಧಿ, ಪುಟಗಳ ಮಿತಿ ಅದರ ನಡುವೆಯೂ ಆಯ್ಕೆಯಾಗಿರುವ ಬರಹಗಳು ಅನ್ನವಾಗಿರುವುದನ್ನು ತಿಳಿಯಲು ಅಗುಳನ್ನು ಕೈಗೆತ್ತಿಕೊಂಡು ಪರೀಕ್ಷಿಸಿದಂತೆ ಎಂದು ಭಾವಿಸುತ್ತೇನೆ. ಮಂಡಲಗಿರಿ ಪ್ರಸನ್ನ ಅವರು ಹೇಳುವ “ನಮ್ಮ ಒಂದು ಸ್ವಂತ ಕೃತಿಯನ್ನು ಹೊರತರುವ ಹತ್ತು ಪಟ್ಟು ಶ್ರಮ ಈ ಸಂಪಾದನಾ ಕೃತಿಗೆ ಇರುತ್ತದೆ ಎನ್ನುವ ಮಾತು ಕೆಲವೆ ದಿನಗಳಲ್ಲಿ ನನಗೆ ಅರ್ಥವಾಯಿತು" ಎನ್ನುವುದು ಎಲ್ಲ ಸಂಪಾದಕರ ಪರಿಶ್ರಮದ ಸ್ವರೂಪವನ್ನು ತಿಳಿಸುತ್ತದೆ’ ಎಂಬುದಾಗಿ ಹೇಳಿದ್ದಾರೆ.
ಈ ಕೃತಿಯಲ್ಲಿ ಭಾಗ 1ರಲ್ಲಿ 42ಕಥೆಗಳಿವೆ. ಭಾಗ-2ರಲ್ಲಿ 43 ಕವಿತೆಗಳಿವೆ.
©2024 Book Brahma Private Limited.