ಪ್ರಸಾದ್ ನಾಯ್ಕ್ ಅವರ ಅಂಗೋಲಾ ಪ್ರವಾಸ ಕಥನ. ಮೊದಲಿಗೆ ಅವಧಿ’ಯಲ್ಲಿ ಸರಣಿಯಾಗಿ ಪ್ರಕಟಗೊಂಡಿತ್ತು. ಈ ಕೃತಿಯ ಬಗ್ಗೆ ಜಿ.ಎನ್. ಮೋಹನ್ ಅವರು ’ಪ್ರಸಾದ್ ನಾಯ್ಕ್ ಗೆ ಅಂಗೋಲಾ ಆಯ್ಕೆಯಾಗಿರಲಿಲ್ಲ. ಒಬ್ಬ ನಿಪುಣ ಎಂಜಿನಿಯರ್‌ಗೆ ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಕೆಲಸ ಮಾಡಲು ತೋರಿಸಿದ ಜಾಗ ಮಾತ್ರ ಆಗಿತ್ತು. ಆದರೆ ಅವರು ಅಂಗೋಲಾದ ಆತ್ಮವನ್ನು ಹೊಕ್ಕಿರುವ ರೀತಿ ಎಲ್ಲರಿಗೂ ಬೆರಗು ಮೂಡಿಸುವಂತಿದೆ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಆ ದೇಶದ ಮೂಲೆ ಮೂಲೆ ಸುತ್ತಿದ್ದಾರೆ. ಭಾಷೆ, ಸಂಸ್ಕೃತಿ ಗೊತ್ತಿಲ್ಲದೆ ಅಲ್ಲಿನ ಜನರೊಡನೆ ಸಂವಾದಿಸಿದ್ದಾರೆ. ಊರು-ಕೇರಿ ತಿರುಗಿ ಅವರ ಸಂಸ್ಕೃತಿ ಅರಿತಿದ್ದಾರೆ. ಹುಡುಗಿಯರೊಂದಿಗೆ ಲಗ್ಗೆ ಹೊಡೆದಿದ್ದಾರೆ. ಅಂತಹ ಇನ್ನೂ ಬೆಳಕು ಕಾಣದ ದೇಶದಲ್ಲೂ ನೀರು ಉಕ್ಕಲು ತಮ್ಮ ಕೊಡುಗೆ ನೀಡಿದ್ದಾರೆ. ಅಂಗೋಲಾದಲ್ಲಿ ಹಲವು ವರ್ಷ ಕಳೆದ ನಮ್ಮ “ಸುರತ್ಕಲ್ ಎಕ್ಸ್ ಪ್ರೆಸ್'ನ ಈ ಕಥನವನ್ನು ನೀವು ಓದದಿದ್ದರೆ ನಷ್ಟ ನಿಮ್ಮದೇ...’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂಗೋಲಾದಲ್ಲಿನ ‘ಸುರತ್ಕಲ್ ಎಕ್ಸ್ ಪ್ರೆಸ್’
ಆಫ್ರಿಕಾ ಖಂಡದ ಅಂಗೋಲ ದೇಶದ ಜನರ ಊರು–ಕೇರಿ, ಸಂಸ್ಕೃತಿಯ ಆತ್ಮವನ್ನು ಲೇಖಕ ಈ ಕೃತಿಯಲ್ಲಿ ಇದಮಿತ್ಥವಾಗಿ ಹಿಡಿದುಕೊಟ್ಟಿದ್ದಾರೆ. ದಯನೀಯ ಬದುಕನ್ನು ನಡೆಸುತ್ತಿರುವ ಆ ದೇಶದ ಕಥೆಯನ್ನು ಎಳೆಎಳೆಯಾಗಿಯೂ ತೆರೆದಿಟ್ಟಿದ್ದಾರೆ. ಈ ಕೃತಿಯಲ್ಲಿ 30 ಲೇಖನಗಳಿವೆ. ಒಂದು ಪ್ರವಾಸ ಕಥನ ಹೇಗಿರಬೇಕೆನ್ನುವ ಚೌಕಟ್ಟನ್ನು ಈ ಕೃತಿ ತೋರಿಸಿಕೊಡುತ್ತದೆ. ಆದರೆ, ಲೇಖನದಲ್ಲಿರುವ ಸಣ್ಣಸಣ್ಣ ವಿವರವೂ ಓದನ್ನು ಧೀರ್ಘಗೊಳಿಸುತ್ತದೆ.
ಮೊದಲು ಬ್ಲಾಗ್‌ಗೆ ಬರೆದ ಸುದೀರ್ಘ ಲೇಖನಗಳು ಇವಾಗಿರುವುದರಿಂದ ಅಲ್ಲಿನ ಓದುಗರಿಗೆ ಬೇಕಾದಂತೆ ಇವೆ. ಅವಧಿ ಬ್ಲಾಗ್‌ನಲ್ಲಿ ‘ಹಾಯ್ ಅಂಗೋಲಾ’ ಶೀರ್ಷಿಕೆಯಲ್ಲಿ ಇವು ಪ್ರಕಟವಾಗಿವೆ. ಇದನ್ನು ಕೃತಿ ರೂಪಕ್ಕೆ ಇಳಿಸುವಾಗ ಕೊಂಚ ಕತ್ತರಿ ಆಡಿಸಿ ಸಂಕ್ಷಿಪ್ತಗೊಳಿಸಿದ್ದರೆ ಓದಿನ ಸುಖ ಮತ್ತಷ್ಟು ಹೆಚ್ಚುತ್ತಿತ್ತು ಎನಿಸುವುದುಂಟು. ಆದರೂ ಬದುಕನ್ನು ಇಡಿಇಡಿಯಾಗಿ, ಸಾರ್ಥಕವಾಗಿ ಬದುಕಬೇಕೆನ್ನಿಸುವ ಜೀವಂತ ತುಡಿತವನ್ನು ಇಲ್ಲಿನ ಬರಹಗಳು ಉದ್ದೀಪನಗೊಳಿಸುತ್ತವೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 15)
©2024 Book Brahma Private Limited.