ಸಾವಿರಾರು ವರ್ಷಗಳ ಇತಿಹಾಸವುಳ್ಳ ಆಫ್ರಿಕಾದಲ್ಲಿ ಮಾನವನ ಬೆಳವಣಿಗೆಯ ಕುತೂಹಲಕಾರಿ ಹೆಜ್ಜೆಗುರುತುಗಳಿವೆ. ಯೂರೋಪಿನ ಸಾಮ್ರಾಜ್ಯಶಾಹಿ ಆಡಳಿತದ ನಡುವೆ ತನ್ನ ನೆಲಮೂಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುಲು ನಡೆಸಿದ ಹೆಣಗಾಟದ ಕುರುಹುಗಳಿವೆ. ಆಫ್ರಿಕಾದಲ್ಲಿರುವ ತಾಂಜಾನಿಯ ಇವೆಲ್ಲದರ ಅಪೂರ್ವ ಸಂಕೇತ.
ತಾಂಜಾನಿಯವನ್ನು ಓದುಗರ ಮುಂದೆ ತೆರೆದಿಡುವ ಕೃತಿ ಪ್ರವಾಸ ಕಥನ, ಅನುಭವ ಕಥನ ಮಾತ್ರವಲ್ಲ ಒಂದು ದೇಶದ ಕಥೆ ಕೂಡ.
‘ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು’
ಡಾ. ಡಿ. ಮಂಗಳಾ ಪ್ರಿಯದರ್ಶಿನಿ ಅವರು ತಾಂಜಾನಿಯಾ ದೇಶದ ತಮ್ಮ ಪ್ರವಾಸದ ಅನುಭವಗಳನ್ನು ದಾಖಲಿಸಿರುವ ಕೃತಿ ‘ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು’. ಕಗ್ಗತ್ತಲ ಖಂಡವೆಂದು ಇತಿಹಾಸದಲ್ಲಿ ವ್ಯಾಖ್ಯಾನಿತವಾದ ಭೂಖಂಡವೊಂದು ತನ್ನೊಳಗಿನ ಕತ್ತಲಿನಿಂದಲೇ ಸ್ವಾತಂತ್ರ್ಯ, ಸಹಬಾಳ್ವೆಗಳ ಬೆಳಕಿನ ಕಿರಣಗಳನ್ನು ಇಡೀ ವಿಶ್ವಕ್ಕೆ ಪಸರಿಸಿದ್ದು ಇಂದು ಚರಿತ್ರೆ ಮತ್ತು ವಾಸ್ತವ. ಇಂತಹ ಭೂಖಂಡದ ಒಂದು ದೇಶ ತಾಂಜಾನಿಯಾ. ಈ ರಾಷ್ಟ್ರದೊಳಗೆ ಕೈಗೊಂಡ ವಿಹಾರಯಾತ್ರೆಯ ಅನುಭವ ಕಥನ ಈ ಕೃತಿ. ಇದೊಂದು ನಿಬಿಡ ಶಬ್ದಚಿತ್ರಗಳಿಂದ ಕೂಡಿದ ರೂಪಕ.
ಇದು ಪ್ರವಾಸದ ಅನುಭವ ಕಥನ ಮಾತ್ರವಲ್ಲ. ಒಂದು ನಿರ್ದಿಷ್ಟ ಸ್ಥಳ ಮತ್ತು ಅಲ್ಲಿನ ಜನಾಂಗ ಮತ್ತು ನಾಗರಿಕತೆಗಳ ತಳಸ್ಪರ್ಶಿ ಅಧ್ಯಯನವೂ ಆಗಿದೆ. ಈ ಹಿನ್ನೆಲೆಯಲ್ಲಿ ತಾಂಜಾನಿಯಾದ ಮೂಲ ನಿವಾಸಿಗಳಾದ ಹಡ್ಜಾಬೇ, ಸಂದಾವೇ, ಮಸ್ಸೈ ಮೊದಲಾದ ಜನಾಂಗಗಳ ಮಾನವಶಾಸ್ತ್ರೀಯ ವಿವರಗಳು, ಡರ್ ಎ ಸಲಾಂ ಮೊದಲಾದ ಸ್ಥಳಗಳ ಸಾಂಸ್ಕøತಿಕ ಮತ್ತು ಐತಿಹಾಸಿಕ ಮಹತ್ವಗಳ ಬಗೆಗೆ ಕೃತಿ ನೀಡುವ ಮಾಹಿತಿಗಳು ಮತ್ತು ಒಳನೋಟಗಳು ಈ ಕೃತಿಯನ್ನು ಕೇವಲ ಪ್ರವಾಸ ಸಾಹಿತ್ಯದ ಹಂತದಿಂದ ವೇಲೇರಿಸಿ ಸಾಂಸ್ಕøತಿಕ ಅಧ್ಯಯನದ ಕಡೆಗೆ ಕೊಂಡೊಯ್ಯುತ್ತದೆ.
ಕೃತಿ ಪ್ರಧಾನವಾಗಿ ಆಫ್ರಿಕಾ ಪ್ರವಾಸದ ಅನುಭವ ಕಥನವಾಗಿದ್ದರೂ ಅದರ ಹರಹು ಯೂರೋಪ್ ಮತ್ತು ಅಮೆರಿಕಾದಂತಹ ಖಂಡಗಳ ಭೌಗೋಳಿಕ ಮತ್ತು ಸಾಂಸ್ಕೃತಿಕ ಚಹರೆಗಳನ್ನು ಹಿತವೂ ಮಿತವೂ ಆದ ಮಾತುಗಳಲ್ಲಿ ಹಿಡಿದಿಟ್ಟಿದೆ. ಲೇಖಕಿಯಿಂದ ‘ಆಂಗ್ಲ ಗಂಗೆ’ ಎಂಬ ಹೆಸರು ಪಡೆದ ಥೇಮ್ಸ್ ನದಿ ಹರಿಯುವ ಲಂಡನ್ ನಗರಿಯ ಐತಿಹಾಸಿಕ ಭವ್ಯತೆ, ಇಟಲಿಯ ಸಾಂಸ್ಕøತಿಕ ವೈಭವಗಳ ಸಂಕ್ಷಿಪ್ತ ನಿರೂಪಣೆಯ ನಂತರ ಕಥನ ಅಮೆರಿಕಾದ ಸಮಾಜದತ್ತ ಹೊರಳುತ್ತದೆ. ಯೂರೋಪಿನ ಸಹಜ ಸೌಂದರ್ಯವನ್ನು ಮೀರಿಸುವಂತೆ ಸೆಳೆಯುವ ನಿರ್ಮಿತ ಸೌದರ್ಯ ಅಮೆರಿಕಾದ್ದು. ಕಣ್ಣು ಕೋರೈಸುವ ಆಟಿಕೆಗಳನ್ನು ಮುಂದಿಟ್ಟು ಮಗುವನ್ನು ಒಲಿಸಿಕೊಂಡು ಮನೆಯಲ್ಲೆ ಸೆರೆಹಾಕುವ ಇಂದಿನ ಕುಟುಂಬ ವಾತಾವರಣದ ವಿಸ್ತøತ ರೂಪದಂತಿರುವ ಅಮೆರಿಕಾದ ‘ ಸೇಸಮ್ಮನ ಗವಿಯ ವಾತಾವರಣ’ವು ಭಾರತದಂತಹ ಭದ್ರ ಕೌಟುಂಬಿಕ ವ್ಯವಸ್ಥೆಯೊಳಗೆ ಪಳಗಿದ ನಮಗೆ ಹೇಗೆ ದಿಗ್ಭ್ರಮೆ ಹುಟ್ಟಿಸಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ತರುತ್ತದೆ ಎಂಬುದನ್ನು ಮನದಟ್ಟು ಮಾಡುತ್ತದೆ. ‘ಮುಪ್ಪಿನಲ್ಲಿ ಮಕ್ಕಳ ಆಸರೆ’ ಎಂಬ ನಾಣ್ನುಡಿಯಿಂದ ‘ಕರ್ತವ್ಯಪರರಾಗಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸಬೇಕೇ ಹೊರತು, ಅವರಿಂದ ಯಾವುದೇ ನಿರೀಕ್ಷೆಯಿಂದಲ್ಲ’ ಎಂಬ ತತ್ತ್ವದ ಕಡೆಗೆ ಹೊರಳಬೇಕಾಗಿರುವುದರ ಸಹಜತೆಯನ್ನು ತಣ್ಣಗೆ ಹೇಳಿಬಿಡುತ್ತದೆ.
ಅರಬ್ಬರ ನಾಡಿನ ಐಷಾರಾಮಿ ಬದುಕಿನ ಪುಟ್ಟ ಅಧ್ಯಾಯಗಳನ್ನು ತೆರೆದಿಟ್ಟ ನಂತರ ಕೃತಿ ಆಫ್ರಿಕಾದ ಭೌಗೋಳಿಕ ಪರಿಸರದ ಭವ್ಯತೆಯ ಪರಿಚಯ ನೀಡಿ ಅದರ ಇತಿಹಾಸದ ನಿರೂಪಣೆಗೆ ತೊಡಗುತ್ತದೆ. ಮಾನವನ ಮೊದಲ ಪಳೆಯುಳಿಕೆ ಕಂಡದ್ದು ಇಲ್ಲಿ. ಬೇಸಾಯದ ಕಲ್ಪನೆ ಮೊದಲು ಮೂಡಿದ್ದು ಇಲ್ಲಿ. ಭೌಗೋಳಿಕವಾಗಿ ಕಗ್ಗತ್ತಲ ಖಂಡ ಎಂದು ಕರೆಸಿಕೊಂಡರೂ ಮಾನವನ ನಾಗರೀಕತೆಯ ಮೊದಲ ಬೆಳಕಿನ ಕಿರಣಗಳು ಹುಟ್ಟಿದ್ದು ಇಲ್ಲಿಂದ. ಇಂತಹ ಹಲವು ಮೊದಲುಗಳಿಗೆ ನೆಲೆಯಾದ ಆಫ್ರಿಕಾದ ನಾಗರಿಕತೆಯಲ್ಲಿ ಬಂಟೂ, ಕುಷಿಟಿಕ್ ಮೊದಲಾದ ಜನಾಂಗಗಳು ಸಮೃದ್ಧ ನಾಗರಿಕತೆಯನ್ನು ಕಟ್ಟಿಕೊಂಡದ್ದರ ಇತಿಹಾಸವನ್ನು ಉಲ್ಲೇಖಿಸುವ ಲೇಖಕರು ನಾಡಿನ ತಮ್ಮ ಅನುಭವ ಕಥನದ ಕೇಂದ್ರವಾದ ತಾಂಜಾನಿಯಾ ನಾಡಿನ ಅಸ್ಮಿತೆಗಳನ್ನು ಗುರುತಿಸುವತ್ತ ಸಾಗುತ್ತದೆ.
ತಾಂಜಾನಿಯಾ ಪ್ರವಾಸದ ಮೊದಲ ತಾಣ ಡರ್ ಎ ಸಲಾಂ. ಆಫ್ರಿಕಾದ ಸಾಂಸ್ಕೃತಿಕ ರಾಜಧಾನಿಯಾದ
ಈ ಸ್ಥಳದ ವೈವಿಧ್ಯಮಯ ಇತಿಹಾಸವನ್ನು ಲೇಖಕರು ಅಷ್ಟೇ ವರ್ಣರಂಜಿತವಾಗಿ ಕಟ್ಟಿಕೊಡುತ್ತಾರೆ. ಇಲ್ಲಿನ ದೇವಾಲಯ ಬೀದಿ, ಭಾರತೀಯ ಸಂಸ್ಕøತಿಯ ಬಗೆಗೆ ಅಲ್ಲಿನ ಜನರ ಅಭಿಮಾನ, ಹಿಂದೂ ಮಹಾಸಾಗರದ ಬೃಹತ್ತು-ಮಹತ್ತುಗಳು, ತಾಂಜಾನಿಯಾದ ನ್ಯಾಷನಲ್ ಮ್ಯೂಸಿಯಂ, ಮರದ ಕೆತ್ತನೆಯ ಮಾರುಕಟ್ಟೆ, ಮೀನು ಮಾರುಕಟ್ಟೆ, ಬಾಗಾಮೋಯೋದ ಕಣ್ಣೀರ ಕಥೆಗಳ ಜೊತೆ ಈ ಭಾಗದ ಆಫ್ರಿಕನ್ನರ ಸಂಸ್ಕøತಿಯನ್ನು ಕಣ್ತುಂಬಿದಂತೆ ಚಿತ್ರಿಸುತ್ತಾರೆ.
ನಂತರದ ಭೇಟಿ ಜಾಂಜೀಬಾರ್‍ಗೆ. ಲೇಖಕರು ‘ಕಿಲಿಮಂಜಾರೋ’ ಹಡಗನ್ನೇರಿ ಕಿಲಿಮಂಜಾರೋ ಪರ್ವತಕ್ಕೆ ತೆರಳುತ್ತಾರೆ. ನಂತರ ಜಾಂಜಿಬಾರಿನ ಬಹುಪಾಲು ಸ್ಥಳಗಳನ್ನು ಲೇಖಕರು ಆಮೂಲಾಗ್ರವಾಗಿ ಪರಿಚಯಿಸಿಕೊಡುತ್ತಾರೆ. ಹತ್ತು ಹಲವು ಸಣ್ಣ-ದೊಡ್ಡ ಸ್ಥಳಗಳ ಪರಿಚಯಾತ್ಮಕ ವಿವರಣೆ ಇಲ್ಲಿದೆ. ‘ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ; ಎಲ್ಲಕ್ಕೂ ಇದೆ ಅರ್ಥ, ನೀರೆಲ್ಲವೂ ತೀರ್ಥ’ ಎಂಬಷ್ಟು ತೀವ್ರ ಸಂವೇದನೆಯಲ್ಲಿ ಪ್ರವಾಸವನ್ನು ಮುಂದುವರಿಸಿದ್ದಾರೆ. ಪ್ರವಾಸದ ಪ್ರತಿಯೊಂದು ಕ್ಷಣವನ್ನೂ ತೀವ್ರವಾಗಿ ಅನುಭವಿಸಿ, ಆ ಆನುಭವಗಳನ್ನು ಚಿಪ್ಪಿನೊಳಗಣ ಮುತ್ತಿನಂತೆ ಸ್ಮರಣಕೋಶದೊಳಗೆ ಜತನವಾಗಿ ಕೂಡಿಟ್ಟು, ಬಹುಕಾಲದ ಪರಿಭಾವನೆಯಿಂದ ಹದಗೊಳಿಸಿ, ನಂತರ ಒಂದೊಂದು ಅನುಭವಗಳನ್ನು ಆಯ್ದು ಕನ್ನಡದ ಹೆಮ್ಮೆಯಾದ ಸರಳ-ಸುಂದರ ಭಾಷೆಯೊಳಗೆ ಪೋಣಿಸಿದ ಹಾರದಂತಿದೆ ಈ ಕೃತಿ.
ಜಾಂಜೀಬಾರ್ ನಿಂದ ಸೋಂಗಿಯಾಗೆ ತೆರಳುವ ಮಾರ್ಗದಲ್ಲಿ ಬೇಯಾಗೆ ಭೇಟಿ ನೀಡಿ ನ್ಯಾಸಾ ಸರೋವರದ ವೀಕ್ಷಣೆ ಸಾಗಿತ್ತದೆ. ಇದೊಂದು ವಿಫಲ ರಿಫ್ಟ್ ನಿಂದ ನಿರ್ಮಿತವಾದ ಸಿಹಿನೀರನ ಸರೋವರ; ಮತ್ಸ್ಯ ಸಂಕುಲಕ್ಕೆ ಜೀವದಾಣ. ಇದರ ಅಂದ-ಚಂದ, ಬಳುಕುಗಳ ಜೊತೆಗೆ ಇಲ್ಲಿನ ಮೀನುಗಾರರ ನಿರಂತರ ಕಾಯಕವನ್ನು ವರ್ಣಿಸುವ ಲೇಖಕಿ ‘ನಕ್ಷತ್ರಗಳ ಸರೋವರ’ ಎಂದು ಸ್ಥಳೀಯವಾಗಿ ಕರೆಯಲ್ಪಡುವ ನ್ಯಾಸಾ ಸರೋವರದ ಬಗೆಗೆ ವಿಪುಲ ಮಾಹಿತಿಗಳನ್ನು ನೀಡುತ್ತಾರೆ. ಈ ವಿವರಣೆಗಳನ್ನು ಓದುತ್ತಾ ಹೋದಂತೆ ನಮ್ಮ ದಾಲ್ ಸರೋವರ ನೆನಪಾಯಿತು. ಯಾವುದನ್ನೊ ನೋಡುವಾಗ/ ಓದುತ್ತಿರುವಾಗ ಅದರೊಂದಿಗೆ ಕಿಂಚಿತ್ತಾದರೂ ಸಾಮ್ಯತೆ ಪಡೆದ ಇನ್ನಾವುದೋ ನೆನಪಾಗಿ ಉಂಟಾಗುವ ಅಲಂಕಾರ ಪ್ರತೀತಿಯಿದು.
ಸೋಂಗಿಯಾದ ಭೇಟಿಯನ್ನು ಒಂದು ಸ್ಥಳ ವೀಕ್ಷಣೆ ಎನ್ನುವುದಕ್ಕಿಂತ ಅದನ್ನೊಂದು ಸಾಮಾಜಿಕ ಅಧ್ಯಯನ ಎನ್ನಬಹುದು. ಅಲ್ಲಿನ ಪ್ರಧಾನ ಜನಾಂಗ ಮಸ್ಸೈ ಬುಡಕಟ್ಟಿನ ಕೌಟುಂಬಿಕ ವಿವರಗಳು, ಅಲ್ಲಿನ ಗಂಡು-ಹೆಣ್ಣುಗಳ ಸೌಂದರ್ಯ ಮತ್ತು ಶೌರ್ಯಗಳನ್ನು ಕುರಿತಾಗಿ ಅವರಲ್ಲಿರುವ ನಂಬಿಕೆಗಳು, ಅವರ ಜೀವನ ಶೈಲಿ, ಆಹಾರ ಮತ್ತು ವೈದ್ಯ ಪದ್ಧತಿ, ಉಡುಗೆ-ತೊಡುಗೆ, ವಿವಾಹ ಪದ್ಧತಿ, ವಧುದಕ್ಷಿಣೆ ಮೊದಲಾದ ಎಲ್ಲವನ್ನೂ ಸವಿವರವಾಗಿ ಕೃತಿ ಹೇಳುತ್ತದೆ. ಡೇರೆಯೊಳಗಿನ ಅಜ್ಜನ ಕಲೆಗಾರಿಕೆ, ಮಿಕುಮಿಯ ಪ್ರಾಣಿ ವೈವಿಧ್ಯಗಳನ್ನು ಕಣ್ಣಿಗೆ ಕಟ್ಟಿ ನಿಲ್ಲಿಸುತ್ತದೆ. ‘ ಇಂಕಾಜಿಜಿಕ್’ ಎಂದು ಕರೆಯಲ್ಪಡುವ ಗುಡಿಸಲು ಮನೆಗಳನ್ನು ನಿರ್ಮಿಸುವ ದೃಢಶಾಲಿಗಳಾದ ಮಸ್ಸೈ ಹೆಣ್ಣುಮಕ್ಕಳ ಬಗೆಗೆ ಓದುವಾಗ ಗರ್ವಬೆರೆತ ಹೆಮ್ಮೆಯೊಂದು ಮೂಡುತ್ತದೆ. ಅದೇ ವೇಳೆಗೆ ಎಮರಾಟ ಎಂಬ ಲಿಂಗಛೇದ ಕ್ರಿಯೆ ಮತ್ತು ಇಮ್ಯುರಾತರೋ ಎಂಬ ಯೋನಿಛೇದ ಕ್ರಿಯೆಗಳ ವಿವರಣೆಯು ಭಯಮಿಶ್ರಿತ ವಿಸ್ಮಯವನ್ನು ಮೂಡಿಸುತ್ತದೆ. ಮುಂದುವರಿದು ಇಂದು ಅಲ್ಲಿ ನಡೆಯುತ್ತಿರುವ ಸಂಸ್ಕøತೀಕರಣ ಪ್ರಕ್ರಿಯೆಯ ವಿನ್ಯಾಸವನ್ನು ಲೇಖಕರು ವಿವರಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಇವರನ್ನು ತರುವ ರಾಷ್ಟ್ರೀಯ ಉದ್ದೇಶದ ಸಾಧಕತೆ ಮತ್ತು ಮಿತಿಗಳನ್ನು ಯೋಚಿಸಿದಾಗ ನಿರ್ದಿಷ್ಟ ಸಂಸ್ಕøತಿಯೊಂದರ ನಾಶ ಸುಧಾರಕ ವರ್ಗದ ಗಮನಕ್ಕೆ ಬಾರದೆ ಹೇಗೆ ನಡೆದುಹೋಗುತ್ತದೆ ಎಂಬುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಲೇಖಕರ ‘ ನೆಲೆ ತಪ್ಪಿದ ಹಕ್ಕಿಗಳ ನೋವಿನ ಹಾಡಿನ’ ವ್ಯಾಖ್ಯಾನ ವಸ್ತುನಿಷ್ಠವಾಗಿದ್ದು ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ‘ ಸಂಸ್ಕøತೀಕರಣ’ ಎಂಬುದು ಎಷ್ಟೇ ಮಹತ್ವಪೂರ್ಣವೂ, ಸಕಾರಾತ್ಮಕ ಉದ್ದೇಶವುಳ್ಳದ್ದೂ ಆಗಿದ್ದರೂ, ಅದು ತನಗರಿವಿಲ್ಲದೆಯೇ ತನ್ನೊಳಗೆ ವಿನಾಶದ ಬೀಜವನ್ನು ಅಡಗಿಸಿಕೊಂಡಿರುತ್ತದೆ. ಈ ವಿರೋಧಾಭಾಸವು ಎಲ್ಲ ಸಂಸ್ಕøತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಜರುಗುತ್ತಿರುತ್ತದೆ.
ಪ್ರಸ್ತುತ ತಾಂಜಾನಿಯಾ ಪ್ರವಾಸದ ಕೊನೆಯ ಹಂತ ದೊಡಾಮ ನಗರದ ಭೇಟಿ. ಲೇಖಕರು ಇಲ್ಲಿನ ನಗರ ವ್ಯವಸ್ಥೆ, ಅದೆ ಇತಿಹಾಸ, ದೊಡಾಮ ವಿಶ್ವವಿದ್ಯಾಲಯ ಮತ್ತು ಸೈಂಟ್ ಜಾನ್ಸ್ ಯೂನಿವರ್ಸಿಟಿ ಆಫ್ ತಾಂಜಾನಿಯಾಗಳಲ್ಲಿನ ಶಿಕ್ಷಣ ವ್ಯವಸ್ಥೆ, ಚರ್ಚ್ ಮತ್ತು ಮಸೀದಿಗಳು, ಸಂಸತ್ ಭವನ, ಚೀನೀಮಯವಾದ ಬದುಕು ಎಲ್ಲವನ್ನೂ ವರ್ಣರಂಜಿತವಾಗಿ ವಿವರಿಸುತ್ತಲೇ ಅಲ್ಲಿನ ಹೆಣ್ಣು ಮಕ್ಕಳ ಬಾಲ್ಯವಿವಾಹ, ಆರೋಗ್ಯ ಸಮಸ್ಯೆಗಳು ಮೊದಲಾದ ಸಾಮಾಜಿಕ ಅನಿಷ್ಟಗಳ ಬಗೆಗೂ ಗಮನ ಸೆಳೆಯುತ್ತಾರೆ.
ಸೋಂಗಿಯಾದ ಮಿಕುಮಿ ರಾಷ್ಟ್ರೀಯ ಉದ್ಯಾನವನದ ವೀಕ್ಷಣೆಯ ಸಂದರ್ಭದಲ್ಲಿ ಉಂಟಾದ ಗಲಿಬಿಲಿಯ ಹೊತ್ತಿನಲ್ಲಿ ಲೇಖಕಿ ಹೇಳುವ ಮಾತು, ‘ ಕ್ರೂರಪ್ರಾಣಿಯೊಂದು ನಮ್ಮನ್ನಟ್ಟಿಸಿಕೊಂಡು ಪ್ರಾಣಗಳಿಗೆ ಸವಾಲು ಹಾಕುವಾಗ ಸೌಂದರ್ಯಕ್ಕಿಂತ ಪ್ರಾಣವೇ ಹೆಚ್ಚು ಆಪ್ಯಾಯಮಾನವಾಗುತ್ತದೆ’ ಎಂದು. ನಿಜ, ಸೌಂದರ್ಯಕ್ಕಿಂತ ಮಾತ್ರವಲ್ಲ, ಮನುಷ್ಯ-ಮನುಷ್ಯರ ನಡುವೆ ಪ್ರತ್ಯೇಕತೆಯ ಗೋಡೆ ನಿರ್ಮಿಸುವ ಧರ್ಮ, ಜಾತಿ, ಬಣ್ಣ, ಅಂಧಾಭಿಮಾನಗಳು ಎಲ್ಲವೂ ಹಿನ್ನೆಗೆ ಸರಿದು ಅಂತಿಮವಾಗಿ ಬದುಕಿ ಉಳಿಯುವ ಅಪೇಕ್ಷೆ ಕಡಲರಿದು ಬಿಡುತ್ತದೆ. ಬದುಕುಳಿಯುವುದು ಮಾನವನನ್ನೂ ಒಳಗೊಂಡಂತೆ ಎಲ್ಲ ಜೀವಸಂಕುಲಗಳ ನಿಜವಾದ ಅಗತ್ಯ ಮತ್ತು ಬಯಕೆ. ಉಳಿದೆಲ್ಲ ಅವರ ಅಹಂನ ತಣಿವಿಗಾಗಿ ಕಟ್ಟಿಕೊಂಡ ಕೃತ್ರಿಮ ವಿಚಾರಗಳು ಎಂದೆನಿಸುತ್ತದೆ. ಯಾವ ದಿನ ಮನುಷ್ಯ ತನ್ನ ಸ್ವಾರ್ಥ, ಅಹಂ, ಅಸಹಜ ವಿಚಾರಗಳಿಂದ ಹೊರಬರುತ್ತಾನೋ ಅಂದು ಮಾನವ ಕುಲದ ನಿಜವಾದ ಉದ್ಧಾರ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ. ಆಫ್ರಿಕನ್ನರ “ಉಬಂಟು” ಈ ಪ್ರಕ್ರಿಯೆಗೆ ಮಾದರಿಯೊಂದನ್ನು ಒದಗಿಸಿಕೊಡಬಲ್ಲದು. “I am because we are” ಎಂಬ ಘೋಷವಾಕ್ಯದೊಂದಿಗೆ ನಿಂತಿರುವ ‘ಉಬಂಟು’ ತತ್ತ್ವ ಮಾನವ ತನ್ನೆಲ್ಲ ವೈಯಕ್ತಿಕತೆಗಳನ್ನೂ ಮೀರಿ ಸಾಮೂಹಿಕವಾಗಿ, ಸಾಮುದಾಯಿಕವಾಗಿ ಬದುಕಬೇಕಾದ, ಆಲೋಚಿಸಬೇಕಾದ, ಬೆಳೆಯಬೇಕಾದ ಅಗತ್ಯವನ್ನು ಸಾರುತ್ತದೆ. ನಾಗರೀಕತೆ ಎಂಬುದೇ “ಒಟ್ಟಿಗೆ ಬದುಕುವ ಮತ್ತು ಒಟ್ಟಿಗೆ ಬೆಳೆಯುವ” ಕ್ರಿಯೆಯನ್ನು ಮೂಲಮಂತ್ರವಾಗಿ ಉಳ್ಳದ್ದು. ವಿಶ್ವದ ಜನತೆ ತನ್ನ ಸಹಜೀವಿ ಮನುಷ್ಯರ ಜೊತೆಯಲ್ಲು ಮತ್ತು ತನ್ನೊಂದಿಗೆ ಸಹ ಅಸ್ತಿತ್ವದಲ್ಲಿರುವ ಪರಿಸರದ ಎಲ್ಲ ಚರಾಚರಗಳೊಂದಿಗೂ ಸಹಬಾಳ್ವೆಯನ್ನು ನಡೆಸುವ ಮನಃಸ್ಥಿತಿಯನ್ನೂ ಬೆಳೆಸಿಕೊಳ್ಳಬೇಕು. ಈ ಹೊತ್ತಿನಲ್ಲಿ ಆಫ್ರಿಕನ್ನರ “ ನಾನಿದ್ದೇನೆ, ಏಕೆಂದರೆ ನಾವಿದ್ದೇವೆ” ಎಂಬ ‘ಉಬಂಟು’ ವ್ಯಾಖ್ಯಾನ ವಿಶ್ವಕ್ಕೆ ಮಾದರಿಯಾಗಬಹುದು. ಈ ನೆಲೆಯಲ್ಲಿ ಓದುಗರನ್ನು ಚಿಂತನೆಗೆ ಹಚ್ಚಿ ಕೃತಿ ವಿರಮಿಸುತ್ತದೆ.
ಶೋಭಾರಾಣಿ ಎನ್.
©2024 Book Brahma Private Limited.