’ಸಮುದ್ರದಾಚೆಯಿಂದ’ ಖ್ಯಾತ ಕವಿ ವಿ.ಕೃ. ಗೋಕಾಕ (ವಿನಾಯಕ) ಅವರು ಯೂರೋಪಗೆ ಕೈಗೊಂಡ (ಮುಖ್ಯವಾಗಿ ಇಂಗ್ಲೆಂಡ್) ಪ್ರವಾಸ ಕಥನ. ಮನೋರಂಜನೆಯು ಈ ಸಾಹಿತ್ಯದ ಉದ್ದೇಶವೂ ಆಗಿದೆ. ಅಪರಿಚಿತ ಜಗತ್ತಿನ ಪರಿಚಯವನ್ನು ಪ್ರವಾಸಿಗ ತನ್ನ ಅನುಭವವನ್ನು ಬೆರೆಸಿ ತೌಲನಿಕವಾಗಿಯೂ ಬರೆಯಬಹುದು. ಇಂಥ ರಸಾನುಭವದೊಂದಿಗೆ ಭಿನ್ನ ಭಿನ್ನ ಜನಾಂಗಗಳ, ರೀತಿ ನೀತಿಗಳ ತಿಳಿವಳಿಕೆಯೂ ಬರಹದಲ್ಲಿ ಕಾಣಬಹುದು.
ಪ್ರವಾಸವು ವಿದ್ಯಾರ್ಜನೆಯ ಸಾಧನಗಳಲ್ಲಿಯೂ ಒಂದು. ಪ್ರವಾಸ ಸಾಹಿತ್ಯೂ ಇದಕ್ಕೆ ಪೂರಕವಾಗಿದೆ. ಕಾದಂಬರಿಯಂತೆ ಲೇಖಕರ ಅನುಭವ ರೂಪವೂ ಪಡೆಯಬಹುದು. ಕಥೆಯ ರೂಪವೂ ಪಡೆಯಬಹುದು. ಪಯಣಿಗರಾದ ಲೇಖಕರು ಅನೇಕ ಸಲ ತಮ್ಮ ಅನುಭವವನ್ನು ವಾರವಾರಕ್ಕೆ ಬರೆದು ವರ್ಣನ ಪತ್ರಗಳಲ್ಲಿ ವ್ಯಕ್ತಪಡಿಸುತ್ತಾರೆ. ಮುಂದೆ, ಈ ಪತ್ರಗಳ ಸಂಗ್ರಹವೇ ಪುಸ್ತಕರೂಪವಾಗಿ ಪ್ರಕಟವಾಗಬಹುದು. ಇಲ್ಲವೇ, ದಿನದಿನದ ವೃತ್ತಾಂತವನ್ನು ದಿನಚರಿಯಲ್ಲಿ ಬರೆದ-ಪ್ರವಾಸ ಸಾಹಿತಿಯು ತಾನು ಕಂಡ ಜಗತ್ತನ್ನೆಲ್ಲಾ ಸ್ಪಷ್ಟವಾಗುವಂತೆ ತನ್ನ ಶಬ್ದಚಿತ್ರಗಳಲ್ಲಿ ಮೂಡಿಸುತ್ತಾನೆ. ಸ್ವಂತದ ದೃಷ್ಟಿಯನ್ನು ಆ ನವೀನ ಸೃಷ್ಟಿಯ ಮೇಲೆ ಆರೋಪಿಸಿದ ರೀತಿಯು ಎಲ್ಲೆಡೆಗೆ ಸ್ಫುಟವಾಗಿರಬೇಕು. ಇದು ಸಾಧಿಸಿದಲ್ಲಿ ರಸಾನುಭವ, ಮನೋರಂಜನೆ, ಉಪಯುಕ್ತತತೆ ಮೊದಲಾದ ಗುರಿಗಳೆಲ್ಲಾ ಸಫಲವಾಗುವವು.
ವಿ.ಕೃ.ಗೋಕಾಕರ ಈ ಪ್ರವಾಸಕಥನ ಹಲವು ಸಾಧ್ಯತೆಗಳನ್ನು ತೋರಿಸಿ ಕೊಡುತ್ತದೆ. ಈ ಕೃತಿ ಆಂಗ್ಲ(ಇಂಗ್ಲೆಂಡ್) ದೇಶದ ಒಂದು ವಿಶಿಷ್ಟ ಕಾಲಾವಧಿಯ ಚಿತ್ರ, ಆದರೆ, ಅದರಲ್ಲಿ ಜೀವನದ ಶಾಶ್ವತ ಒಲವು ನಿಲುವುಗಳು ಬಿಂಬಿತವಾಗಿದೆ ಎಂದು ಸ್ವತಃ ಲೇಖಕ ವಿ. ಕೃ ಗೋಕಾಕ್ ಅವರೇ ಹೇಳಿಕೊಂಡಿದ್ದಾರೆ.
‘ಸಮುದ್ರದಾಚೆಯಿಂದ’ ಈ ಕೃತಿಯು 1938ರಲ್ಲಿ ಮೊದಲ ಬಾರಿಗೆ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿತ್ತು. 364 ಪುಟಗಳು ಹಾಗೂ ಬೆಲೆ 2 ರೂ.ಗಳಿತ್ತು. ನಂತರ ಈ ಕೃತಿಯನ್ನು 1968ರಲ್ಲಿ, ಸುರುಚಿ ಪ್ರಕಾಶನ (ಪುಟ: 256) ಪ್ರಕಟಿಸಿತ್ತು.
©2024 Book Brahma Private Limited.