ಲೇಖಕಿ ಸುಚಿತ್ರಾ ಹೆಗಡೆ ಅವರ ಪ್ರವಾಸ ಕಥನ ಜಗವ ಸುತ್ತುವ ಮಾಯೆ. ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕಾಶಿಗೆ ಹೋದವರು ಎಷ್ಟೋ ಜನರಿರಬಹುದು. ಸುಚಿತ್ತಾರೂ ಹೋಗಿ ಬರೆಯುತ್ತಾರೆ. ಆದರೆ, ಬರವಣಿಗೆಯಲ್ಲಿ ಅವರು ಕಾಣಿಸುವುದು ಅಲ್ಲಿಯ ಗಲ್ಲಿಗಲ್ಲಿಯ ಚಿತ್ರಣ, ಅಲ್ಲಿ ಅರಳಿಕೊಳ್ಳುವ ಆಹಾರ ವೈವಿಧ್ಯ, ಅದನ್ನು ತಯಾರಿಸುವ ಜನರ ಆಪ್ತಚಿತ್ರವನ್ನು ಸುಚಿತ್ರಾ ಅವರ ಬರಹ ಓದಿದವರೆಲ್ಲ ತಮ್ಮ ಕನಸಿನ ಪ್ರವಾಸತಾಣಗಳ ಪಟ್ಟಿಯಲ್ಲಿ ಅವರು ಬರೆದ ಸ್ಥಳವನ್ನು ಸೇರಿಸಿಕೊಳ್ಳುವುದು ಖಚಿತ ಅವರ ಬರಹ ಓದುತ್ತಾ ಬಾಲಿವುಡ್ ಹಾಡಿನ ಚುಂಗು ಹಿಡಿದು ಒಂದು ಸುತ್ತು ಬರಬಹುದು. ಸ್ವಾತಂತ್ರ್ಯ ಹೋರಾಟಗಾರರ ನೆನಪೂ ಇನ್ನೆಲ್ಲೋ ಆಗಬಹುದು, ತಣ್ಣಗೆ ಮರದ ನೆರಳಿಗೆ ಖುಷಿಪಡುತ್ತಾ ಕುಳಿತ ಅನುಭವವೂ ಸಿಗಬಹುದು. ಹೀಗೆ ಅನುಭವಗಳನ್ನು ಸಜೀವವಾಗಿ, ಹೃದ್ಯವಾಗಿ ಕಟ್ಟಿಕೊಡುವ ಶಕ್ತಿ ಅವರ ಭಾಷಾಶೈಲಿಯಲ್ಲಿದೆ. ಕಾರಂತರ ಅಪೂರ್ವ ಪಶ್ಚಿಮ, ಎ.ಎನ್.ಮೂರ್ತಿರಾಯರ ಅಪರವಯಸ್ಕನ ಅಮೆರಿಕ ಯಾತ್ರೆ.. ಹೀಗೆ ಕನ್ನಡದಲ್ಲಿ ಪ್ರವಾಸ ಕಥನಗಳ ಒಂದು ದೊಡ್ಡ ಪರಂಪರೆಯೇ ಇದೆ. ಈಚಿನ ದಿನಗಳಲ್ಲಿ ಪ್ರವಾಸ ಹೋಗುವವರೂ ಬಹಳಷ್ಟು, ಬರೆಯುವವರೂ ಹಲವರು. ಇವರೆಲ್ಲರ ಮಧ್ಯೆ ಚೆಂದದೊಂದು ಸಾಹಿತ್ಯಕ ಸೊಗಡಿನೊಂದಿಗೆ ಪರಂಪರೆಯ ಕೊಂಡಿಗೆ ಹೊಸ ಸೊಗಸಿನ ಮುಂದುವರಿಕೆಯಂತೆ ಕಾಣುತ್ತಿರುವವರು ಸುಚಿತ್ರಾ ಅವರು ಇನ್ನಷ್ಟು ದೇಶ ಸುತ್ತಲಿ, ಕೋಶ ಬರೆಯಲಿ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.