ಸಾಹಿತ್ಯ ವಿಮರ್ಶೆ- ಸಂಸ್ಕೃತಿ ಚಿಂತನೆಯ ಮೂಲಕ ಚಿರಪರಿಚಿತರಿರುವ ರಹಮತ್ ತರೀಕೆರೆ ಅವರು ಪ್ರವಾಸ ಪ್ರಿಯರು ಕೂಡ ಹೌದು. ಪ್ರವಾಸ ಅವರ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಪ್ರವಾಸದ ವಿಭಿನ್ನ ಅನುಭವ ಪಡೆಯುವುದಕ್ಕಾಗಿ ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ. ವಿದೇಶಗಳನ್ನೂ ಸುತ್ತಿ ಬಂದಿದ್ದಾರೆ. ಅಂಡಮಾನ್ ದ್ವೀಪಗಳಿಗೆ ಸ್ನೇಹಿತರೊಂದಿಗೆ ಮಾಡಿದ ಪ್ರವಾಸದ ಅನುಭವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಪ್ರವಾಸ ಕಥನದಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ.
’ನನ್ನ ನಾಡಿಗೆ ಸೇರಿದ್ದರೂ, ಮುನಿಸಿಕೊಂಡ ಮಕ್ಕಳಂತೆ ದೂರದ ಕಡಲೊಳಗೆ ನಿಂತಿರುವ ದ್ವೀಪಗಳಲ್ಲಿ ಸುತ್ತಾಡಿದ್ದು, ಜೀವನದೊಂದು ಅಪೂರ್ವ ಅನುಭವ. ಈಗಲೂ ಅಂಡಮಾನ್ ಕನಸಲ್ಲಿ ಬಂದು ಕಾಡುತ್ತದೆ- ಗೆಳೆಯನಂತೆ, ಪ್ರಿಯತಮೆಯಂತೆ, ಚರಿತ್ರೆಯ ಭಾರಹೊತ್ತ ವರ್ತಮಾನದಂತೆ, ಗಾಯಗೊಂಡ ಸಂಗಾತಿಯಂತೆ, ಸಾವನ್ನು ಹಿಮ್ಮೆಟ್ಟಿಸಿ ನಿಂತ ಬಾಳಿನಂತೆ’ ಎಂದು ಲೇಖಕರ ಮಾತಿನಲ್ಲಿ ಬರೆದಿದ್ದಾರೆ.
’ಭಾರತದ ಭೂಪಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇರುವ ರೀತಿಯೇ ವಿಚಿತ್ರ. ಜೇನುಹುಟ್ಟಿನಂತೆ ಇಳಿಬಿದ್ದಿರುವ ಅದರ ಮೂರು ಕಡೆ ಆಕಾಶವನ್ನೇ ಕಿತ್ತುತಂದು ಹಾಸಿದಂತಿರುವ ನೀಲಕಡಲು, ಇದರೊಳಗೆ ಮಕ್ಕಳಾಟದ ಕಲ್ಲು ಹರಳುಗಳಂತೆ ಸಾವಿರ ಕಿ.ಮೀ. ಉದ್ದಕ್ಕೆ ಚೆಲ್ಲಿಕೊಂಡಿರುವ ಮಣ್ಣುದಿಬ್ಬಗಳು. ಅಪಾರ ಜಲರಾಶಿಯಲ್ಲಿ, ಒಂದು ಭಾರೀ ಅಲೆ ಬಂದರೆ ಮುಳುಗಿಬಿಡುವಂತೆ ತೋರುವ ಇವು ಕರಗದೆ ಹೇಗಾದರೂ ಉಳಿದಿವೆಯೋ ಎಂದು ಸೋಜಿಗವಾಗುತ್ತದೆ. ದೊಡ್ಡ ದೇಶದ ಸಹವಾಸವೇ ಬೇಡ ಎಂದು ಕಡಲೊಳಗೆ ಜೀವಂತವಾಗಿ ನಿಂತಿರುವ ಪರಿ ಆದರ ಹುಟ್ಟಿಸುತ್ತದೆ’ ಎಂದು ರಹಮತ್ ಅವರು ಬರೆದಿದ್ದಾರೆ.
©2024 Book Brahma Private Limited.