`ಸ್ವರ್ಗ ನರಕ' ಈ ಕೃತಿಯು ಲೇಖಕ ವೈ.ಬಿ. ಕಡಕೋಳ ಅವರ ಕೃತಿ. ಚಿಣ್ಣರ ಲೋಕದ ಚೆಂದದ ಕಥೆಗಳು ಎಂದು ಲೇಖಕರು ಹೇಳಿಕೊಂಡಿದ್ದಾರೆ. ಇದು ಮಕ್ಕಳ ಕಥಾ ಸಂಕಲನ. ಅಜ್ಜಿ ಹೇಳಿದ ಕತೆಗಳ ಜಾಡಿನಲ್ಲಿ ಇಲ್ಲಿನ ಕತೆಗಳು ಮೂಡಿ ಬಂದಿವೆ. ಸಾಹಿತಿ ಡಾ. ವ್ಹಿ. ಬಿ. ಸಣ್ಣ ಸಕ್ಕರಗೌಡರ ಅವರು ಕೃತಿಗೆ ಮುನ್ನುಡಿ ಬರೆದು ‘ಗ್ರಾಮೀಣ ಬದುಕಿನ ಗಂಧ ಗಾಳಿ ಬಡಿಸಿಕೊಂಡು ಬೆಳೆದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರ ಕತೆಗಳು ವಸ್ತುವಿನ ಕಸುವಿಗೆ ಪುಷ್ಠಿ ನೀಡಿವೆ. ‘ಯಾರು ದುರಾದೃಷ್ಟಶಾಲಿಗಳು? ಕತೆಯಿಂದ ಆರಂಭವಾಗಿ ರೂಪಕ್ಕಿಂತ ಗುಣಮುಖ್ಯ ದವರಗೆ 30 ಕತೆಗಳು ಸುಂದರವಾಗಿ ಅರಳಿವೆ. ಚಿಣ್ಣರಲೋಕದ ಕತೆ ಬರೆಯಲು ಸ್ಫೂರ್ತಿ ತಾಯಿ ಹಾಗೂ ಅಜ್ಜಿಯರು. ಅವರು ಕತೆಗಾರರು ಚಿಕ್ಕವರಿದ್ದಾಗ ಹೇಳಿದ ಕತೆಗಳಿಗೆ ಸೃಜನಶೀಲ ಬೆಸುಗೆ ಹಾಕಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಗ್ರಾಮೀಣ ಬದುಕಿನ ವಿಷಯ ವಸ್ತು ಆಯ್ದುಕೊಂಡು ಹವಳದಂತೆ ಪೊಣಿಸಲು ಪ್ರಯತ್ನಿಸಿದ್ದಾರೆ. ಕಡಕೋಳ ಅವರು ವೃತ್ತಿ ಜೀವನದ ಜೊತೆಗೆ ಕತೆಯನ್ನು ಬರೆಯುತ್ತ ಚಿಣ್ಣರಲೋಕಕ್ಕೂ ಹತ್ತಿರವಾಗಿರುವದು ನಿಜವಾಗಲೂ ಹೆಮ್ಮೆ ಪಡುವ ವಿಚಾರ. ಆರಂಭದ ಕತೆ ‘ಯಾರು ದುರಾದೃಷ್ಟ ಶಾಲಿಗಳು?’ ಕತೆ ಮೌಢ್ಯತೆಯ ಪರಾಕಾಷ್ಠೆಯನ್ನು ಬಿಂಬಿಸುತ್ತದೆ. ‘ಸ್ವರ್ಗನರಕ’ ಕತೆಯಲ್ಲಿ ‘ತಿಮ್ಮ’ ಎಂಬ ಬಾಲಕ ತಾಯಿ ಮಾತಿನಿಂದ ಪರಿವರ್ತನೆಯಾದ ಅಂಶ ಕಂಡುಬರುತ್ತದೆ. ಸ್ವರ್ಗದ ಕಲ್ಪನೆ ಬೆನ್ನುಹತ್ತಿದ ಬಾಲಕ ಉಡಾಪೆ ಆದರೆ ತಪಸ್ಸು ಮಾಡಲು ನಿರ್ಧರಿಸುತ್ತಾನೆ. ಆಗ ದೇವರು ಪ್ರತ್ಯಕ್ಷನಾಗಿ ಇದು ದೊಡ್ಡ ಪ್ರಶ್ನೆ ಅಲ್ಲ ಇದನ್ನು ನಿಮ್ಮ ಊರಿನಲ್ಲಿ ಮೂಲಿಮನಿ ಸಂಗಮ್ಮ ಪರಿಹರಿಸುವಳು ಹೋಗಿ ಅವಳನ್ನು ಕೇಳು ಎನ್ನುತ್ತಾನೆ. ಆಗ ಆ ಮುದುಕಿಯಿಂದ ಸ್ವರ್ಗನರಕದ ಅರ್ಥ ತಿಳಿದು ಒಳ್ಳೆಯ ಮನುಷ್ಯನಾಗಿ ಬದುಕುತ್ತಾನೆ. ಕತೆ ಓದುತ್ತ ಹೊದಂತೆ ಕುತುಹಲ ಕೆರಳಿಸುತ್ತದೆ. ಆದರ್ಶದ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಈ ಕತೆ ತಕ್ಕಮಟ್ಟಿನ ಯಶಸ್ಸು ಸಾಧಿಸಿದೆ ‘ನಗುಸುಖದ ಬಾಳು’ ಕತೆ ಬಡತನ ಶ್ರೀಮಂತಿಕೆಯ ವ್ಯತ್ಯಾಸಗಳನ್ನು ತಿಳಿಸುತ್ತದೆ. ಬಡವನ ಪ್ರೀತಿ ತುಂಬಿದ ನಡೆ-ನುಡಿಗಳು, ಶ್ರೀಮಂತನ ದರ್ಪ, ಕಟುಕ ಭಾವನೆಗಳ ಅಂತರವನ್ನು ತಿಳಿಸುತ್ತದ್ದೆ. ‘ಮಾತೆಯ ಮೌಲ್ಯ’ ಒಂದು ಸುಂದರ ಕುಟುಂಬದಲ್ಲಿ ತಾಯಿ ಪಾತ್ರ ಎಷ್ಟು ಇರುತ್ತದೆ ಎನ್ನುವದನ್ನು ಎತ್ತಿಹೇಳುವ ಪ್ರಯತ್ನ ಈ ಕತೆಯಲ್ಲಿ ಅಡಗಿದೆ. ‘ದುರಾಸೆಯ ಫಲ’ ಕತೆಯಲ್ಲಿ ಐತಿಹಾಸಿಕ ಘಟನೆಯ ಲೇಪನ, ಉಪದೃಷ್ಟಾಂತಗಳ ಬಳಕೆ ಕತೆಯ ವೇಗಕ್ಕೆ ಒಪ್ಪಿತವಾಗಿವೆ. ಬಳಸಿದ ಭಾಷೆ ಸರಳ ಸುಂದರವಾಗಿದೆ. ‘ರೂಪಕ್ಕಿಂತ ಗುಣಮುಖ್ಯ’ ಕತೆಯಲ್ಲಿ ಸೌಂದರ್ಯ ಪ್ರಜ್ಞೆಯ ಅಹಂಕಾರವನ್ನು ಕೀಟಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಹೀಗೆ ವೈ.ಬಿ.ಕಡಕೋಳ ಅವರ 30 ಕತೆಗಳು ಬಾಲರ ಬುದ್ದಿ ಮತ್ತೆಗೆ ಅನುಗುಣವಾಗಿ ಸರಳ ಭಾಷೆಯಲ್ಲಿ ರಚಿತವಾಗಿವೆ. ಗ್ರಾಮೀಣ ಸೊಗಡು ಕತೆಯಲ್ಲಿ ಅಲ್ಲಲ್ಲಿ ಪ್ರಯೋಗವಾಗಿ ತಕ್ಕ ಮಟ್ಟಿನ ಯಶಸ್ಸಿಗೆ ಕಾರಣವೆನಿಸಿದೆ. ಮಕ್ಕಳ ದೃಷ್ಟಿಯಿಂದ ನೋಡಿದಾಗ ಉತ್ತಮ ಕತೆಗಳು ಎಂದು ಎದ್ದುಕಾಣುತ್ತವೆ. ಅಲ್ಲಲ್ಲಿ ಇಲ್ಲಿನ ಕತೆಗಳಲ್ಲಿ ವೈಚಾರಿಕ ಅಂಶಗಳು, ಆದರ್ಶ, ತತ್ವ, ಸಿದ್ಧಾಂತ, ಸಿದ್ದ ಸೂತ್ರಗಳು ಕತೆಯ ರಾಶಿಯಲ್ಲಿ ಹೆರಳವಾಗಿ ಹೊಂದಿಕೆಯಾಗಿ ಕತೆಯ ಅಂದವನ್ನು ಹೆಚ್ಚಿಸಿ ಸುಂದರವೆನಿಸಿವೆ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.