‘ಪಾಂಡಿ ಎನ್ನುವ ರಂಗೋಲಿ’ ಕೃತಿಯು ಸಂಧ್ಯಾರಾಣಿ ಅವರ ಪ್ರವಾಸಕಥನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ ‘ ಪ್ರೊವೊನೇಡ್ ದಂಡೆಯ ಮೇಲೆ ಕೂತಿದ್ದೆ. ಕಡಲು ದಂಡೆಯೆಡೆಗೆ ಧಾವಿಸಿ ಬರುತ್ತಿತ್ತು. ದಂಡೆ ಹತ್ತಿರವಾದಂತೆಲ್ಲಾ ಹೆಜ್ಜೆ ಹೆಜ್ಜೆಗೂ ಕಡಲಿನ ಆವೇಶ ಹೆಚ್ಚುತ್ತಿತ್ತು. ಕಡೆಕಡೆಗೆ ದಂಡೆ ತಲುಪುವ ಮೊದಲೇ ಅಡ್ಡನಿಂತ ಕಲ್ಲುಗಳಿಗೆ ಡಿಕ್ಕಿ ಕೊಟ್ಟಾಗಲಂತೂ ಕಡಲು ಅಬ್ಬರಿಸಿ ಭೋರ್ಗರೆಯುತ್ತಿತ್ತು. ಅಲ್ಲೇ ಒಂದು ಹೆಜ್ಜೆಯಾಚೆಗೆ ದಂಡೆ, ಈಚೆಗೆ ಕಡಲು. ನಡುವೆ ಕದಲದ ಬಂಡೆಗಳು. ಸೋತು ಹಿಂದಿರುಗುತ್ತದೆಯೇ ಕಡಲು? ಉಹೂಃ ಮತ್ತೊಂದು ಅಲೆ, ಮತ್ತೊಂದು ಗಮನ, ಮತ್ತೊಂದು ಆವೇಶ, ಮತ್ತೊಂದು ಕನಸು, ಹೆಣ್ಣಿನ ರಂಗವಲ್ಲಿಗೂ, ಕಡಲಿನ ಆಶಾವಾದಕ್ಕೂ ಏನಾದರೂ ವ್ಯತ್ಯಾಸ ಇರಬಹುದೆ? ಬಹುಶಃ ಪಾಂಡಿಚೆರಿಗೆ ಆತ್ಮ ಎನ್ನುವುದಿದ್ದರೆ ಅದು ಹೀಗೆಯೇ ಇರುತ್ತದೆ ಅನ್ನಿಸಿತು. ಅದು ಹೆಣ್ಣೊಬ್ಬಳು ಹಾಕಿದ ರಂಗೋಲಿಯಂತೆ, ತನ್ನವಳನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಪ್ರೇಮಿಯಂತೆ, ಬೆಂದರೂ ಮತ್ತೆ ಮತ್ತೆ ಮೇಲೆದ್ದು ನಗುವ ಅಗ್ನಿಹಂಸ ಪಾಂಡಿಚೆರಿ ’ ಎಂದು ಬಿಂಬಿಸಿದ್ದಾರೆ.
ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...
READ MORE