ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಬಾಲ್ಯದ ಲಹರಿಯನ್ನು ಹರಿಸಿದ್ದು ಕೋಲ್ಜೇನು ಎಂಬ ಶೀರ್ಷಿಕೆಯಲ್ಲಿ ಕೃತಿಯ ಮೂಲಕ ಪರಿಚಯಿಸಿದ್ದಾರೆ. ಕೃತಿಯಲ್ಲಿ ಲೇಖಕರೇ ಹೇಳುವಂತೆ, ಬಾಲ್ಯದ ಸಂಗತಿಗಳು ಹೇಗೆಲ್ಲಾ ವಿಸ್ತರಿಸಿಕೊಂಡಿದೆ ಎಂದು ನನಗೇ ಆಶ್ಚರ್ಯವಾಗುತ್ತದೆ. ಮಕ್ಕಳಾಗಿದ್ದಾಗಿನ ನೆನಪೇ ಒಂದು ರೀತಿಯ ಚೈತನ್ಯವನ್ನೂ ಹುರುಪನ್ನೂ ನೀಡುತ್ತಿರುತ್ತದೆ. ಬಾಲ್ಯದ ಕಿಟಕಿಯನ್ನು ತೆರೆದು ನೋಡುತ್ತಿದ್ದಂತೆಯೇ ಆ ಕಿಟಕಿಯಿಂದ ಬಾಲ್ಯಕ್ಕೆ ಮರಳಿ ಹೊರಳಿಕೊಂಡಂತಾಗುತ್ತದೆ. ಅಂತಹ ಪ್ರವೇಶ ಸಿಕ್ಕರೆ ಬಾಲ್ಯದ ಸಂಗತಿಗಳು ನಮ್ಮ ಕಣ್ಣ ಮುಂದೆ ಬಂದು ಆವರಿಸಿಕೊಳ್ಳುತ್ತವೆ. ಆಗ ಗೆಳೆಯರೊಂದಿಗೆ ಆಡುವ, ಜಲಪಾತದಲ್ಲಿ ಇಳಿಯುವ, ಜೇನಿನ ಗೂಡಿಗೆ ಕೈಹಾಕುವ, ಕಾಡಿನಲ್ಲಿ ಸುತ್ತಾಡುವ, ಪ್ರೀತಿಯ ನಾಯಿಯೊಂದಿಗೆ ಸಂವಾದ ನಡೆಸುವ, ರಾತ್ರಿ ನಡೆಯುವಯಕ್ಷಗಾನದಲ್ಲಿ ಬೆಳಗಿನವರೆಗೂ ನಿದ್ದೆಗೆಟ್ಟು ಕೂತಿರುವ, ಶಾಲೆಯ ಪ್ರೀತಿಯ ಗುರುಗಳೊಂದಿಗೆ ಒಂದಾಗುವ, ಅಪ್ಪ ಅಮ್ಮಂದಿರ ಪ್ರೀತಿಯ ಹೊದಿಕೆಯಲ್ಲಿ ಸುಖಿಸುವ ಏನೇನೋ ಸಂಗತಿಗಳು ಹರಡಿಕೊಳ್ಳುತ್ತವೆ. ಇಂತಹ ಪ್ರವೇಶದ ಮೂಲಕವೇ ಈ ಪುಸ್ತಕವನ್ನು ರೂಪಿಸಿದ್ದೇನೆ. ಇದು ಮಕ್ಕಳದೇ ಲೋಕ. ದಟ್ಟ ಕಾಡಂಚಿನಲ್ಲಿರುವ ಊರೊಂದರಿಂದ ಬಂದ ಹುಡುಗನೊಬ್ಬನ ಕಣ್ಣೋಟದಿಂದಲೇ ಮೂಡಿದುದು. ಇಲ್ಲಿ ಪ್ರೀತಿಯ ಗೆಳೆಯರಿದ್ದಾರೆ, ಅಜ್ಜ ಅಜ್ಜಿಯರಿದ್ದಾರೆ, ವಿವಿಧ ರೀತಿಯ ಹಣ್ಣುಗಳಿವೆ, ಕಾಡು ಪ್ರಾಣಿಗಳ ಓಡಾಟವಿದೆ, ತಿಮ್ಮಜ್ಜನ ಕೋವಿ ಮಾವನ ಸೈಕಲ್ ಎಲ್ಲಾ ಮಾತಾಡಿವೆ, ಮರಗಳಿಂದ ತುಂಬಿದ ಕಾಡು, ಹಳ್ಳ, ಜೇನುಗಳೆಲ್ಲ ಬಾಬಾ ಎಂದು ಕರೆಯುತ್ತ ಮಕ್ಕಳೊಂದಿಗೆ ಒಂದಾಗಿವೆ. ಹಾಗಾಗಿ ಇದೊಂದು ಮಕ್ಕಳ ಪ್ರೀತಿಯ ಲೋಕ ಮತ್ತು ಮಕ್ಕಳೊಂದಿಗೆ ಬೆರೆಯುವ ಹಾಗೂ ಬಾಲ್ಯದ ಸಿಹಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಜೇನಿನ ಪಾಕ ಎಂದೆಲ್ಲ ನನಗೆ ಅನಿಸುತ್ತದೆ ಎಂದಿದ್ದಾರೆ.
©2024 Book Brahma Private Limited.