ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕುರಿತು ವೆಂಕಟೇಶ ಮಾಚಕನೂರ ಬರೆದ ಪ್ರವಾಸ ಕಥನ ’ಉತ್ಕಲ ವಂಗ’. ಈ ಕೃತಿಯು ಎರಡೂ ರಾಜ್ಯಗಳ ವೀಕ್ಷಣೆ, ಅಧ್ಯಯನ, ವಿಶ್ಲೇಷಣೆಯನ್ನು ಒಳಗೊಂಡಿದೆ. ಎರಡೂ ರಾಜ್ಯಗಳ ಪಾರಂಪರಿಕ ಕಥನವನ್ನು ಪ್ರವಾಸ ಕಥನ ರೂಪದಲ್ಲಿ ನೀಡಿದ್ದಾರೆ.
ಹಲವು ಕುತೂಹಲಗಳ ಪ್ರವಾಸ ಕಥನ
ನಮ್ಮ ರಾಷ್ಟ್ರಗೀತೆಯನ್ನು ನೆನಪಿಗೆ ತರುವ ಶೀರ್ಷಿಕೆಯ ‘ಉತ್ಕಲ ವಂಗ' ವೆಂಕಟೇಶ ಮಾಚಕನೂರ ಒಂಬತ್ತನೆಯ ಪ್ರವಾಸ ಕಥನ. ಒಡಿಶಾದ ಭುವನೇಶ (ಕೋನಾರ್ಕ, ಪುರಿ, ಚಿಲ್ಕಾ ಸರೋವರ, ಕಟಕ್ ಮತ್ತು ಬಂಗಾಳದ ಕೋಲ್ಕತ್ತಾ ನಗರದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು, ಸುಂದರಬನಕ್ಕೆ ಭೇಟಿ ನೀಡಿದ ಅನುಭವವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರವಾಸ ಮಾಡಿದ ಸ್ಥಳಗಳ ಭೌಗೋಳಿಕ, ಚಾರಿತ್ರಿಕ ವಿವರಗಳನ್ನು ನೀಡಿರುವುದರಿಂದ ಪ್ರವಾಸಿಗರಿಗೆ ಒಂದು ಉತ್ತಮ ಮಾರ್ಗದರ್ಶಿ ಆಗಬಲ್ಲದು.
ಒಡಿಶಾದ ಜನರು ವಿವಿಧ ಕಲೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದ್ದರಿಂದ ಉತ್ಕಲ ಎಂಬ ಹೆಸರು ಬಂದಿತಂತೆ. ಭುವನೇಶ್ವರ, ಕೋನಾರ್ಕ್, ಪುರಿ ಈ ಮೂರು ಒಡಿಶಾದ ಸುವರ್ಣ ತ್ರಿಭುಜ ಪ್ರವಾಸಿ ತಾಣಗಳು, ಒಡಿಶಾ ಪ್ರವಾಸೋದ್ಯಮ ನಿಗಮದ ಯೋಜಿತ ಪ್ರವಾಸ ಮಾಡಿ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕಳಿಂಗ ಯುದ್ಧ ನಡೆದ ಸ್ಥಳ ದೌಲಿಯಲ್ಲಿರುವ ಶಾಂತಿಸ್ತೂಪವನ್ನು ಜಪಾನಿನ ಬೌದ್ಧಗುರು ಪೂಜಿಗುರೂಜಿ ನೇತೃತ್ವದಲ್ಲಿ ನಿರ್ಮಾಣವಾದ ಬಗ್ಗೆ, ಇವರು ಭಾರತಕ್ಕೆ ಬಂದು ಗಾಂಧೀಜಿಯವರ ಜೊತೆ ವರ್ಧಾ ಆಶ್ರಮದಲ್ಲಿದ್ದ ಬಗ್ಗೆ ಬರೆದಿದ್ದಾರೆ. ಲಿಂಗರಾಜ ಮಂದಿರನ್ನು ಇತಿಹಾಸಕಾರರು ಅತ್ಯಂತ ಸುಂದರವಾದ ದೇವಸ್ಥಾನವೆಂದು ವರ್ಣಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿನ ಎಲ್ಲಾ ದೇವಾಲಯಗಳಲ್ಲಿ ಪಂಡರು ತೊಂದರೆ ಕೊಡುವುದರ ಬಗ್ಗೆ ಹೇಳುತ್ತಾ, ಇಲಾಖೆಗೂ ಅವರ ಮೇಲೆ ಹಿಡಿತವಿಲ್ಲ, ದೇವರಿಗೂ ಅವರ ಮೇಲೆ ಹಿಡಿತವಿದ್ದಂತೆ ಕಾಣುವುದಿಲ್ಲ ಎಂದು ವಿನೋದ ಮಾಡುತ್ತಾರೆ. ಈ ದೇವಾಲಯದ ಅಂದ ಇರುವುದು ಹೊರನೋಟದಲ್ಲಿ, ಗೋಪುರಗಳ ವಿನ್ಯಾಸ, ಬೃಹತ್ ಗಾತ್ರ ಮತ್ತು ಅಂದದ ಸಂಯೋಜನೆ ಬೆರಗುಗೊಳಿಸುವಂತಹದ್ದು, ಮುಕೇಶ್ವರ ದೇವಾಲಯ, ರಾಜರಾಣಿ ಮಂದಿರ ಮತ್ತು ಸರ್ಕಾರಿ ವಸ್ತು ಸಂಗ್ರಹಾಲಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕೊಡುತ್ತಾರೆ.
ಕೋನಾರ್ಕ ಸೂರ್ಯ ದೇವಾಲಯದಲ್ಲಿ ದಿನದ ನಿರ್ದಿಷ್ಟ ವೇಳೆಯನ್ನು ತೋರಿಸುವಂತೆ ಚಕ್ರಗಳನ್ನು ನಿರ್ಮಿಸಿದ ಶಿಲ್ಪಿಗಳ ತಾಂತ್ರಿಕ ನೈಪುಣ್ಯ, ಪುರಿ ದೇವಾಲಯದ 214ಅಡಿ ಎತ್ತರದ ಗೋಪುರದ ಮೇಲೆ 36 ಅಡಿ ವ್ಯಾಸದ ಎಂಟು ಲೋಹಗಳಿಂದ ಮಾಡಲಾದ ಎರಡು ಇಂಚು ದಪ್ಪದ 2200 ಕೆ.ಜಿ. ತೂಕದ ಸುದರ್ಶನಚಕ್ರವನ್ನು ಅಳವಡಿಸಲಾಗಿರುವುದು, ಇತ್ಯಾದಿ ವಿಶೇಷತೆಗಳ ಬಗ್ಗೆ ನಿರೂಪಿಸಿದ್ದಾರೆ. ಭಾರತದಲ್ಲಿಯೇ ಅತಿ ದೊಡ್ಡದಾದ, ಪುರಿ, ಖುರ್ದಾ, ಗಂಜಾಂ ಜಿಲ್ಲೆಗಳನ್ನು ಆವರಿಸಿರುವ 1100 ಕಿ.ಮೀ. ವಿಸ್ತೀರ್ಣವುಳ್ಳ ಚಿಲ್ಕಾ ಸರೋವರ, ಇಲ್ಲಿ ಅಳಿವಿನಂಚಿನಲ್ಲಿರುವ ಇರಾವದಿ ಡಾಲ್ಫಿನ್ಗಳ ಚಲನವಲನಗಳ ವೀಕ್ಷಣೆ ಬಗ್ಗೆ ಬರೆದಿದ್ದಾರೆ.
ಕಾಲಿಘಾಟದಲ್ಲಿರುವ ಕಾಳಿ ಮಂದಿರ, ರಾಮಕೃಷ್ಣ ಪರಮಹಂಸರು ಆರಾಧಿಸಿದ ದಕ್ಷಿಣೇಶ್ವರದ ಕಾಳಿಮಂದಿರ, ಬೇಲೂರು ಮಠದಲ್ಲಿರುವ ರಾಮಕೃಷ್ಣ ಮಂದಿರ, ಸಾಲೇಕ್ ಸಿಟಿ, ವಿಕ್ಟೋರಿಯಾ ಮೆಮೋರಿಯಲ್, ಪ್ರಿನ್ಸೆಪ್ ಘಾಟ್, ಇಂಡಿಯನ್ ಮ್ಯೂಸಿಯಂ, ರವೀಂದ್ರ ಭಾರತಿ ಸಂಗ್ರಹಾಲಯ, ಮಾರ್ಬಲ್ ಪ್ಯಾಲೇಸ್, ನೇತಾಜಿ ಭವನ, ಮದರ್ ತೆರೇಸಾ ಸ್ಮಾರಕ, ಸುಂದರಬನದ ಪ್ರವಾಸದ ಕಥನವಿದೆ.
ಸುಭಾಷಚಂದ್ರ ಬೋಸ್, ಪರಮಹಂಸರು, ವಿವೇಕಾನಂದರು, ಟ್ಯಾಗೋರ್, ಬಿ.ಸಿ.ರಾಯ್ ಮುಂತಾದ ಮೇರು ವ್ಯಕ್ತಿತ್ವಗಳ ದರ್ಶನವನ್ನು ಈ ಪ್ರವಾಸ ಕಥನದಲ್ಲಿ ಸಾಕಷ್ಟು ವಿವರವಾಗಿ ಮಾಡಿಸಿದ್ದಾರೆ. ಸ್ವಾತಂತ್ರ್ಯ ಬರುವ ಸಮಯದಲ್ಲಿ ಗಾಂಧಿ ಕೋಲ್ಕತ್ತಾದಲ್ಲಿದ್ದ ಬಗ್ಗೆ, ನೌಖಾಲಿಯ ಹಳ್ಳಿಗಳಿಗೆ ಭೇಟಿ ನೀಡಿ ಗಲಭೆಗಳನ್ನು ತಡೆಯಲು ಉಪವಾಸ ವ್ರತ ಕೈಗೊಂಡಿದ್ದರ ಬಗ್ಗೆ ಬರೆದಿದ್ದು, ಇದೂ ಪ್ರವಾಸದ ಮುಖ್ಯ ಭಾಗವೇ ಅನ್ನಿಸುತ್ತದೆ.
ಹಲವಾರು ಮುದ್ರಣದೋಷಗಳು ಕಂಡುಬಂದರೂ, ಈ ಪ್ರವಾಸಕಥನ ದರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಐತಿಹಾಸಿಕ, ಭೌಗೋಳಿಕ, ಪ್ರಚಲಿತವಿರುವ ಸತೂಹಲಕರವಾದ ಕಥೆ ಉಪಕಥೆಗಳನ್ನು ಪ್ರಸ್ತಾಪಿಸಿ ಓದುಗರಿಗೆ ಪ್ರವಾಸದ ಸಮಗ್ರ ನೋಟ ಸಿಗುವಂತೆ ನಿರೂಪಿಸಿದ್ದಾರೆ.
-ಕೆ. ಪದ್ಮಾಕ್ಷಿ
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಫೆಬ್ರುವರಿ 2020)
................................................................................................................
ಉತ್ಕಲ ವಂಗ
ಈಗಾಗಲೇ ಎಂಟು ಪ್ರವಾಸ ಕಥನಗಳನ್ನು ಹೊರತಂದಿರುವ ಲೇಖಕರು, ತಮ್ಮ ಈ ಒಂಬತ್ತನೆಯ ಪ್ರವಾಸ ಕಥನದಲ್ಲಿ ಒಡಿಶಾ ಮತ್ತು ಬಂಗಾಳ ಪ್ರದೇಶದ ಅನುಭವವನ್ನು ನಿರೂಪಿಸಿದ್ದಾರೆ. ಇಲ್ಲಿನ ಬರಹಗಳಲ್ಲಿ ಪ್ರವಾಸದ ಅನುಭವ ಮಾತ್ರವಲ್ಲ, ಜತೆಗೆ ಅವರು ಭೇಟಿ ನೀಡುವ ಸ್ಥಳಗಳ ಇತಿಹಾಸ, ಸಂಸ್ಕೃತಿ, ವರ್ತಮಾನದ ಸ್ಥಿತಿ ಎಲ್ಲವೂ ಸೇರಿಕೊಂಡಿರುತ್ತವೆ. ಸ್ಥಳವೊಂದರ ಸವಿಸ್ತಾರವಾದ ವಿವರಣೆ ಮತ್ತು ಅನುಭವಗಳನ್ನು ಸಹ ಲೇಖಕರು ನೀಡುತ್ತಾರೆ. ಇವರ ಪ್ರವಾಸವೆಂದರೆ ಇತ್ತ ಬಂದು ಅತ್ತ ಹೋಗುವು ದಲ್ಲ. ಉದಾಹರಣೆಗೆ, ಕೊಲೊತ್ತಾದ ಇವರ ಪ್ರವಾಸದ ಇಟಿನರಿಯು ಆರು ದಿನಗಳದ್ದು! ಎರಡು ದಿನ ಕೊಕ್ಕೋತ್ತಾ ನಗರ, ಎರಡು ದಿನ ಶಾಂತಿ ನಿಕೇತನ, ಇನ್ನೆರಡು ದಿನ ಸುಂದರಬನ ಸೇರಿದಂತೆ ಇತರ ಸ್ಥಳಗಳು. ಆದರೆ ಮಳೆ ಬಂದು ಅದು ಏರುಪೇರಾಗಿದ್ದು ಬೇರೆ ವಿಷಯ, ಮುಕ್ತವಾಗಿ ತಮ್ಮ ಅನುಭವ ದಾಖಲಿಸುವುದು ಇಲ್ಲಿನ ಮತ್ತೊಂದು ವಿಶೇಷತೆ. ನಮ್ಮ ನಾಡಿನ ದೇಗುಲಗಳಲ್ಲಿ ಭಕ್ತರನ್ನು ಮೋಸ ಮಾಡಲು ಯತ್ನಿಸುವ ವರ್ಗವನ್ನು ಟೀಕಿಸುವಲ್ಲೂ ಲೇಖಕರು ಹಿಂಜರಿಯುವುದಿಲ್ಲ.
ಕೃಪೆ : ವಿಶ್ವವಾಣಿ (2020 ಮಾರ್ಚಿ 15)
©2024 Book Brahma Private Limited.