ಲೇಖಕ ಸಿದ್ಧಲಿಂಗಯ್ಯ ಹೊಲತಾಳು ಅವರ ’ಸುವರ್ಣಮುಖಿ’ ಒಂದು ಕಾಲ್ನಡಿಗೆಯ ಪ್ರವಾಸ ಸಂಕಥನವಾಗಿದೆ. ಈ ಪ್ರವಾಸದಲ್ಲಿ ಅರಿವು, ಅಧ್ಯಯನ: ಸಂವಾದ, ಸಂಶೋಧನೆ: ಪ್ರಾಕೃತಿಕ ಸೊಬಗು, ಪ್ರಾಯೋಗಿಕ ಅನುಭವ; ಚಿಂತನ-ಮಂಥನ: ಕರಕುಶಲ- ಜಾನಪದ ಎಲ್ಲವೂ ಈ ಬರವಣಿಗೆಯಲ್ಲಿ ಸಂಮಿಳಿತವಾಗಿವೆ.
ಸಿದ್ಧಬೆಟ್ಟದ ಸುತ್ತಣ ಊರುಗಳು, ಅಲ್ಲಿನ ಜನಬದುಕಿನ ಸಮೀಕ್ಷೆ ಇಲ್ಲಿದೆ. ತೋಟಗಾರಿಕೆ, ಪುಷ್ಪೋದ್ಯಮ, ಕೋಳಿಸಾಕಾಣಿಕೆ, ಗಣಿಗಾರಿಕೆ, ಕುರಿ-ಮೇಕೆಸಾಕಾಣಿಕೆ ಹೀಗೆ ಪುರಾತತ್ವದ ವಿವರಗಳು ಸೇರಿದಂತೆ ಹಲವಾರು ವಿಚಾರಗಳನ್ನೊಳಗೊಂಡಿದೆ. ಈ ಕಥನದಲ್ಲಿ ತೌಲನಿಕ ವಿವರಗಳ ಜೊತೆ ಸಾಮಾಜಿಕ ಬದಲಾವಣೆಗಳನ್ನು ಹಿಡಿದಿಡುವ ಕೆಲಸವನ್ನೂ ಮಾಡಲಾಗಿದೆ. ತಮ್ಮ ಅನುಭವದ ಮೂಲಕ ಹತ್ತಾರು ಸಲಹೆಗಳನ್ನೂ ಲೇಖಕರು ಈ ಕೃತಿಯ ಮೂಲಕ ನೀಡಿದ್ದಾರೆ.
’ಸುವರ್ಣಮುಖಿ’ ಕೃತಿಯ ವಿಮರ್ಶೆ
ಸಿದ್ದಗಂಗಯ್ಯ ಹೊಲತಾಳು ಅವರ ಸುವರ್ಣಮುಖಿ ಒಂದು ಕಾಲ್ನಡಿಗೆಯ ಪ್ರವಾಸ ಸಂಕಥನ, ಸಿದ್ದರಬೆಟ್ಟದ ಸುತ್ತಣ ಊರುಗಳು, ಅಲ್ಲಿನ ಜನಬದುಕಿನ ಸಮೀಕ್ಕೆ ಇಲ್ಲಿದೆ. ಶೈಕ್ಷಣಿಕ ದೃಶ್ಪಿಗಳಿಗೆ ಮೀರಿದ ಸಾಮಾಜಿಕ ವಿವರಗಳಿರುವ ನಿರ್ದಿಶ್ಟ ಕಾಲ ಸ್ಥಳಗಳ ಅಡ್ಡಕೊಯ್ತವಿದು. 2015-20 ರ ನಡುವಣ ಕಾಲ ಮತ್ತು ಸಿದ್ದರಬೆಟ್ಟ ಸೀಮೆಯ ಸ್ಥಳಸಂಕಥನ ಇಲ್ಲಿದೆ, ಇದರೊಂದಿಗೆ ಲೇಖಕರ ಬಾಲ್ಯದಿಂದ ಅಧ್ಯಾಪನ ನಿವೃತ್ತಿವರೆಗಿನ ಆತ್ಮಚರಿತ್ರೆ ಪ್ರಾದೇಶಿಕ ಸಂಕಥನದೊಂದಿಗೆ ಇಲ್ಲಿ ಬೆರೆತುಕೊಂಡಿದೆ. 200-300 ವರ್ಶಗಳಷ್ಟು ಹಿಂದಿನ ಕೆಲ ಪ್ರಾಕೃತಿಕ, ಚಾರಿತ್ರಿಕ ವಿವರಗಳೂ ಇಲ್ಲುಂಟು. ಇಲ್ಲಿ ವಿಶ್ಲೇಶಣೆ ಕಡಿಮೆ; ವರದಿ ಹೆಚ್ಚು. ಹಳ್ಳಿಗಳ ಬಗ್ಗೆ ಏನೂ ತಿಳಿಯದ ಪ್ಯಾಟೆ ಹೈಕಳು ಅಗತ್ಯವಾಗಿ ಓದಬೇಕಾದ ಪುಸ್ತಕವಿದು.
ಸಿದ್ದರಬೆಟ್ಟದ ಸುತ್ತಣ ತರಿ-ಕುಕ್ಕಿ ಬೇಸಾಯ: ತೋಟಗಾರಿಕೆ, ಪುಶೋದ್ಯಮ, ಕೋಳಿಸಾಕಾಣಿಕೆ, ಗಣಿಗಾರಿಕೆ, ಕುರಿ-ಮೇಕೆಸಾಕಾಣಿಕೆ, ಕೈಕಸುಬುಗಳು, ಶಾಲೆಗಳು, ಪುರಾತತ್ವ ವಿವರ ಇತ್ಯಾದಿಗಳು ಇಲ್ಲಿವೆ. ಹೆಚ್ಚಿನದಾಗಿ ತೋಟಗಾರಿಕೆಯ ಕಥನಕ್ಕೆ ಇಲ್ಲಿ ಆದ್ಯತೆ ನೀಡಲಾಗಿದೆ. ತೋಟಗಾರಿಕೆಯಿಂದ ತಿಂಗಳಿಗೆ ಸರಾಸರಿ ಕನಿಶ್ಟ ಐವತ್ತು ಸಾವಿರ ಆದಾಯ ಗಳಿಸಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳು ಇಲ್ಲಿವೆ. ಹಲವಾರು ತೋಟಗಳ ನೇರ ಪರಿಚಯವೂ ಇಲ್ಲುಂಟು. ಹಾಗಾಗಿ ಇದನ್ನು ಕೃಶಿ, ತೋಟಗಾರಿಕಾ ಕೈಪಿಡಿ ಎಂತಲೂ ಕರೆಯಬಹುದು. ಯಾವ ಸೀಸನ್ನಿನಲ್ಲಿ ಯಾವ ಹೂವು ಎಲ್ಲಿ ಕಾಣಸಿಗುತ್ತದೆ? ಯಾವಾಗ ಸೊಗಡವರೆ ಸಿಗುತ್ತದೆ? ಜಲಪಾತ ನೋಡಲು ಯಾವಾಗ ಬರಬೇಕು? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಿರುವುದರಿಂದ ಇದೊಂದು ಸ್ಥಳೀಯ ಇಕೊ ಅಗ್ರಿ ಟೂರಿಸ್ಟ್ ಗೈಡ್ ರೀತಿಯಲ್ಲು ಇದೆ.
ಯಾವ ಪ್ರದೇಶದಲ್ಲಿ ಅಡಿಕೆ, ತೆಂಗು, ಹುಣಸೆ ಸೂಕ್ತ? ಯಾವ ಭಾಗದಲ್ಲಿ ಕಾಡುಮರಗಳು ಸೂಕ್ತ? ಎಲ್ಲೆಲ್ಲಿ ಗಿಡಮೂಲಿಕೆ ವನ ಮಾಡಬಹುದು? ನಗರದಿಂದ ನಿವೃತ್ತ ಜೀವನ ನಡೆಸಲು ಬರುವವರು, ವಾರಾಂತ್ಯ ತೋಟಗಾರರು ಹೇಗೆ ಕೃತಿಯಲ್ಲಿ ತೊಡಗಿಕೊಳ್ಳಬಹುದು? ಮಾರುಕಟ್ಟೆ ಹೇಗಿದೆ? ಗ್ರಾಮೀಣ ಆರ್ಥಿಕತೆ ಮತ್ತು ಬದುಕಿನ ಸಂಬಂಧಗಳು ಹೇಗಿವೆ? ಇತ್ಯಾದಿ ಮಾಹಿತಿ ಕೂಡ ಈ ಕೃತಿಯಲ್ಲಿ ಸಿಗುತ್ತವೆ. ಮತ್ತೆ ಮತ್ತೆ ಜಲಸಂವರ್ಧನೆ, ಸೆಂಬೆನೀರು, ತಲಪುರಿಗೆ, ಜಲಸಾಕ್ಷರತೆ ಮಾತುಗಳು ಇಲ್ಲಿ ಬರುತ್ತವೆ. ಎಲ್ಲೆಲ್ಲಿ ನೀರಿನ ಸಹಜ ಸೆಲೆಗಳಿವೆ; ಎಲ್ಲೆಲ್ಲಿ ಯಾವ್ಯಾವ ರೀತಿಯಲ್ಲಿ ನೀರನ್ನು ಸಂರಕ್ಷಿಸಿ, ಸಂವರ್ಧಿಸಿ ನಿರಂತರ ಕಾಪಾಡಿಕೊಳ್ಳಬೇಕು ಎಂಬ ಸಲಹೆಗಳೂ ಇಲ್ಲಿವೆ. ಜಲಸಾಕ್ಷರತೆಯನ್ನು ಮೂಡಿಸುವ ಕೆಲಸವೂ ಈ ಕೃತಿಯಲ್ಲಿದೆ.
ಈ ಕಥನದಲ್ಲಿ ತೌಲನಿಕ ವಿವರಗಳ ಜೊತೆ ಸಾಮಾಜಿಕ ಬದಲಾವಣೆಗಳನು. ಹಿಡಿದಿಡುವ ಕೆಲಸವನ್ನೂ ಮಾಡಲಾಗಿದೆ. ಹಾಗೆಯೆ ತಮ್ಮ ತಿರುಗಾಟದ ಮತ್ತು ಬದುಕಿನ ಅನುಭವದ ಮೂಲಕ ಹತ್ತಾರು ಸಲಹೆಗಳನ್ನೂ ಸಿ.ಹೊ. ನೀಡಿದ್ದಾರೆ. ಬೇಸಾಯದಲ್ಲಿ ಅಂತರಬೆಳೆ ಬೆಳೆಯುವ ಹಾಗೆ ತೋಟಗಾರಿಕೆಯಲ್ಲೂ ಮಾವು, ಹುಣಸೆ, ಹಲಸು. ನುಗ್ಗೆ, ಸೀಬೆ, ಸಪೋಟ, ನೇರಳೆ ಇತ್ಯಾದಿ ಮಿಶ್ರಮರವಳಿ ಪದ್ಧತಿ ಇರುವ ಬಗ್ಗೆ ಹಾಗೂ ಮೀನುಕೃಶಿ, ಜೇನುಕೃಶಿ, ಕುಕ್ಕಟೋದ್ಯಮ, ಪುತ್ರೋದ್ಯಮ, ಮೊಲ ಸಾಕಾಣಿಕೆ, ಹೈನುಗಾರಿಕೆ. ಕುರಿಮೇಕೆ ಸಾಕಾಣಿಕೆ ಹೀಗೆ ಹತ್ತಾರು ಕೃಶಿಪೂರಕ ಉದ್ಯಮಗಳು ಜಾರಿಯಲ್ಲಿರುವ ಬಗ್ಗೆಯು ಚರ್ಚಿಸಲಾಗಿದೆ.
ಈ ಕೃತಿಯಲ್ಲಿ ಯಾವುದೆ ಚೌಕಟ್ಟುಗಳಿಲ್ಲ. ತಿರುಗಾಟದ ದಾರಿಯೆ ಇದರ ಚೌಕಟು. ಯಾವುದು ಹೇಳಬೇಕು ಯಾವುದನ್ನು ಹೇಳಬಾರದು ಎಂಬ ಆಯ್ಕೆಗಳೂ ಅತಿ ವರ್ಗೀಕರಣಗಳೂ ಇಲ್ಲ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬಂತೆ ತಾವು ಕಂಡದ್ದನ್ನೆಲ್ಲ ಹೊಲತಾಳರು ನಿರೂಪಿಸುತ್ತ ಹೋಗಿದ್ದಾರೆ. ಇನ್ನಶ್ಟು ವಿವರಗಳು ಬೇಕೆನ್ನಿಸಿದೆಡೆ ವಿವರಗಳು ಇಲ್ಲದ ಹೋಲ್ಡಾಲಿದು. ನಿರೂಪಣೆ, ವರದಿ, ಸಂಭಾಶಣೆ, ಭಾಶಣ ಎಲ್ಲವೂ ಇಲ್ಲಿವೆ. ಆದರು 'ಏನಣೇ ಯಾರ್ಯಾರನ್ನೋ ಹೇಳಿದ್ದಿ ನಮ್ ಬಗೆನೆ ಹೇಳಿಲ್ವಲ್ಲಣೋ?' ಎಂದು ಯಾರಾದರೂ ಕೇಳಿಯಾರು ಎಂಬ ಮುಲಾಜಿಗೆ ಬಿದ್ದು, ನಿಶ್ಟುರತೆಯು ಇಲ್ಲದೆ ಕೃತಿ ತುಂಬಾ ವಿಸ್ತಾರವಾಗಿದೆ.
ದೊಡ್ಡಮ್ಮ, ಕಾವಲಮ್ಮ, ಗೊಲ್ಲಾಳಮ್ಮ, ನೇಗಾಲಾಲದಮ್ಮ, ಮೂಗನಳ್ಳಿಯಮ್ಮ, ಚೆನ್ನಪಟ್ಟಣದಮ್ಮ ಹೀಗೆ ಹತ್ತಾರು ದೇವತೆಯರ ಉಲ್ಲೇಖ ಇಲ್ಲಿದೆ. ಇವರೆಲ್ಲ ಶಾಕ್ತರೋ, ಸಿದ್ದ ಮಹಿಳೆಯರೂ ಹೆಚ್ಚಿನ ಅಧ್ಯಯನ ಆಗಬೇಕಿದೆ. ಜನಪದ ಹಾಡುಗಾತಿಯರಾದ ದೊಡ್ಡಕ್ಕ, ಪುಟ್ಟನರಸಮ್ಮ, ಲಕ್ಷ್ಮಿದೇವಮ್ಮ, ಗಂಗಕ್ಕೆ ಮುಂತಾದವರ ಪ್ರಸ್ತಾಪವಿದೆ. ಆದರೆ ಜನಪದ ಸಾಹಿತ್ಯದ ಸೊಗಡಿನ ಪ್ರಸ್ತಾಪವಿಲ್ಲ.
ನೂರಾರು ಹಲಸಿನ ಖಾದ್ಯ ತಯಾರಿಸುವ ಮಂಜಮ್ಮ, ಕುರಿಮೇಕೆ ಸಾಕಾಣಿಕೆ ರತ್ನಮ್ಮ, ಹೈನುಗಾರಿಕೆಯ ರಾಜೇಶ್ವರಿ, ಕಲ್ಲುಬಾವಿ ತೋಟದ ಈರಜ್ಜಿ, ಸಹಕಾರಿ ಬೇಸಾಯದ ಮುಯ್ಯಾಳು ದೊಡ್ಡಮಣಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಮೊದಲಾದ ಹಲವು ಮಹಿಳಾ ಸಾಧಕಿಯರ ವಿವರಗಳು ಇಲ್ಲಿವೆ. ಆದರೆ ಇಡಿ ಪ್ರದೇಶ ಪುರುಶಪ್ರಧಾನ ಆಗಿರುವ ಹಾಗೆಯೆ ಇಲ್ಲಿನ ಸಮೀಕ್ಷೆ ಇದೆ. ಹೊಲತಾಳರು ಇಲ್ಲಿನ ಮಹಿಳಾ ಸಾಧನೆ ಬಗ್ಗೆ ಇನ್ನಶ್ಟು ಫೋಕಸ್ ಮಾಡಬಹುದಿತ್ತು.
ಇಲ್ಲೆಲ್ಲ ಹತ್ತಾರು ಬಗೆಯ ಪ್ರಾದೇಶಿಕ ಪದಗಳ ಬಳಕೆ ಇದೆ. ಉದಾಹರಣೆಗೆ, ಪಣೆಗಾರ, ಶ್ಯಡೆಗಿಡ, ಮಜರೆ ಗ್ರಾಮ, ಸೆಂಬೆನೀರು, ತಲಪುರಿಗೆ ಇತ್ಯಾದಿ, ಇವೆಲ್ಲ ಸ್ಥಳೀಯರಿಗೆ ಪರಿಚಿತ. ಆದರೆ ಇತರರಿಗೆ ಅವುಗಳ ಅರ್ಥವಿವರ ಅಗತ್ಯವಿದೆ. ಹಾಗಾಗಿ ಅನುಬಂಧವಾಗಿ ಪರಿಭಾಶಾ ಕೋಶ ಇದ್ದರೆ ಚೆನ್ನಿತ್ತು.
ಈ ಪುಸ್ತಕವನ್ನು ಓದಿದ ನಂತರ ನಗರಿಗರಿಗೆ ನಾವೂ ಒಂದು ತೋಟ ಮಾಡೋಣ ಅನಿಸಬಹುದು. ಆದರೆ ತೋಟಗಾರಿಕೆ, ಹೈನುಗಾರಿಕೆಯನ್ನೆ ಮುಖ್ಯವಾಗಿ ಬಣ್ಣಿಸುವ ಇದು ಒಂದು ರಮ್ಯವಾದ ಬರವಣಿಗೆ, ಬೆಳೆದ ತೋಟ ಕಣ್ಣಿಗೆ ಕಂಡಾಗ ವರ್ಣಿಸುವುದು. ವಾರ್ಶಿಕ ಉತ್ಪತ್ತಿ ಕುರಿತು ವರದಿ ನೀಡುವುದು ಮೇಲ್ನೋಟಕ್ಕೆ ರಮ್ಯವಾಗಿಯೇ ಕಾಣುತ್ತದೆ. ಆದರೆ ತೋಟದ ಹಿಂದಿನ ಶ್ರಮ, ಸಂಗೋಪನೆ, ಉತ್ಪತ್ತಿ, ಮಾರುಕಟ್ಟೆ ಸಮಸ್ಯೆಗಳನೆಲ್ಲ ಇಲ್ಲಿ ಚರ್ಚಿಸಿರುವುದೆ ಕಡಿಮೆ. ಹೊರಗಿನವರಿಗೆ ಒಳಗಿನ ಬವಣೆ ಕಾಣದು. ಒಳಗಿದ ಹೊಲತಾಳರು ಈ ಕೃತಿಯಲ್ಲಿ ಹೊರಗಣವರ ಹಾಗೆಯೆ ಕಾಣುತ್ತಾರೆ.
-ರಾಮಲಿಂಗಪ್ಪ ಟಿ. ಬೇಗೂರು
(ಕೃಪೆ: ಹೊಸಮನುಷ್ಯ, )
©2024 Book Brahma Private Limited.