'ಊರು-ಟೂರು’ ಸಂಜೋತಾ ಪುರೋಹಿತಾ ಅವರ ಪ್ರವಾಸ ಲೇಖನಗಳ ಸಂಗ್ರಹವಾಗಿದೆ. ಈ ಸಂಕಲನದ ಬಗ್ಗೆ ವಿವರಿಸುತ್ತಾ 'ಊರು ಬಿಟ್ಟು ಹಾರಿ ಬಂದಿರುವ ನಾನು ಅಮೇರಿಕಾದಲ್ಲಿ ಗುಬ್ಬಚ್ಚಿಯಂತೆ ಅಲೆಯುತ್ತಿರುತ್ತೇನೆ. ಇದು ನನಗೆ ಸಂತೃಪ್ತಿ ನೀಡುವ ಕಾಯಕ. ಪ್ರವಾಸದಿಂದ ಮರಳಿ ಬಂದು ದಣಿವೆಂದು ಕಾಲು ಚಾಚಿ ಮಲಗುವಾಗಿನ ಸುಖ ಬೇರೊಂದಿಲ್ಲ ಎಂದು ನನಗನ್ನಿಸುತ್ತದೆ. ಬಾಲ್ಯ, ಓದು, ಸೈನ್ಸ್ ಇಂಜಿನಿಯರಿಂಗ್ ಪದವಿ, ಜವಾಬ್ದಾರಿ ಎಂದು ಕಳೆದು ಹೋಗಿದ್ದ ನನಗೆ ಕೆಲಸದ ಮೂಲಕ ಬೇರೆ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿದ್ದು ಸುಕೃತವೇ. ಇಲ್ಲದೇ ಇದ್ದಿದ್ದರೆ ಈ ತಿರುಗಾಟದ ಆಸಕ್ತಿ ನನ್ನೊಳಗೆ ಬೆಳೆಯುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಮನೆಯವರನ್ನು, ಅಮ್ಮನನ್ನು ಬಿಟ್ಟು ದೂರದೇಶಕ್ಕೆ ಬಂದಾಗ ಹುಟ್ಟುವ ಅನಾಥ ಭಾವವನ್ನು, ಒಂಟಿತನವನ್ನು ಕಳೆಯಲು ಸಹಾಯ ಮಾಡಿದ್ದು ಈ ತಿರುಗಾಟ. ಈ ತಿರುಗಾಟದಲ್ಲಿ ನಾನು ಹಲವು ವಿಸ್ಮಯಗಳನ್ನು ಕಂಡಿದ್ದೇನೆ. ಅಮೇರಿಕಾದಲ್ಲಿರುವ ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳಲ್ಲಿ ಹನ್ನೊಂದನ್ನು ನೋಡಿದ್ದೇನೆ. ಮಧ್ಯರಾತ್ರಿಯಲ್ಲಿ ನಾದರ್ನ್ ಲೈಟ್ಸ್ ಆಕಾಶದಲ್ಲಿ ಹೊಳೆಯುವುದನ್ನು ಕಂಡಿದ್ದೇನೆ. ಎರಡು ಸಾವಿರ ವರ್ಷಗಳಿಗಿಂತಲೂ ಹಳೆಯದಾದ ಮರವನ್ನು ನೋಡಿ ಬೆರಗಾಗಿದ್ದೇನೆ. ಬಣ್ಣವಿಲ್ಲದ ನದಿಯ ನೀರು ಹಸಿರಾಗುವುದಕ್ಕೆ ಸಾಕ್ಷಿಯಾಗಿದ್ದೇನೆ. 18000 ಎಕರೆಗಳಷ್ಟು ದೊಡ್ಡದಾದ ಕಾಡು ಬೆಂಕಿಯಲ್ಲಿ ಸುಟ್ಟು ಹೋಗಿರುವುದನ್ನೂ, ಅಳಿದುಳಿದ ಮರಗಳ ತುದಿಯಲ್ಲಿ ಮತ್ತೆ ಚಿಗುರು ಹುಟ್ಟಿರುವುದನ್ನೂ ನೋಡಿ ಸ್ಪೂರ್ತಿಗೊಂಡಿದ್ದೇನೆ. ಅನ್ಯ ನೆಲದಲ್ಲಿ ನಮ್ಮ ದೇವರನ್ನು, ದೇವಸ್ಥಾನವನ್ನು ಕಂಡು ಭಾವಪರವಶಳಾಗಿದ್ದೇನೆ. ಭೂಮಿಯ ಆಳದಲ್ಲಿರುವ ಕಣಿವೆಯೊಳಗೆ ಸುತ್ತಾಡಿದ್ದೇನೆ. ಹೆಲಿಕಾಪ್ಟರಿನಲ್ಲಿ ಕೂತು ನಗರದ ಥಳುಕನ್ನು ಕಣ್ಣು ತುಂಬಿಸಿಕೊಂಡಿದ್ದೇನೆ. ಚಳಿಯಲ್ಲಿ ಹಿಮಗಟ್ಟಿದ ಕೆರೆಯ ಮೇಲೆ ಓಡಾಡಿದ್ದೇನೆ. ಈ ಎಲ್ಲವೂ ನನ್ನ ಪಾಲಿನ ಅದ್ಭುತಗಳು. ಇವೆಲ್ಲವನ್ನು ದಾಖಲಿಸುವ ಸಣ್ಣ ಪ್ರಯತ್ನವೇ ಈ 'ಊರುಟೂರು' ಸಂಗ್ರಹ ಎಂದಿದ್ದಾರೆ ಸಂಜೋತಾ ಪುರೋಹಿತಾ.
©2024 Book Brahma Private Limited.