ಇದು ನಿಜಕ್ಕೂ ಅರಿವಿನ ಪಯಣ. ಬಾಲಕಿ ನೇಹಾ ಭಾವಿ ಜಗತ್ತಿಗಾಗಿ ಅರಿವನ್ನು ಪಡೆಯುವ ತವಕ ಮೆಚ್ಚುವಂತದ್ದು. ಹೋದಲ್ಲೆಲ್ಲಾ ಆ ಸ್ಥಳಗಳ ಟಿಪ್ಪಣಿ ಮಾಡಿಕೊಂಡು, ಸಂಶಯ, ಕುತೂಹಲಗಳನ್ನು ಪಾಲಕರಿಂದ ಪರಿಹರಿಸಿಕೊಂಡು, ಇಂಟರ್‌ನೆಟ್‌ನಲ್ಲಿ ಹುಡುಕಾಡಿ ಮಾಹಿತಿ ಸಂಗ್ರಹಿಸಿದ್ದಾರೆ, ನನಗೆ ಈ ಪ್ರವಾಸ ಕಥನ ಓದುವಾಗ ಅಚ್ಚರಿಯುಂಟಾಯಿತು. ಕೇವಲ ಹನ್ನೆರಡು ವರ್ಷದ ಬಾಲಕಿ ನೇಹಾ ಒಂದು ಸ್ಥಳದ ಭೌಗೋಳಿಕ, ಐತಿಹಾಸಿಕ, ಪಾರಿಸಾರಿಕ, ಪೌರಾಣಿಕ ವಿಷಯಗಳನ್ನು ಸಂಗ್ರಹಿಸಿ ಓದುಗರಿಗೆ ಸಿನಿಮಾ ನೋಡಿದ ಅನುಭವವನ್ನು ನೀಡುತ್ತಾ ಸಾಗಿದ್ದಾರೆ. ಕರ್ನಾಟಕದ ಜಲಪಾತಗಳು, ಕೋಟೆಗಳು, ನಿಸರ್ಗಧಾಮಗಳು, ಐತಿಹಾಸಿಕ ಕೋಟೆ, ದೇವಾಲಯಗಳು, ಕರಾವಳಿಯ ಸಮುದ್ರತೀರಗಳು ಮೊದಲಾದವುಗಳನ್ನು ಸಂದರ್ಶಿಸುವುದರ ಜೊತೆಗೆ, ಫೋಟೋಗಳ ಸಂಗ್ರಹ, ಉಡುಗೆ ತೊಡುಗೆ, ಊಟ ಉಪಹಾರ, ಆಟ ಪಾಠ, ಹಿರಿಯರ ಎಚ್ಚರಿಕೆ, ಪ್ರವಾಸದಲ್ಲಿ ಅನುಭವಿಸಿದ ತೊಂದರೆಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದು ಅವಳ ಸಂಶೋಧನಾ ಪ್ರವೃತ್ತಿಯನ್ನು ತೋರಿಸುತ್ತದೆ. ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬಂತೆ ನೇಹಾ ಭವಿಷ್ಯದಲ್ಲಿ ಉತ್ತಮ ಬರಹಗಾರ್ತಿಯಾಗುವಲ್ಲಿ ಸಂದೇಹವೇ ಇಲ್ಲ. ಆರನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ನೇಹಾ ಲಿಂಗರಾಜ ರಾಮಾಪೂರ ಅವರು ಶಿಕ್ಷಕರ ಕುಟುಂಬದಲ್ಲಿ ಜನಿಸಿದವರು. ತಂದೆ, ತಾಯಿ, ಅಜ್ಜ, ಅಮ್ಮ, ಮಾವ, ಅತ್ತೆಯವರೊಂದಿಗೆ ಕೌಟುಂಬಿಕ ಸಮಾರಂಭಗಳಿಗೆ ಬೇರೆ ಬೇರೆ ಊರುಗಳಿಗೆ ಹೋಗುವಾಗ ದಾರಿಯಲ್ಲಿ ಬರುವ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳು, ಐತಿಹಾಸಿಕ ಸ್ಥಳಗಳು, ಉದ್ಯಾನವನಗಳು, ಪ್ರದರ್ಶನಾಲಯಗಳು ಹೀಗೆ ಸಂದರ್ಶಿಸಿದ ಸ್ಥಳಗಳ ಹೊಸ ಹೊಸ ಅನುಭವಗಳನ್ನು ತುಂಬಾ ಸೊಗಸಾಗಿ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
©2025 Book Brahma Private Limited.