‘ನಾನು ಕಂಡ ಅಮೇರಿಕೆ’ ರಾ.ಯ. ಧಾರವಾಡಕರ ಅವರ ರಚನೆಯ ಗ್ರಂಥವಾಗಿದೆ. ಈ ಗ್ರಂಥ ಬಳಸಿಕೊಂಡಿರುವ ಭಾಷೆಯೂ ಲವಲವಿಕೆಯಿಂದ ಕೂಡಿದೆ, ಮನೋಜ್ಞವಾಗಿದೆ. ನೈಗರಾ ಜಲಪಾತವನ್ನು ಕುರಿತು "ಯಾವ ಆತ್ಮಹತ್ಯೆಗಾಗಿ ಹೀಗೆ ರಭಸದಿಂದ ಧುಮ್ಮಿಕ್ಕುತ್ತದೋ ದೇವರೇ ಬಲ್ಲ” ಇಲ್ಲಿ "ಮಧುಚಂದ್ರಕ್ಕಾಗಿ ಬಂದ ದಂಪತಿಗಳ ಪ್ರೇಮ ಈ ನೀರು ಇರುವವರೆಗೂ ನಿರಂತರ ಇರುತ್ತದೆ” ಎಂಬಂಥ ಧ್ವನಿಪೂರ್ಣ ಬರವಣಿಗೆ ಒಂದು ಕ್ಷಣ ಪರವಶತೆಯನ್ನುಂಟು ಮಾಡಿದರೆ, “ಏಳು ಸಾವಿರ ರೂಪಾಯಿ ಚೆಂಡು ಬಿದ್ದ ಹಾಗಾಯಿತು”, “ಚಪಾತಿ, ಪಲ್ಲೆ, ಬುತ್ತಿ, ಚಟ್ಟಿ, ಉಪ್ಪಿನಕಾಯಿ- ಮೊದಲಾದುವನ್ನು ಕತ್ತರಿಸಿದೆವು” ಎಂಬಂಥ ಮನೆಮಾತುಗಳಿಂದಾಗಿ ಈ ಕೃತಿ ಆತ್ಮೀಯವಾಗುತ್ತದೆ. ಈ ಎಲ್ಲ ಉತ್ತಮಾಂಶಗಳಿಂದಾಗಿ 'ನಾನು ಕಂಡ ಅಮೇರಿಕೆ' ಒಂದು ಅತ್ಯುತ್ತಮ ಕೃತಿಯೆನಿಸಿದೆ ಎಂದು ಎಂ.ಎಂ. ಕಲುಬುರ್ಗಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಭಾಷಾಶಾಸ್ತ್ರ, ರಾಜಕಾರಣ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ಭಾಷಾ ಸಾಹಿತ್ಯದ ಕುರಿತು ಅಧ್ಯಯನ ನಡೆಸಿದವರಲ್ಲಿ ಪ್ರಮುಖರು ರಾ, ಯ. ಧಾರವಾಡಕರ್ ಅವರು. ಇವರು ಜನಿಸಿದ್ದು 1919 ಜುಲೈ 15ರಂದು. ತಂದೆ ಯಲಗುರ್ದರಾವ್, ತಾಯಿ ಗಂಗಾಬಾಯಿ. ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್‌ನಲ್ಲಿ ಬಿ.ಎ. ಪದವಿ ಪಡೆದರು. ಕನ್ನಡ ಹಾಗೂ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ಪತ್ರಿಕಾ ವ್ಯವಸಾಯ, ಕರ್ನಾಟಕದಲ್ಲಿ ವೃತ್ತ ಪತ್ರಿಕೆಗಳು, ಸಾಹಿತ್ ಸಮೀಕ್ಷೆ, ಕನ್ನಡ ಭಾಷಾ ಶಾಸ್ತ್ರ, ಧೂಮ್ರವಲಯಗಳು, ತೂರಿದ ಚಿಂತನೆಗಳು, ನವಿಲುಗರಿ ...
READ MORE