ಲೇಖಕ ಹ.ಸ. ಬ್ಯಾಕೋಡ ಮಕ್ಕಳ ಸಾಹಿತ್ಯಕ್ಕೆ ಅರ್ಥಪೂರ್ಣ ಸತ್ವವನ್ನು ತಂದುಕೊಟ್ಟ ಸಾಹಿತಿ. ಇವರು ಪ್ರಸಿದ್ಧ ಛಾಯಾಗ್ರಾಹಕರೂ ಹೌದು. ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಗೆ ಪಾತ್ರರಾಗಿರುವ ಬ್ಯಾಕೋಡ ಕರ್ನಾಟಕದ ಬಯಲುಸೀಮೆ ಪ್ರದೇಶದಲ್ಲಿ ಹುಟ್ಟಿ, ಕರಾವಳಿ ಪ್ರದೇಶದಲ್ಲಿ ಆಡಿ ಬೆಳೆದು, ಮಲೆನಾಡಿನ ಹಸಿರು ಪರಿಸರದ ಒಡನಾಟದಲ್ಲಿದ್ದವರು. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದಾರೆ. ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಪತ್ರಕರ್ತರೂ ಆಗಿರುವ ಬ್ಯಾಕೋಡ ಬಹುಮುಖ ಪ್ರತಿಭೆ. ಬಂಗಾರ, ರಜತ, ಕಂಚಿನ ಪದಕಗಳು, ಗೌರವ ಪ್ರಶಸ್ತಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಶ್ರೀಲಂಕಾ, ಹಾಂಗ್ ಕಾಂಗ್, ಮ್ಯಾಟ್ ಲ್ಯಾಂಡ್, ಆಸ್ಟ್ರೀಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಗ್ರೀಕ್, ಓಕ್ಲಾಹೋಮ್, ಬಾಂಗ್ಲಾದೇಶ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ನಡೆದ ಅಂತರ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅತ್ಯುತ್ತಮ ಪತ್ರಕರ್ತರಾಗಿ ಹೆಸರು ಮಾಡಿರುವ ಇವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಕ್ರೀಡಾ ವರದಿಗಾರಿಕೆ ನೀಡುವ ದಿ.ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ, ಅತ್ಯುತ್ತಮ ಬೆಂಗಳೂರು ಗ್ರಾಮಾಂತರ ವರದಿಗಾರಿಕೆ ನೀಡುವ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಹಾಗೂ ಅತ್ಯುತ್ತಮ ಪರಿಸರದ ಲೇಖನದ ಬರಹಕ್ಕೆ ನೀಡುವ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಸಾಹಿತ್ಯದತ್ತ ವಿಶೇಷ ಒಲವೊಂದಿರುವ ಅವರ ಕೆಲವು ಕೃತಿಗಳು ಸಂಸ್ಕೃತ, ಕೊಂಕಣಿ, ಹಿಂದಿ ಮತ್ತು ಆಂಗ್ಲ ಭಾಷೆಗೆ ಅನುವಾದಗೊಂಡಿವೆ. ಚುಟುಕು ಸಂಕಲನ, ಆರು ಮಕ್ಕಳ ಕಥಾ ಸಂಕಲನ, ಆರು ಮಕ್ಕಳ ಕಾದಂಬರಿ, ಐದು ನಾಟಕಗಳ ಸಂಕಲನ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪುಸ್ತಕ ಬಹುಮಾನ(2013), ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಚಿಣ್ಣರ ಚಂದಿರ- 2011 ಮತ್ತು 2012 ಪ್ರಶಸ್ತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಗುಲಬರ್ಗ ವಿಶ್ವವಿದ್ಯಾಲಯದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘದ ನಾ ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಬೇಂದ್ರೆ ಗ್ರಂಥ ಬಹುಮಾನ, ಅತ್ತಿಮಬ್ಬೆ ಪ್ರತಿಷ್ಠಾನ ಟ್ರಸ್ಟ್ ನ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಸೇರಿದಂತೆ ಹಲವು ಮಹತ್ವದ ಗೌರವ ಪ್ರಶಸ್ತಿಗಳು ಲಭಿಸಿವೆ. ಜೊತೆಗೆ ಇವರ ‘ನಾನೂ ಅಂಬೇಡ್ಕರ್’ ಕೃತಿಗೆ 2020ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.