ನಿಡುಗಾಲದ ಸಂಬಂಧದ ಹಿನ್ನೆಲೆಯಲ್ಲಿ ನರಹಳ್ಳಿಯವರ ಜೊತೆ ಮೂರು ದಿನ ಒಟ್ಟಿಗೇ ಕಳೆಯುವ ಸಂದರ್ಭದಲ್ಲಿ ಕಂಡುಂಡ ಅನುಭವಗಳ ಮೂಲಕ ನರಹಳ್ಳಿಯವರ ವ್ಯಕ್ತಿತ್ವ ಇಲ್ಲಿ ಅನಾವರಣಗೊಳಿಸಿದ್ದಾರೆ. ಆ ಮೂಲಕ ಗೆಳೆತನ, ಸಂಬಂಧಗಳು, ಗ್ರಾಮೀಣ ಬದುಕು, ನಗರ ಜೀವನ, ಧರ್ಮ, ರಾಜಕೀಯ, ಶಿಕ್ಷಣ ವ್ಯವಸ್ಥೆ, ವೈಯಕ್ತಿಕ ಬದುಕಿನ ಹೋರಾಟ – ಹೀಗೆ ಅನೇಕ ಸಂಗತಿಗಳು ಇಲ್ಲಿವೆ. ಲೇಖಕರು ತಮ್ಮ ಸೂಕ್ಷ್ಮನೋಟದ ಮೂಲಕ ಒಂದು ಕಾಲಘಟ್ಟದ ಬದುಕನ್ನು ಹೊಸ ಬಗೆಯಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಇದೊಂದು ಪ್ರವಾಸಕಥನ. ಆದರೆ ಅದು ಬರವಣಿಗೆಯ ಸ್ವರೂಪವಷ್ಟೆ. ನಿಜದಲ್ಲಿ ಇದು ನರಹಳ್ಳಿಯವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಎಂತಲೇ ಹೇಳಬಹುದಾಗಿದೆ.
ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು. ...
READ MORE