ಕವಿ, ಲೇಖಕ, ಕಥೆಗಾರ ಬೇಲೂರು ರಘುನಂದನ್ ಅವರು ಮಕ್ಕಳಿಗಾಗಿ ಬರೆದ ಕಥಾಸಂಕಲನ ‘ನಿಸರ್ಗ ಮತ್ತು ಗುಬ್ಬಚ್ಚಿ’. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಹಿರಿದು. ಪುಟ್ಟ ಮಕ್ಕಳ ನಿರ್ಮಲ ಮನಸ್ಸೆಂಬ ಹಸನಾದ ನೆಲದಲ್ಲಿ ಪುಟ್ಟ ಪುಟ್ಟ ಪುಟಾಣಿ ಕತೆಗಳೆಂಬ ಬೀಜವನ್ನು ಬಿತ್ತುತ್ತಿರುವ ಬೇಲೂರು ರಘುನಂದನ್ ಪ್ರಯೋಗಶೀಲ ಸಾಹಿತಿ ಎನ್ನುತ್ತಾರೆ. ಡಾ. ಮಲರ್ ವಿಳಿ.
ನಿಸರ್ಗ ಮತ್ತು ಗುಬ್ಬಚ್ಚಿ ಎಂಬ ಹೆಸರಿನ ಈ ಮಕ್ಕಳ ಕತೆಗಳ ಕಂತೆಯಲ್ಲಿ ಮಕ್ಕಳ ಮನಸಿನ ಭಾವನೆಗಳ ಮಗುವಾಗಿಯೇ ಲೇಖಕರು ವಿಹರಿಸಿದ್ದಾರೆ. ಪರಿಸರ ಪ್ರಜ್ಞೆ, ಸಹನೆ, ಸ್ಪೂರ್ತಿ, ಛಲ, ಗುರಿ, ನಾಡಿನ ಪ್ರೇಮ, ಅನ್ಯೋನ್ಯತೆ, ಒಗ್ಗಟ್ಟು, ಸಮಾನತೆ ಹೀಗೆ ಮುಂತಾದ ಅಂಶಗಳು ಇಲ್ಲಿನ ಕತೆಗಳ ಪೋಷಕ ದ್ರವ್ಯಗಳಾಗಿವೆ. ಮಕ್ಕಳ ಕತೆ ಅಂದೊಡನೆ ನೀತಿಯನ್ನು ತುಂಬುವ ಮತ್ತು ಆದರ್ಶಗಳನ್ನು ಹೇರುವ ದಾರಿಯಲ್ಲಿ ಅನಿವಾರ್ಯವಾಗಿಯೇ ಎಲ್ಲ ಮಕ್ಕಳ ಕತೆಗಾರರು ಇದುವರೆಗೂ ಸಾಗುತ್ತಾ ಬಂದಿದ್ದಾರೆ. ಬೇಲೂರರು ಪೂರ್ಣಪ್ರಮಾಣದಲ್ಲಿ ಮೇಲೆ ಹೇಳಿದ ದಾರಿಯನ್ನು ಮೀರಲು ಸಾಧ್ಯವಾಗದಿದ್ದರೂ ವೈಚಾರಿಕತೆ ಮತ್ತು ವಿಜ್ಞಾನದ ಆಶಯಗಳನ್ನು ಕಟ್ಟಿಕೊಡುತ್ತಲೇ ಈ ಹೊತ್ತಿನ ಮಕ್ಕಳ ಕತೆಗಳು ತೆರೆದುಕೊಳ್ಳಬೇಕಾದ ಸಾಧ್ಯತೆಗಳನ್ನು ತಮ್ಮ ಕತೆಗಳ ಮೂಲಕ ಹೆಣೆಯುತ್ತಾರೆ. ಹಾಗಾಗಿ ಮಕ್ಕಳ ಸಾಹಿತ್ಯದ ಆವರಣದೊಳಗೆ ಈ ಕತೆಗಾರ ವಿಶೇಷ ನೆಲೆಯಲ್ಲಿ ನಿಲ್ಲುತ್ತಾರೆ.
‘ನಿಸರ್ಗ ಮತ್ತು ಗುಬ್ಬಚ್ಚಿ’ ಕಥಾಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿದ್ದು, ಪ್ರತಿಯೊಂದು ಕತೆಗಳೂ ವಿಭಿನ್ನ ವಸ್ತು ಮತ್ತು ವಿಷಯಗಳನ್ನು ಮಂಡಿಸುತ್ತಾ ಸರಳ ನಿರೂಪಣೆಯಲ್ಲಿ ಕತೆಗಳು ಸಾಗುತ್ತವೆ. ನಿಸರ್ಗ ಮತ್ತು ಗುಬ್ಬಚ್ಚಿ ಕತೆ ಪಕ್ಷಿಪ್ರೇಮ, ಮಾವನ ವಾತ್ಸಲ್ಯಗಳನ್ನು ಕಟ್ಟಿಕೊಟ್ಟರೆ, ತಾತನ ಕೋಟು ಕತೆ ಒಬ್ಬ ಅಜ್ಜ ಬೇರೆ ಬೇರೆ ಹಳ್ಳಿಗಳಲ್ಲಿನ ಮಕ್ಕಳಿಗೆ ಉಡುಗೊರೆ ನೀಡುವ ಮೂಲಕ ಮಕ್ಕಳ ಮನಸಿನ ಜೊತೆ ವ್ಯವಹರಿಸುವ ಅಂಶಗಳನ್ನು ತೋರುತ್ತದೆ. ಬಂಗಾರಿ ಕತೆಯು ಪ್ರಾಣಿಗಳಿಗೆ ವಾತ್ಸಲ್ಯವನ್ನು ತೋರುವ ಜೀವಕೇಂದ್ರಿತ ನೆಲೆಯಲ್ಲಿ ನಿಂತರೆ, ಕಳಸಿನಕೆರೆ ಕತೆಯು ಜಾನಪದ ಲೋಕದ ಅನಾವರಣ ಮಾಡುತ್ತಲೇ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ರಂಗಭೂಮಿ, ಅಭಿನಯವನ್ನು ಕುರಿತಂತೆ ಕಿಂದರಿಜೋಗಿ ಹೇಳುತ್ತಾ ಹೋದರೆ ಚಿಂಟು ಪಿಂಟುವಿನ ರಾಕೆಟ್ ಆಟ ಮಕ್ಕಳ ವೈಜ್ಞಾನಿಕ ಪ್ರಜ್ಞೆ ಮತ್ತು ಪ್ರಯೋಗಶೀಲತೆಯ ಮೇಲೆ ಬೆಳಕು ಚೆಲ್ಲುತ್ತದೆ.
©2024 Book Brahma Private Limited.