‘ಗಾಂಧಿ ಮೆಟ್ಟಿದ ನಾಡಿನಲ್ಲಿ: ದಕ್ಷಿಣ ಆಫ್ರಿಕಾ ಡರ್ಬನ್ ಪ್ರವಾಸ ಕಥನ’. ಇದು ವಕೀಲರು, ಲೇಖಕರು ಆಗಿರುವ ಸಿ.ಎಸ್. ದ್ವಾರಕನಾಥ ಅವರ ಪ್ರವಾಸ ಕಥನ. ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ನಡೆದ ವಿಶ್ವ ವರ್ಣಭೇದ ವಿರೋಧಿ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಭಾರತೀಯ ನಿಯೋಗದ ಸದಸ್ಯರಲ್ಲೊಬ್ಬರಾಗಿ ಆಹ್ವಾನ ಪಡೆದಿದ್ದ ದ್ವಾರಕನಾಥರು, ತಮ್ಮ ಶೋಷಿತರ ಬೇರುಗಳನ್ನು ಶೋಧಿಸುತ್ತಲೇ, ಆಫ್ರಿಕಾದ ಕಪ್ಪು ಜನರ ಬದುಕು, ಬವಣೆ, ಸಮಾಜ, ಸಂಸ್ಕೃತಿಗಳ ದಟ್ಟ, ಆತ್ಮೀಯ ಚಿತ್ರಣವನ್ನು ನೀಡಲು ಈ ಕೃತಿಯಲ್ಲಿ ಪ್ರಯತ್ನಿದ್ದಾರೆ.
ದೇಶಕ್ಕೆ ಬಣ್ಣ, ದೇಹಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ ಎಂದು ಪ್ರಶ್ನಿಸುವ ದ್ವಾರಕಾನಾಥರ ಮಾತುಗಳಲ್ಲಿ ಅವರ ಸಾಮಾಜಿಕ ಕಳಕಳಿ ವ್ಯಕ್ತವಾಗುತ್ತದೆ. ಒಂದು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ್ದೇ ಎಲ್ಲಾ ಸಮಸ್ಯೆಗಳಿಗೆ ಮೂಲ ಎಂದು ಭಾವಿಸುವ, ಒಂದು ನಿರ್ದಿಷ್ಟ ದೇಹ ಬಣ್ಣವೇ ಶ್ರೇಷ್ಟ ಎಂದು ಅರ್ಥೈಸುವ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಸಂಸ್ಕೃತಿಯನ್ನು ಎತ್ತಿ ಹಿಡಿದು ತನ್ಮೂಲಕ ಎಲ್ಲಾ ರೀತಿಯ ಅಸಮಾನತೆಗಳ ವಿರುದ್ಧ ದ್ವಾರಕಾನಾಥ್ ಅವರು ದನಿಯೆತ್ತಿ ಜನಪರ ಚಳವಳಿಗಳ ಕಾಳಜಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾರೆ.
ನಮ್ಮ ದೇಶದಲ್ಲಿ ಯಾವುದೇ ರೀತಿಯ ಜಾತಿ ಭೇದಗಳಿಲ್ಲ. ನಾವು ಇದನ್ನು 50 ವರ್ಷಗಳ ಹಿಂದೆಯೇ ತೊಡೆದು ಹಾಕಿದ್ದೇವೆ ಎಂದು ವಿಶ್ವ ಸಂಸ್ಥೆಗೆ ಸುಳ್ಳು ವರದಿ ನೀಡಿದ ಭಾರತ ಸರ್ಕಾರದ ಗೋಸುಂಬೆತನದ ವಿರುದ್ಧ ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿ,ಈ ನಿಟ್ಟಿನಲ್ಲಿ ಜಗತ್ತಿನ ಜನರ ಗಮನ ಸೆಳೆಯುವುದರಲ್ಲಿ ಲೇಖಕರ ಕಳಕಳಿ ಇಲ್ಲಿ ವ್ಯಕ್ತವಾಗಿದೆ. .
©2024 Book Brahma Private Limited.