ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಪ್ರವಾಸ ಕಥನ -ಪೂರ್ವದಿಂದ ಅತ್ಯಪೂರ್ವಕ್ಕೆ.
ಸಿಂಹಳ, ನೇಪಾಳ, ಬೀರುತ್, ಇರಾನ್, ಅಫಘಾನಿಸ್ತಾನ, ಹಾಂಕಾಂಗ್, ಜಪಾನ್ ದೇಶಗಳಲ್ಲಿ ಸಂಚರಿಸಿ, ಅನುಭವಗಳನ್ನು ಕಟ್ಟಿಕೊಟ್ಟ ಕೃತಿ ಇದು. ಸಿಂಹಳ ದೇಶದಲ್ಲಿ ಸಸ್ಯ ಸಂಪತ್ತು, ಕೇಂಡಿನಗರದ ಸರೋವರದ ವರ್ಣನೆ, ಕೇಂಡಿ ದೇವಾಲಯಗಳ ವರ್ಣನೆ ಇದೆ. ಭಾರತದ ಪ್ರತಿನಿಧಿಯಾಗಿ ಇರಾನ್ ದೇಶದ ರಾಜಧಾನಿ ಟೆಹರಾನ್ ನಗರಕ್ಕೆ ತೆರಳುವಾಗ ವಿಮಾನ ಸಂಸ್ಥೆಯ ಎಂಜಿನಿಯರುಗಳ ಮುಷ್ಕರದಿಂದಾಗಿ ಟೆಹರಾನ್ ಬದಲು ಲೆಬನಾನ್ ಗೆ ವಿಮಾನ ಪ್ರಯಾಣಿಸಿತ್ತು. ಅಲ್ಲಿಯ ಬೀರುತ್ ನಲ್ಲಿ ವಿಮಾನ ಇಳಿದಿತ್ತು. ಮುಂದಿನ ವ್ಯವಸ್ಥೆಯಾಗುವವರೆಗೂ ಒದು ದಿನದ ಕಾಲಾವಕಾಶವಿತ್ತು. ಈ ಅವಕಾಶವನ್ನು ಲೇಖಕರು ಬೀರುತ್ ನಗರ ವೀಕ್ಷಣೆಗೆ ಉಪಯೋಗಿಸಿಕೊಂಡರು. ಬೀರುತ್ ನಗರದಲ್ಲಿ ತಾವು ಕಂಡಿದ್ದನ್ನು ವಿವರಿಸಿದ್ದಾರೆ. ಇರಾನ್ ದೇಶ ಸುತ್ತಾಡಿದ ವಿವರವೂ ಇದೆ. ಅಫಘಾನಿಸ್ತಾನ ರಾಜಧಾನಿ ಕಾಬೂಲ್, ನಿಸರ್ಗ ನೋಟಗಳು, ಮೃಗಾಲಯ, ಮ್ಯೂಜಿಯಂ ಗಳನ್ನು ವಿವರಿಸಿದ್ದಾರೆ. ನೇಪಾಳದ ಪಶುಪತಿನಾಥ ದೇವಾಲಯ, ಚಂಗು ನಾರಾಯಣ ದೇವಾಲಯ, ನಂತರ ಭಾಟಗಾಮುವಿನ ದೇಗುಲಗಳು, ಭೈರವ ದೇವಾಲಯ, ನೇಪಾಲದಲ್ಲಿರುವ ಗೋಕರ್ಣ ಎಂಬ ಕ್ಷೇತ್ರ, ಪಶುರಕ್ಷಣಾ ಧಾಮ ಇತ್ಯಾದಿ ವಿವರಗಳಿವೆ. ಯಕ್ಷಗಾನ ಪ್ರದರ್ಶನಗಳನ್ನು ನೀಡಲು ಕೇಂದ್ರದ ಸಾಂಸ್ಕೃತಿಕ ಇಲಾಖೆಯಿಂದ ಹಾಂಕಾಂಗ್ ಗೆ ತೆರಳಿದ್ದರಿಂದ ಲೇಖಕರು ಅಲ್ಲಿಯ ದೇಶೀಯ ವಿಚಾರ, ವ್ಯಾಪಾರಗಳ ವೈಭವ, ಚೀನಿಯರ ವಿಚಾರ ಇತ್ಯಾದಿ ವಿವರಗಳನ್ನು ನೀಡಿದ್ದಾರೆ. ‘ಆಧುನಿಕ ಯುಗದ ಸ್ಪರ್ಧೆಯಲ್ಲಿ ಜಪಾನಿಯರು ನಮಗಿಂತಲೂ ಮುಂದಕ್ಕೆ ಜಿಗಿದು ಓಡಿದ್ದು, ಮಾತ್ರವಲ್ಲ; ಎಷ್ಟೋ ವಿಷಯಗಳಲ್ಲಿ ಪಾಶ್ಚಾತ್ಯರನ್ನೂ ಮೀರಿಸಿದ್ದಾರೆ. ಆದ್ದರಿಂದ, ಈ ಬರಹಕ್ಕೆ ‘ಪೂರ್ವದಿಂದ ಅತ್ಯಪೂರ್ವಕ್ಕೆ’ ಎಂಬ ಶೀರ್ಷಿಕೆ ನೀಡಿದ್ದಾಗಿ ಕಾರಂತರು ಹೇಳಿಕೊಂಡಿದ್ದಾರೆ.
ಸಾಗರದ ಅಕ್ಷರ ಪ್ರಕಾಶನವು 1982ರಲ್ಲಿ (ಪುಟ: 227) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2024 Book Brahma Private Limited.