‘ಹಾರುವ ಆನೆ’ ಕೃತಿಯು ಬೇಲೂರು ರಘುನಂದನ್ ಅವರ ಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬೊಳುವಾರು ಮಹಮ್ಮದ್ ಕುಂಞ ಅವರು, `ಮಕ್ಕಳ ಪಾಲಿನ ಪದಕೋಶ ಮಿತವಾದದ್ದು. ಅವರ ಸಂತಸದ ಪರಿಸರ ಕೇವಲ ಅವರ ಸುತ್ತಮುತ್ತಲಿನದ್ದು. ಅವರ ಗ್ರಹಣ ಶಕ್ತಿಗೆ ಎಟುಕುವ ವಾಸ್ತವಿಕ ಪ್ರಪಂಚ ಆಕರ್ಷಕವಾಗಿ ಕಾಣಿಸುವಂತೆ ಮಾಡಬಲ್ಲ ಸಾಹಿತ್ಯ ಒದಗಿಸಿದರೆ ಸಾಕು. ಮಕ್ಕಳು ಕಲಿಯಲು ಶಾಲೆಗೆ ಹೋಗುತ್ತಾರೆ ಎಂಬ ಕಾರಣಕ್ಕೆ ಮೀಸೆ ಬಂದವರ ಜಗತ್ತಿನ ನೀತಿ ಬೋಧನೆಯಾಗಲೀ, ಆಧ್ಯಾತ್ಮವನ್ನಾಗಲೀ, ವಿಜ್ಞಾನ ವಿಷಯಗಳ ಅಪರಿಚಿತ ಶಬ್ಧಗಳ ಹೊರೆಯನ್ನಾಗಲಿ ತುರುಕಬಾರದು ಎಂಬ ಕಾರಂತರ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬರೆಯಲಾದ ಹದಿನಾರು ಕತೆಗಳ ಸಂಗ್ರಹವಿದು. ಈ ಸಂಕಲನದಲ್ಲಿರುವ ಹಸಿವಿನ ಭೂತ ಎಂಬ ಕತೆಯಲ್ಲಿ ಹಂಚಿಕೊಂಡು ತಿಂದರೆ ಜಗತ್ತಿನ ಹಸಿವೆಯನ್ನೆಲ್ಲ ಒದ್ದೋಡಿಸಬಹುದು ಎಂಬ ಆಶಯವನ್ನು ಈ ಸಂಗ್ರಹದ ಎಲ್ಲಾ ಕತೆಗಳಿಗೂ ಅನ್ವಯಿಸಬಹುದು. ಈ ಮಕ್ಕಳ ಕತೆಗಳ ಮೂಲಕ ಕತೆಗಾರರು ಹಂಚಿರುವುದು ಜೀವನ ಪ್ರೀತಿಯನ್ನು. ಇಲ್ಲಿನ ಕತೆಗಳಲ್ಲಿ ಕಾಣಿಸುವ ಎಲ್ಲಾ ಜೀವಿಗಳು ಪರಸ್ಪರ ಪ್ರೀತಿಸುವವರೇ ಮಕ್ಕಳ ಮನಸ್ಸನ್ನು ಅರಳಿಸಬಲ್ಲ, ಮುದಗೊಳಿಸಬಲ್ಲ, ಪರಿಸರ ಪ್ರೇಮವನ್ನೇ ಬೆಳೆಸಬಲ್ಲ ಯೋಚನೆಗಳಿಗೆ ಹಚ್ಚಬಲ್ಲ ಅಪರೂಪದ ಕತೆಗಳು ಇಲ್ಲಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.