ಲೇಖಕಿ ಗೀತಾ ಕುಂದಾಪುರ ಅವರ ಪ್ರವಾಸ ಕಥನ ‘ಕಡಲ್ಗಳ್ಳರ ಸರಹದ್ದಿನಲ್ಲಿ’. ರಷ್ಯಾ ಮತ್ತು ಸ್ಕ್ಯಾಂಡಿನೆವಿಯಾ ಪ್ರವಾಸ ಕೈಗೊಂಡವೇಳೆ ಆದ ಅನುಭವಗಳನ್ನು ಪ್ರವಾಸ ಕಥನದ ರೂಪದಲ್ಲಿ ಹೊರತಂದಿದ್ದಾರೆ.
ಕೃತಿಯಲ್ಲಿ ಜಯಶ್ರೀ ದೇಶಪಾಂಡೆಯವರು ಮುನ್ನುಡಿಯ ಮಾತುಗಳನ್ನು ಬರೆದಿದ್ದು, ಪ್ರವಾಸ ಪ್ರಿಯರು ತಮ್ಮೊಡನೆ ಸಂಗ್ರಹಿಸಿ ತರುವ ಒಂದು ಅಪರಿಮಿತ ಸಂಪತ್ತೆಂದರೆ ಅನುಭವ. ನಮ್ಮಲ್ಲಿ 'ಅನುಭವಗಳ ಗಣಿ' ಎಂಬ ನುಡಿಗಟ್ಟು ಇದೆ. ಯಾಕೆಂದರೆ ಅನುಭವ ಎನ್ನುವುದು ಗಣಿಯಷ್ಟೇ ಆಳ, ದೀರ್ಘ ಮತ್ತು ವಿಸ್ತಾರವೂ ಆಗಿರಲು ಸಾಧ್ಯವಿದೆ. ಈ ವಿಸ್ತಾರದಲ್ಲಿ ನಾವು ಏನನ್ನಾದರೂ ತುಂಬಿಕೊಳ್ಳಬಹುದಾದ ಸಾಧ್ಯತೆಗಳೂ ಅಗಣಿತ. ಅದಕ್ಕೆ ಗಣಿಯಂತೆ ಎಲ್ಲೋ ಒಂದೆಡೆ ಮುಕ್ತಾಯವೂ ಇರಲಾರದು. ಹೀಗಿರುವಾಗ ನಮ್ಮ ಭೂಮಿಯ ಉತ್ತರ ಗೋಲರ‍್ಧದ ಕೆಲವು ನಾಡುಗಳಿಗೆ ತೆರಳಿ, ಅಲ್ಲಿನ ಇಂಚಿಂಚನ್ನೂ ಸುತ್ತಾಡಿ ಗೀತಾ ಅವರು ಉಡಿಯಲ್ಲಿ ತುಂಬಿಕೊಂಡು ಬಂದ ಅನುಭವವೂ ಖಂಡಿತ ಅಪಾರವಾಗಿಯೇ ಇದೆ ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಹದಿನೈದು ದಿನಗಳ ಪ್ರವಾಸದಲ್ಲೇ ಹದಿನೈದು ವರ್ಷಗಳ ಓಡಾಟದಷ್ಟು ಬೆರಗನ್ನು ಕಂಡು ಅದನ್ನು ಮನಸ್ಸು ಎದೆಗಳಲ್ಲಿ ಗ್ರಹಿಸಿ ಕಾಪಿಟ್ಟುಕೊಂಡು ಬಂದ ಬರಹದ ಇನ್ನೊಂದು ಶಕ್ತಿಯೆಂದರೆ ಪ್ರತಿಯೊಂದು ದೇಶದ ಇತಿಹಾಸದ ವಿಭಿನ್ನ ಕಥೆಗಳು, ಭೌಗೋಳಿಕ ವೈವಿಧ್ಯ, ರಾಜಕೀಯ ವಿಶೇಷ, ಆರ್ಥಿಕ ಸ್ಥಿತಿಗತಿ, ಅರಣ್ಯಸಂಪತ್ತು ಸಾಂಸ್ಕೃತಿಕ ಪರಂಪರೆ, ಜನಮನದ ಇರಸರಿಕೆ, ಪ್ರಚಲಿತ ವಾತಾವರಣ, ಹವಾಮಾನ, ಹೀಗೆ ಯಾರೇ ಪ್ರವಾಸಕ್ಕೆ ಹೊರಟರೂ ಅವರಿಗೆ ಬೇಕಾಗಬಹುದಾದ ಒಂದೊಂದೂ ವಿವರಗಳ ದಾಖಲಿಸಿ ಒಂದು ಪರ್ಫೇಕ್ಟ್ ಪ್ರವಾಸೀ ಲೇಖನದ ಚೌಕಟ್ಟನ್ನು ಅಳವಡಿಸಿ ಬರೆದಿರುವ ಪುಸ್ತಕವಿದು. ಪುಸ್ತಕ 'ಕಡಲ್ಗಳ್ಳರ ಕಾಲುದಾರಿ- ರಷ್ಯಾ ಮತ್ತು ಸ್ಕ್ಯಾಂಡಿನೇವಿಯ ಪ್ರವಾಸ ಕಥನ' ಅಲ್ಲಿಗೆ ಹೋಗ ಬಯಸುವವರಿಗೆ ಒಂದು ಅಮೂಲ್ಯ ಉಡುಗೊರೆಯಾದೀತು ಎಂದು ನನ್ನ ಅಭಿಪ್ರಾಯ ಎಂದಿದ್ದಾರೆ.
©2024 Book Brahma Private Limited.