`ಯಾತ್ರಿ’ ನಾಗಲಕ್ಷ್ಮೀ ಹರಿಹರೇಶ್ವರ ಅವರ ಪ್ರವಾಸಕಥನವಾಗಿದೆ. ನಾನು ಜೀವನದುದ್ದಕ್ಕೂ ಪಯಣಿಸಿದ್ದೇನೆ. ಚಿಕ್ಕಂದಿನಿಂದ ಹಿಡಿದು ಇಂದಿನವರೆಗೂ ಪ್ರಯಾಣಿಸುತ್ತಲೇ ಇದ್ದೇನೆ. ನನ್ನ ತಾಯಿ ನನಗೆ ಯಾವಾಗಲೂ “ನಿನ್ನ ಕಾಲಿನಲ್ಲಿ ಚಕ್ರವಿದೆ ಮಗಳೇ, ನೀನು ಒಂದು ಕಡೆ ಸ್ಥಿರವಾಗಿ ನಿಲ್ಲುವವಳಲ್ಲ” ಎಂದು ತಮಾಷೆ ಮಾಡುತ್ತಿದ್ದರು. ನನ್ನ ಬದುಕೇ ಒಂದು ಸುಂದರ ಪಯಣ. ಕೆಲವೊಮ್ಮೆ ಗೊತ್ತಾದ ಪಯಣ: ಮತ್ತೆ ಕೆಲವೊಮ್ಮೆ ಅದು ಕರೆದುಕೊಂಡು ಹೋದಲ್ಲಿಗೆ ಪಯಣ. ಆ ಊರಿನ, ನೀರಿನ, ಅನ್ನದ ಋಣ ತೀರಿದ ತಕ್ಷಣ ಒಂದು ನಿಮಿಷವೂ ಅಲ್ಲಿರಲು ಬಿಡದೇ ಮತ್ತೆಲ್ಲಿಗೋ ಪಯಣ. ಅಲ್ಲದೆ ನಮ್ಮನ್ನು ಕರೆದೊಯ್ಯದೆ ಹಲವು ಕೆರೆಗಳ ನೀರು ಕುಡಿದ ಅನುಭವವಾಗಿದೆ. ಜ್ಞಾನಾರ್ಜನೆಗಾಗಿ ಕೆಲವು ಪಯಣ, ಧನಾರ್ಜನೆಗಾಗಿ ಮತ್ತೊಂದು ಪಯಣ, ಮಕ್ಕಳಿಗಾಗಿ ಮಗದೊಂದು ಪಯಣ ಹೀಗೆ ಪಯಣದ ಬದುಕು ಹಲವಾರು ಅನುಭವದಿಂದ ಕೂಡಿದೆ. 'ಯಾತ್ರಿ'ಯಲ್ಲಿ ಹಲವಾರು ಘಟನೆಗಳು ಬಿಟ್ಟುಹೋಗಿರಬಹುದು ಅಥವಾ ಸ್ಮರಿಸಲೂ ಮರೆತಿರಬಹುದು. ನನ್ನ ಆರೋಗ್ಯದಲ್ಲಿ ಏರುಪೇರು ಆಗಿರುವ ಕಾರಣದಿಂದ ನನಗೆ ಮರೆವು ಹೆಚ್ಚಾಗಿದೆ. ಕಣ್ಣು ಮತ್ತು ಕಿವಿಗಳು ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ಕಾರಣಗಳು ನೂರಾರು ಆದರೂ ಅದೆಲ್ಲ ಈಗ ಇಲ್ಲಿ ಮುಖ್ಯವಲ್ಲ.
©2024 Book Brahma Private Limited.