ಹಾಸ್ಯಪ್ರಬಂಧ ಲೇಖಕ, ಮಾಹಿತಿ ಸಂಗ್ರಾಹಕ, ಸಂಪಾದಕರಾದ ಗುಂಡೂರಾವ್ ಅವರು 1945 ಜೂನ್ 6ರಂದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಹುಟ್ಟಿದರು. ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಸಾಹಿತ್ಯಾಭ್ಯಾಸ, ಬರೆಹದಲ್ಲಿ ತೊಡಗಿಕೊಂಡಿದ್ದಾರೆ. ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಓಡನಾಟದಿಂದ ಸಾಹಿತ್ಯದ ಓದು, ಬರೆಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಬರೆದ ಲೇಖನಗಳು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆ, ಮೊದಲ ಕತೆ ಇಂಚರ ಮಾಸ ಪತ್ರಿಕೆ ಹಾಗೂ ಮೊದಲ ಹಾಸ್ಯಲೇಖನ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡದ್ದು ಮಾರ್ಗರೇಟಿಸಂ V/s ಸೀತಮಿಸಂ.
ಹಲವಾರು ಹಾಸ್ಯ ಲೇಖನಗಳು, ಕಥೆಗಳು ಪ್ರಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 1994ರಲ್ಲಿ ಪ್ರಕಟವಾದ ಮೊದಲ ಹಾಸ್ಯ ಲೇಖನ ಸಂಕಲನ ‘ನಗೆಮಿಂಚು’, ನಂತರ ‘ನಗೆಮಲ್ಲಿಗೆ’, ಅಡ್ಜೆಸ್ಟ್ ಮಾಡ್ಕೋಬೇಕ್ರಿ…., ಅಸಲಿ-ನಕಲಿ, ನನ್ನ ಪ್ರೀತಿಯ ಅಪ್ಪ (ಪ್ರಬಂಧ ಸಂಕಲನ) ಮುಂತಾದವುಗಳು. ಕಥಾಸಂಕಲನ-ಅನಾವರಣ. ಸಂಪಾದಿಸಿದ ಹಾಸ್ಯ ಸಂಕಲನಗಳು – ನಗೆ ಹೂರಣ, ನಾಡಿಗೇರದ ಆಯ್ದ ನಗೆ ಬರಹಗಳು, ದಾಶರಥಿ ದೀಕ್ಷಿತರ ಆಯ್ದ ನಗೆ ಬರಹಗಳು, ಹಾಸ್ಯಾಂಬರ, ಬೆಸ್ಟ್ ಆಫ್ ಸುನಂದಮ್ಮ, ಬೆಸ್ಟ್ ಆಫ್ ಕಸ್ತೂರಿ, ಬೆಸ್ಟ್ ಆಫ್ ನಾಡಿಗೇರ್, ಸಾ.ಕೃ. ಪ್ರಕಾಶ್‌ರವರ ‘ನಗೆಬಾರದೆ ಅರೆಗಳಿಗೆ’ ಮುಂತಾದವುಗಳು.‘ಮಬ್ಬು ಹರಿದಾಗ’ ಕೃತಿಗೆ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (ನವ ಸಾಕ್ಷರರಿಗಾಗಿ), ಬೆಂಗಳೂರು ನಗರ ಪಾಲಿಕೆ ಗಿರಿನಗರ ವಿಭಾಗದಿಂದ ಕೆಂಪೇಗೌಡ ಪ್ರಶಸ್ತಿ, ಅಡ್ಜೆಸ್ಟ್ ಮಾಡ್ಕೋಬೇಕ್ರಿ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುಂಬಾಸ ದತ್ತಿನಿಧಿ ಪ್ರಶಸ್ತಿ, ಬನಶಂಕರಿ ಕ್ಷೇಮಾಭಿವೃದ್ಧಿ ಸಂಘದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಪತ್ರಿಕೆಗಳ ವಿಶೇಷಾಂಕಗಳ ಬಹುಮಾನ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿಯ ಹಲವಾರು ವಾರ್ಷಿಕ ಸಂಕಲನಗಳಲ್ಲಿ ಹಾಸ್ಯಲೇಖನ, ಪ್ರಬಂಧಗಳು ಸೇರ್ಪಡೆಯಾಗಿವೆ.