ಅಲೆಮಾರಿಯ ಹೆಜ್ಜೆಗಳು (ಪ್ರವಾಸ ಕಥನ)

Author : ಎಂ. ವೆಂಕಟಸ್ವಾಮಿ

Pages 205

₹ 50.00




Year of Publication: 2001
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

``ಅಲೆಮಾರಿಯ ಹೆಜ್ಜೆಗಳು'' ಎಂಬುದು ಲೇಖಕ ಡಾ. ಎಂ. ವೆಂಕಟಸ್ವಾಮಿ ಅವರ ಪ್ರವಾಸಕಥನ ಸಾಹಿತಿ ಡಾ. ಲಕ್ಕಪ್ಪಗೌಡರು ಕೃತಿಗೆ ಮುನ್ನುಡಿ ಬರೆದು ‘ ಎಂ.ವೆಂಕಟಸ್ವಾಮಿ ಅವರು ಭೂವೈಜ್ಞಾನಿಕ ಸರ್ವೇಕ್ಷಣ  ಸಂಸ್ಥೆಯ ಭೂವಿಜ್ಞಾನಿಗಳಾಗಿ ದಶಕಗಳ ಕಾಲದಿಂದ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಹಲವಾರು ಕಡೆ ತಮ್ಮ ಪದನಿಮಿತ್ತ ಕಾರ್ಯ ನಿರ್ವಹಿಸಿರುವ ಇವರು ತಾವು ಪರಿಚಯಿಸಿದ ಮತ್ತು ದರ್ಶಿಸಿದ ಪ್ರದೇಶಗಳನ್ನು ಒಬ್ಬ ವಿಜ್ಞಾನಿಯ ಕಣ್ಣಿನಿಂದ ಹಾಗೂ ಪ್ರವಾಸಿಯ ಕಣ್ಣಿನಿಂದ ಅವಲೋಕಿಸಿ ಅಲ್ಲಿನ ಸ್ವಾರಸ್ಯಗಳನ್ನು ಈ ಕೃತಿಯಲ್ಲಿ ಕುಂಚಿಸಿದ್ದಾರೆ. ನಮ್ಮಲ್ಲಿ ಹಲವಾರು ಶ್ರೇಷ್ಠ ಪ್ರವಾಸಕಥನಗಳು ಪ್ರಕಟವಾಗಿವೆ. ಆದರೆ ಈ ಪ್ರವಾಸಕಥನ ವಿಶಿಷ್ಠ ರೀತಿಯದು. ಬೇರೆಬೇರೆ ಪ್ರದೇಶಗಳ ಸೌಂದಯ೵ ಮತ್ತು ಸಾಂಸ್ಕೃತಿಕ ವೀಕ್ಷಣೆಯ ಉದ್ದೇಶದಿಂದ ಈ ಲೇಖಕರು ಅಲ್ಲಿ ಪ್ರವಾಸ ಮಾಡಿಲ್ಲ. ಇವರ ಪ್ರವಾಸ ಸರಳ ಸುಲಭವಾದುದಲ್ಲ, ಶ್ರೇಷ್ಠ, ಸಹನಶೀಲತೆ, ಸಂಶೋಧನಾದೃಷ್ಟಿ, ವಾಸ್ತವ ಪರಿಶೀಲನಾ ಪ್ರಜ್ಞೆ, ಹಾಗೂ ಅನುಭವ ಪ್ರಾಮಾಣ್ಯಗಳನ್ನು ಗರ್ಭೀಕರಿಸಿಕೊಂಡ ವಸ್ತುನಿಷ್ಠ ಬರವಣಿಗೆ. ಆದ್ದರಿಂದ ಈ ಕೃತಿಯಲ್ಲಿ ಇತಿಹಾಸಕಾರನ ವಾಸ್ತವಪ್ರಜ್ಞೆ, ವಿಜ್ಞಾನಿಯ ಅನ್ವೇಷಣೆ ದೃಷಿ, ಜೀವನ ಕುತೂಹಲಿಯ ರಹಸ್ಯ, ಶೋಧಕ ಪ್ರವೃತ್ತಿ, ಸೌಂದರ್ಯ ಆರಾಧಕನ ಸೃಜನಶೀಲ ಪ್ರಜ್ಞೆ, ಚಿತ್ರಕಾರನ ಕುಶಲ ಕುಸುರಿ ಮುಂತಾದವು ಇಲ್ಲಿ ಮೇಳೈಸಿವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಎಂ. ವೆಂಕಟಸ್ವಾಮಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು,  ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು.  ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...

READ MORE

Excerpt / E-Books

ಕ್ರಿ.ಶ 1851.ರಲ್ಲಿ ಸ್ಥಾಪನೆಗೊಂಡಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆ (ಜಿ.ಎಸ್.ಐ ಇಡೀ ಪ್ರಪಂಚದಲ್ಲಿಯೇ ಒಂದು ಅತ್ಯುತ್ತಮವಾದ ಸಂಸ್ಥೆಯಾಗಿದ್ದು, ಇದೇ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಭೂವಿಜ್ಞಾನಿಯಾಗಿ ದೇಶದ ಹಲವು ಪ್ರಾಂತಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶ ನನಗೆ ಒದಗಿ ಬಂದಿದೆ. ಭೂವಿಜ್ಞಾನಿಗಳು ಒಂದು ಕಾಲದಲ್ಲಿ ಆನೆ, ಕುದುರೆ ಮತ್ತು ಎತ್ತಿನ ಗಾಡಿಗಳ ಮೇಲೆ ಪ್ರವಾಸ ಮಾಡಿ ಭೂವಿಜ್ಞಾನದ ಸಂಶೋಧನೆಗಳಲ್ಲಿ ತೊಡಗಿರುತ್ತಿದ್ದರು. ಕಾಲ ಬದಲಾಗಿ ಭೂವಿಜ್ಞಾನಿಗಳ ಸಹಾಯಕ್ಕೆ ಜೀಪು ಕಾರುಗಳು ಬಂದವು. ಭೂವಿಜ್ಞಾನಿಗಳ ಕೆಲಸ ಒಂದು ರೀತಿಯಲ್ಲಿ ವೈವಿಧ್ಯಮಯ ಎನ್ನಬಹುದು. ಇವರು ಒಂದು ದಿನ ಹಿಮಾಲಯದ ಶಿಖರಗಳಲ್ಲಿ ಅಲೆಯುತ್ತಿದ್ದರೆ, ಇನ್ನೊಂದು ದಿನ ಸಮುದ್ರದ ತಳದಲ್ಲಿ ಸಂಶೋಧನೆ ನಡೆಸುತ್ತಿರುತ್ತಾರೆ. ಇನ್ನೊಂದು ಕಡೆ ಯಾವುದೊ ಕತ್ತಲ ಗುಹೆಯಲ್ಲಿ ನಮ್ಮ ಪೂರ್ವಜರು  ಬಿಡಿಸಿರುವ ಚಿತ್ರಕಲೆಯನ್ನೋ ಅಥವಾ ಅವರು ಬಿಟ್ಟುಹೋಗಿರುವ ಮಾಹಿತಿಗಳನ್ನೋ ಹುಡುಕುತ್ತಿರುತ್ತಾರೆ. ಮಿಲಿಯಾಂತರ ವರ್ಷಗಳ  ಹಿಂದೆ ಭೂಮಿಯ ಮೇಲೆ ನಡೆದಾಡುತ್ತಿದ್ದ ಆನೆ, ಜಿರಾಫೆ, ಪೆಡಂಭೂತಗಳು... ಹೀಗೆ ಅನೇಕ ರೀತಿಯ ಪ್ರಾಣಿಗಳ ಪಳಿಯುಳಿಕೆಗಳನ್ನು ಯಾವುದೋ ಪ್ರದೇಶಗಳಲ್ಲಿ ಶಿಲೆಗಳಿಂದ ನಾಜೂಕಾಗಿ ಬೇರ್ಪಡಿಸುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಮನುಷ್ಯರು ತಲುಪಲಾಗದ ಪ್ರದೇಶಗಳನ್ನು ತಲುಪಿ ಶಿಲೆಗಳ ಸ್ವಾಂಪಲ್ ತೆಗೆದುಕೊಂಡು ಅವು ಯಾವಯಾವ ಶಿಲೆಗಳೆಂದು, ಅವುಗಳಲ್ಲಿ ಯಾವಯಾವ ಖನಿಜಗಳು ದೊರಕುತ್ತವೆ ಎನ್ನುವ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಇನ್ನು ಮೇಲಿನ ಮಾಹಿತಿಗಳನ್ನೆಲ್ಲ ದೃಢಪಡಿಸಿಕೊಳ್ಳಲು ಲ್ಯಾಬ್ನಲ್ಲಿ ಮೈಕ್ರೋಸ್ಕೋಪ್ ಮುಂದೆಯೂ, ಅತ್ಯಾಧುನಿಕ ಕಂಪ್ಯೂಟರ್ ಮುಂದೆಯೂ ಕುಳಿತು ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಭೂವಿಜ್ಞಾನಿಗಳು ತಮ್ಮ ಪ್ರವಾಸದ ಸಮಯದಲ್ಲಿ ಕಾಡುಮೇಡು ಗ್ರಾಮೀಣ ಪ್ರದೇಶಗಳಲ್ಲಿ ಹಲವು ರೀತಿಯ ತೊಂದರೆ ಮತ್ತು ಸಂದಿಗ್ಧತೆಯ ಪರಿಸ್ಥಿತಿಗಳಿಗೆ ಸಿಲುಕಿಕೊಳ್ಳುವುದು ಸರ್ವೇಸಾಮಾನ್ಯ. ಹೀಗೆ ಹೇಳುತ್ತಾ ಹೋದರೆ ಪ್ರತಿಯೊಬ್ಬ ಪ್ರಖ್ಯಾತ ಭೂವಿಜ್ಞಾನಿಯ ಆತ್ಮಕಥೆಯೂ ಒಂದೊಂದು ಕುತೂಹಲ ಕಥೆಯಾಗುತ್ತದೆ. ನನ್ನ ಸಂಶೋಧನೆಯ ಕಾಲದಲ್ಲಿ ದೇಶದಾದ್ಯಂತ ಓಡಾಡಿದ ಸಮಯದಲ್ಲಿ ನನಗಾದ ಕೆಲವು ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದೇನೆ. 

-ಲೇಖಕ ಡಾ. ಎಂ. ವೆಂಕಟಸ್ವಾಮಿ

Reviews

ವಿಮರ್ಶೆ 1: ಇದು ಎಂ.ವೆಂಕಟಸ್ವಾಮಿ ಅವರ ಭಾರತ ಪರ್ಯಟನ ಕತೆ, ಲೇಖಕರು ಭೂವಿಜ್ಞಾನಿ. ತಮ್ಮ ವೃತ್ತಿ ಸಂಬಂಧವಾಗಿ ಅವರು ದೇಶದ ಹಲವು ಪ್ರಾಂತಗಳಲ್ಲಿ ಕೆಲಸ ನಿರ್ವಹಿಸಿರುವರು. ಅವರು ಸುಮಾರು ಹತ್ತು ವರ್ಷಗಳ ಕಾಲ ಕರ್ನಾಟಕದ ಹೊರಗೆ ಉತ್ತರ ಭಾರತದಲ್ಲಿ ಅಂದರೆ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಸಂಚರಿಸಿದ ಹಾಗೂ ಸಂಶೋಧನೆ ನಡೆಸಿದ ಪ್ರದೇಶಗಳ ಜನರನ್ನು, ಅವರ ಪ್ರಾದೇಶಿಕ, ಸಾಂಸ್ಕೃತಿಕ ಕಲೆಗಳನ್ನು, ಅವರ ಆಚಾರ ವಿಚಾರ, ನಂಬಿಕೆಗಳು ಮತ್ತು ಅವರ ಭಾಷೆ, ವೇಷಭೂಷಣಗಳನ್ನು ಗಮನಿಸಿರುವರು. ಕುತೂಹಲಕ್ಕಾಗಿ ಮಾಹಿತಿಗಾಗಿ ಕೆಲವರನ್ನು ಸಂಪರ್ಕಿಸಿರುವರು. ಪುಸ್ತಕಗಳನ್ನು ಓದಿರುವರು. ಹೀಗೆ ತಮ್ಮಲ್ಲಿ ತುಡಿಯುತ್ತಿದ್ದ ಅನುಭವಗಳಿಗೆ ಲೇಖಕರು ಸ್ಪಂದಿಸಿದ ರೀತಿ ಪ್ರವಾಸ ಕಥನದಲ್ಲಿ ದಾಖಲಾಗಿದೆ. ಲಕ್ನೋ ನಗರ, ಉತ್ತರಪ್ರದೇಶ, ರಾಜಸ್ಥಾನ, ನಾಗಾಲ್ಯಾಂಡ್ ಪ್ರದೇಶಗಳ ಬಗ್ಗೆ ಈ ಪ್ರವಾಸ ಕಥೆಯಲ್ಲಿ ವಿವರಗಳಿವೆ. ಎಂ.ವೆಂಕಟಸ್ವಾಮಿಯವರ ನವಿರಾದ ಹಾಸ್ಯ ಶೈಲಿಯಿಂದಾಗ ಈ ಪ್ರವಾಸ ಕಥನ ಓದಿಸಿಕೊಂಡು ಹೋಗುತ್ತದೆ.

- ಡಾ.ಎಸ್.ವಿದ್ಯಾಶಂಕರ, (ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕೃತಿಯಲ್ಲಿ-2002

ವಿಮರ್ಶೆ 2: ಹತ್ತೊಂಬತ್ತು ಅಧ್ಯಾಯಗಳಲ್ಲಿ ರೂಪಿತವಾಗಿರುವ ಈ ಅನುಭವ ಕಥನವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಭಾಗದಲ್ಲಿ ಸ್ವಾಮಿಯವರು ತಾವು ವಾಸಿಸುತ್ತಿದ್ದ ಲಕ್ನೋ ನಗರ ಮತ್ತು ತಮ್ಮ ತರಬೇತಿಯ ಅಂಗವಾಗಿ ಓಡಾಡಿದ ಮತ್ತು ನೋಡಿದ ಬಿಹಾರದ ಖುಜುವಿನ ಗಣಿಗಳು, ರಾಜಸ್ಥಾನದ ಜಾವರ್ ಸೀಸ-ಸತುವಿನ ಗಣಿಗಳು, ಕಾಶ್ಮೀರದ ಆಹಿಶ್ ಮುಖಮ್ ಪ್ರದೇಶ, ಹೈದರಾಬಾದ್ ನಗರ ಮತ್ತು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವರ್ಣಿಸಿದ್ದಾರೆ. 

ಎರಡನೇ ಭಾಗದಲ್ಲಿ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಛೋಪಾನ್ ಮತ್ತು ಗೋರಾವಲ್ ಎಂಬ ಹಳ್ಳಿಗಳಲ್ಲಿ ಹಲವಾರು ತಿಂಗಳುಗಳ ಕಾಲ ನೆಲೆಸಿ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಶೋಧನೆ ನಡೆಸುವಾಗ ಲೇಖಕರಿಗೆ ಒದಗಿಬಂದ ಅನುಭವಗಳನ್ನು ನಿರೂಪಿಸಿದ್ದಾರೆ. ಉತ್ತರ ಭಾರತದ ಜನಜೀವನ ಮತ್ತು ಅಲ್ಲಿನ ಭಾಷೆಗಳ ಬಗ್ಗೆ ಲೇಖಕರ ವಿಚಾರಗಳು ಇಲ್ಲಿ ಮಂಡಿತವಾಗಿವೆ.

ಮೂರನೇ ಭಾಗದಲ್ಲಿ ನಾಗಾಲ್ಯಾಂಡ್ ದಿಮಾಪುರ ಪಟ್ಟಣದ ವಾಸ್ತವ್ಯ ಮತ್ತು ಕ್ಷೇತ್ರಾಧ್ಯಯನಕ್ಕಾಗಿ ಆ ರಾಜ್ಯದ ದುರ್ಗಮ ಬೆಟ್ಟಗಳಲ್ಲಿ ನಡೆಸಿದ ಪ್ರವಾಸದ ಅನುಭವಗಳನ್ನು ಹೇಳಲಾಗಿದೆ. ಜೊತೆಗೆ, ನಾಗಾ ಜನರ ಹಿಂದಿನ ಸಾಂಸ್ಕೃತಿಕ  ಇತಿಹಾಸ ಮತ್ತು ಅವರ ಊಟೋಪಚಾರಗಳ ವಿಶಿಷ್ಠತೆಯ ಬಗ್ಗೆಯೂ ಇಲ್ಲಿ ವಿವರಗಳಿವೆ.

ಈ ಕೃತಿಯಲ್ಲಿನ ಘಟನೆಗಳೆಲ್ಲ ನಡೆದು ಹದಿನೈದು ವರ್ಷಗಳೇ ಕಳೆದುಹೋಗಿದ್ದರೂ ವೆಂಕಟಸ್ವಾಮಿಯವರು ಅವುಗಳನ್ನು ನೆನ್ನೆ ಮೊನ್ನೆ ನಡೆದ ಘಟನೆಗಳೇನೋ ಎಂಬಂತೆ ಸೂಕ್ಷ್ಮವಾದ ವಿವರಗಳ ಮೂಲಕ ಅನಾವರಣಗೊಳಿಸಿದ್ದಾರೆ. ತಾವು ಓಡಾಡಿದ ಪ್ರದೇಶಗಳ ಪರಿಸರ ಮತ್ತು ತಮ್ಮ ಒಡನಾಡಿಗಳ ನಡೆನುಡಿಗಳನ್ನು ಓದುಗರ ಕಣ್ಣಿಗೆ ಕಟ್ಟುವಂತೆ ವಿವರಿಸುವ ಲೇಖಕರ ಪ್ರತಿಭೆ ಮೆಚ್ಚುಗೆಯಾಗುತ್ತದೆ. ಕೃತಿಯುದ್ದಕ್ಕೂ ಲೇಖಕರ ನವಿರಾದ ಹಾಸ್ಯ ಪ್ರಜ್ಷೆ ಎದ್ದು ಕಾಣುತ್ತದೆ. ವಿವಾಹವಾಗಿ ಒಂದು ಮಗುವಿನ ತಂದೆಯಾಗಿದ್ದರೂ ಈ ಕೃತಿಯಲ್ಲಿ ಅವರ ವ್ಯಕ್ತಿತ್ವ, ಜೀವನದ ಎಲ್ಲ ಅನುಭವಗಳಿಗೂ ಮುಕ್ತವಾಗಿ ತೆರೆದುಕೊಂಡ ಜೀವನೋತ್ಸಾಹಿ ಯುವಕನಂತೆ ಮೂಡಿಬಂದಿದೆ. ಒಟ್ಟಿನಲ್ಲಿ ವೆಂಕಟಸ್ವಾಮಿಯವರು ತಮ್ಮ ಲವಲವಿಕೆಯಿಂದ ಕೂಡಿದ ಬರವಣಿಗೆಯ ಮೂಲಕ ನಮ್ಮ ದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಈ ಪುಸ್ತಕವನ್ನು ಓದಿದ ಮೇಲೆ ಅವರ ಮುಂದಿನ ಪ್ರಕಟಣೆಗಳಿಗಾಗಿ ನಿರೀಕ್ಷಿಸುವಂತಾಗುತ್ತದೆ.  

- ಗಿರೀಶ್ ವಾಘ್, ಕನ್ನಡ ಪ್ರಭ (2001)

 

 

 

Related Books