ಡ್ರ್ಯಾಗನ್ಸ್ ಮಹಾಗೋಡೆಯೊಳಗೆ....ಡಾ. ಎಂ.ವೆಂಕಟಸ್ವಾಮಿ ಅವರ ಚೀನಾ ಪ್ರವಾಸ ಕಥನ. ಸಾಹಿತಿ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಎಂ. ವೆಂಕಟಸ್ವಾಮಿ ಅವರು ವೃತ್ತಿಯಿಂದ ಭೂವಿಜ್ಞಾನಿ. ಇವರ ಕತೆ, ಕಾದಂಬರಿ, ವಿಜ್ಞಾನ, ವೈಚಾರಿಕ, ಕಾವ್ಯ ಮತ್ತು ಪ್ರವಾಸ ಕತೆಗಳು ಪ್ರಕಟವಾಗಿವೆ. ಚೀನಾ ದೇಶ ಪ್ರವಾಸ ಮಾಡಿದ ಹಿನ್ನೆಲೆಯಲ್ಲಿ ‘ಡ್ರ್ಯಾಗನ್ಸ್ ಮಹಾಗೋಡೆಯೊಳಗೆ’ ಪ್ರವಾಸ ಕಥನ ಪ್ರಕಟಗೊಂಡಿದೆ. ಇಂದಿನ ಆಧುನಿಕ ಜಗತ್ತನ್ನು ಒಂದು ಜಾಗತಿಕ ಹಳ್ಳಿ ಎಂದು ಕರೆಯಲಾಗುತ್ತದೆ. ಆದರೂ ಕಣ್ಣು ಮತ್ತು ಹೃದಯ ತೆರೆದುಕೊಂಡು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವಾಸ್ತವ ಸಂಗತಿಗಳು ಅರ್ಥವಾಗುತ್ತವೆ. ಚೀನಾ ದೇಶವು 80ರ ದಶಕದವರೆಗೂ ಪ್ರಪಂಚಕ್ಕೆ ಬಲು ದೂರ ಮತ್ತು ನಿಗೂಢವಾಗಿ ಉಳಿದುಕೊಂಡಿತ್ತು. ಅಮೆರಿಕ, ರಷ್ಯಾ ಮತ್ತು ಯುರೋಪ್ ದೇಶಗಳ ಬಗ್ಗೆ ದೊರಕುವಷ್ಟು ಮಾಹಿತಿ ಚೀನಾ ಬಗ್ಗೆ ಕನ್ನಡದಲ್ಲಿ ದೊರಕುವುದಿಲ್ಲ. ವೆಂಕಟಸ್ವಾಮಿಯವರಿಗೆ ಇರುವ ಅಪಾರ ಅನುಭವ, ಜೀವನ ಕುತೂಹಲ ರಹಸ್ಯ, ಸಂಶೋಧನಾ ದೃಷ್ಟಿ, ಪರಿಶೀಲನಾಶಕ್ತಿ ಮತ್ತು ವೈಜ್ಞಾನಿಕ ಹಿನ್ನೆಲೆಯಿಂದ ಈ ಕೃತಿಯನ್ನು ಅಪರೂಪವಾಗಿ ಅನಾವರಣಗೊಳಿಸಿದ್ದಾರೆ. ಒಟ್ಟಿನಲ್ಲಿ, ಕನ್ನಡದಲ್ಲಿ ಚೀನಾ ಬಗ್ಗೆ ಇದೊಂದು ಮಹತ್ತರವಾದ ಪ್ರವಾಸ ಕಥನವಾಗಿದೆ ’ ಎಂದು ಪ್ರಶಂಸಿಸಿದ್ದಾರೆ.
ಮನುಷ್ಯನಿಗೆ ಅನುಭವಗಳು ಬಹಳ ಮುಖ್ಯ. ``ದೇಶ ನೋಡು ಕೋಶ ಓದು' ಎನ್ನುತ್ತದೆ ಒಂದು ನಾಣ್ಣುಡಿ. ಲೇಖಕರು ಚೀನಾ ದೇಶದಲ್ಲಿ ಒಂದು ತಿಂಗಳು ಕಾಲ ಪ್ರವಾಸ ಮಾಡಿದ್ದರಿಂದ ಈ ಪ್ರವಾಸ ಕತೆ ಸೃಷ್ಟಿಯಾಗಿದೆ. ಸುಧಾ ವಾರ ಪತ್ರಿಕೆಯಲ್ಲಿ ಕೆಲವು ಭಾಗಗಳು ಮತ್ತು ಅಗ್ನಿ ವಾರ ಪತ್ರಿಕೆಯಲ್ಲಿ ಈ ಪ್ರವಾಸ ಕತೆ ಸಂಪೂರ್ಣವಾಗಿ ಪ್ರಕಟಗೊಂಡಿದೆ. ಪ್ರಪಂಚದಲ್ಲಿ ಚೀನಾ ದೇಶಕ್ಕೆ ಒಂದು ವಿಶೇಷ ಪರಂಪರೆ ಇದೆ. ತೀರಾ ಇತ್ತೀಚಿನವರೆಗೂ ಚೀನಾ ದೇಶ ಅನೇಕ ವಿಧಗಳಲ್ಲಿ ನಿಗೂಢ, ಪ್ರಪಂಚಕ್ಕೆ ಬಲು ದೂರವಾಗಿ ಉಳಿದುಕೊಂಡಿತ್ತು. ಅಂತಹ ದೇಶದಲ್ಲಿ ಹೆಜ್ಜೆ ಇಟ್ಟು ಓಡಾಡುವ ಮತ್ತು ಹೃದಯ ಬಿಚ್ಚಿ ಮಾತನಾಡುವ ಅವಕಾಶ ಲೇಖಕರಿಗೆ ಕೇಂದ್ರ ಸರಕಾರದಿಂದ ದೊರಕಿತ್ತು. ಚೀನಾ ತನ್ನ ಹಳೆಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಇಂದಿನ ಆಧುನಿಕ ಜಗತ್ತಿನ ಜಾಗತೀಕರಣದೊಂದಿಗೆ ದೃಢವಾದ ಹೆಜ್ಜೆಗಳನ್ನಿಟ್ಟು ಸಾಗುತ್ತಿದೆ. ಕೇವಲ ಮೂರು ನಾಲ್ಕು ದಶಕಗಳ ಹಿಂದೆ ಚೀನಾ ಜನರು ``ಗ್ರೇಟ್ ವಾಲ್ ಆಫ್ ಚೀನಾ' ಮಹಾಗೋಡೆಯೊಳಗೆ ಕಣ್ಣುಮುಚ್ಚಿ ಮುದುಡಿ ಕುಳಿತಿದ್ದ ಕಾರಣ ಪ್ರಪಂಚ ಅವರನ್ನು ಪೂರ್ವದ ರೋಗಸ್ಥ ಮನುಷ್ಯ (sick man of east) ಎಂದು ಹಂಗಿಸುತ್ತಿತ್ತು. ಆದರೆ ಕೇವಲ ಮೂರು ನಾಲ್ಕು ದಶಕಗಳಲ್ಲಿ ತನ್ನ ಸ್ಪಷ್ಟ ಅಭಿವೃದ್ಧಿಯ ಮುನ್ನೋಟ, ಸರಕಾರ ಮತ್ತು ಜನರ ಶ್ರಮ ಮತ್ತು ಆತ್ಮವಿಶ್ವಾಸದಿಂದ ಇಂದು ‘ದೊಡ್ಡಣ್ಣ’ಎಂದು ಕರೆಯಿಸಿಕೊಂಡು ಅಮೆರಿಕದ ಅಸೂಯೆ ಮತ್ತು ಈರ್ಷೆಗೆ ಕಾರಣವಾಗಿದೆ. ಚೀನಾ ದೇಶದ ಬಗ್ಗೆ ಕನ್ನಡದಲ್ಲಿ ಯಾವುದೇ ಮಾಹಿತಿ ಕಡಿಮೆ ಎನ್ನಬಹುದು. ಲೇಖಕರು ಚೀನಾ ದೇಶದ ಬಗ್ಗೆ ಸಾಕಷ್ಟು ಪೂರ್ವ ಇತಿಹಾಸದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಪ್ರವಾಸದ ವೇಳೆ ಎಲ್ಲವನ್ನೂ ಭಾರತದ ಜೊತೆಗೆ ಹೋಲಿಸುವ ಕೆಲಸವನ್ನು ಮಾಡಿದ್ದಾರೆ. ಒಟ್ಟಿನಲ್ಲಿ, ಉಕ್ಕು ಗೋಡೆಯ ಒಳಗಿನ ನಿಗೂಢ ಮಾಹಿತಿಯ ಜೊತೆಗೆ ಅದರ ಇತಿಹಾಸ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ವ್ಯವಸ್ಥೆ, ಕೃಷಿ, ಆಧುನಿಕ ಅಭಿವೃದ್ಧಿ-ಬೆಳವಣಿಗೆ, ಜನರ ಪ್ರಸ್ತುತ ಸಮಸ್ಯೆಗಳು... ಹೀಗೆ ಎಲ್ಲವನ್ನು ಕೃತಿಯು ಒಳಗೊಂಡಿದೆ.
ಪುಸ್ತಕ ಪರಿಚಯ ಹೊಸತು-2009 ಜೂನ್
ಚಂದ್ರನಲ್ಲಿ ನಿಂತು ಭೂಮಿಯ ಕಡೆಗೆ ನೋಡಿದರೆ ಚೀನಾದ ಮಹಾಗೋಡೆಯನ್ನು ಗುರುತಿಸಬಹುದಂತೆ ! ತೀರ ಇತ್ತೀಚಿನವರೆಗೂ ಹೆಚ್ಚು ಕಡಿಮೆ ಪ್ರಪಂಚಕ್ಕೆ ನಿಗೂಢವಾಗಿದ್ದ ಚೀನಾ ತನ್ನ ಹಳೆಯ ವ್ಯವಸ್ಥೆಗಳನ್ನು ಕೊಡವಿ ಇಂದಿನ ಜಾಗತೀಕರಣಕ್ಕೆ ತೆರೆದುಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಾ ಮುನ್ನಡೆದಿದೆ. ಯೂರೋಪ್ ಅಮೆರಿಕಾಗಳಿಂದ ಅಧ್ಯಾಪಕರನ್ನು ಕರೆಸಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದೆ. ಅಮೆರಿಕಾ ಕಡೆ ನೋಡುತ್ತಿದ್ದವರು ಈಗ ಚೀನಾದತ್ತ ನೋಡುತ್ತ ಅವರು ಒಲಂಪಿಕ್ಸ್‌ನಲ್ಲಿ ಗಳಿಸಿದ ಚಿನ್ನವನ್ನು ಲೆಕ್ಕ ಹಾಕುತ್ತಿದ್ದಾರೆ. ಭೂವಿಜ್ಞಾನಿ ಶ್ರೀ ವೆಂಕಟಸ್ವಾಮಿ ತರಬೇತಿಗಾಗಿ ಚೀನಾಕ್ಕೆ ಭೇಟಿ ನೀಡಿದ್ದು, ಬಹಳ ಆಸ್ಥೆಯಿಂದ ಅಲ್ಲಿಯ ಮಾಹಿತಿ ನೀಡಿದ್ದಾರೆ.
©2024 Book Brahma Private Limited.