ಭೂತಾನ್-ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ-ಡಿ.ಜಿ.ಮಲ್ಲಿಕಾರ್ಜುನ ಅವರು ಪ್ರವಾಸ ಕಥನ. ಆಧುನಿಕತೆಯೊಂದಿಗೆ ಅಧ್ಯಾತ್ಮಿಕತೆಯನ್ನೂ ಮೈಗೂಡಿಸಿಕೊಂಡಿರುವುದರಿಂದ ಭೂತಾನ್ ಜನರ ಮುಖದಲ್ಲಿ ದುಃಖದ ಭಾವನೆಯ ಬದಲಾಗಿ ಸದಾ ನಗು ಮತ್ತು ಪ್ರಶಾಂತತೆಯನ್ನು ಕಾಣಬಹುದಾಗಿದೆ. ಅದುವೇ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯದ ರಹಸ್ಯ.
ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿರುವ ಅವರದ್ದು ಮಾತು ಕಡಿಮೆ. ಅವರು ಅಂತರ್ಮುಖಿಗಳು. ಸಹಾಯ ಮಾಡಲಾಗದಿದ್ದರೆ ತೊಂದರೆಯನ್ನು ಮಾಡಬಾರದೆಂಬ ಧೋರಣೆ. ಸಂತಸವೆಂಬುದು ಹೊರಗೆಲ್ಲಿಂದಲೋ ಬರುವುದಿಲ್ಲ ನಮ್ಮೊಳಗೆ ಹುಟ್ಟಬೇಕು ಮತ್ತು ನಮ್ಮ ಸಂತಸಕ್ಕೆ ಬೇರೆ ಯಾರೋ ಕಾರಣರಲ್ಲ, ನಾವೇ ಕಾರಣರು ಎಂಬ ಸತ್ಯವನ್ನು ಮನಗಂಡವರು. ಭೂತಾನ್ ಗೆ ತನ್ನದೇ ಪ್ರಪಂಚ. ಯಾರ ಹಂಗೂ ಅವರಿಗಿಲ್ಲ. ಉಳಿದ ಪ್ರಪಂಚದ ಅಗತ್ಯವೂ ಅವರಿಗಿಲ್ಲ. ಆದರೆ ಪ್ರಪಂಚಕ್ಕೆಲ್ಲಾ ಭೂತಾನ್ ಮತ್ತು ಅಲ್ಲಿನವರ ಮನಸ್ಥಿತಿಯ ಅಗತ್ಯವಿದೆ ಎಂದು ಲೇಖಕರು ತಮ್ಮ ಅನುಭವವಾಗಿ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ.
......ಭೂತಾನ್ ನಲ್ಲಿ ಮಕ್ಕಳು ಸಿಕ್ಕಾಗೆಲ್ಲಾ ನನ್ನ ಜೇಬಲ್ಲಿಟ್ಟುಕೊಂಡಿದ್ದ ಚಾಕೋಲೇಟ್ ಗಳನ್ನು ಕೊಡುತ್ತಿದ್ದೆ. ಎರಡೂ ಕೈಗಳನ್ನು ಜೋಡಿಸಿಕೊಂಡು ಪ್ರೀತಿಭಾವದಿಂದ ನಾವು ಕೊಡುವ ಚಾಕೋಲೇಟ್ ಅಥವಾ ತಿಂಡಿಯನ್ನು ಅವರು ಪಡೆಯುವ ರೀತಿ ಕಂಡು ಸಂಕೋಚವಾಗುತ್ತಿತ್ತು. ಅವರು ನಮ್ಮಿಂದ ತಿಂಡಿಯನ್ನಲ್ಲ ಪ್ರೀತಿಯನ್ನು ಪಡೆಯುವಂತೆ ಭಾಸವಾಗುತ್ತಿತ್ತು. ನಾನು ಕೊಟ್ಟಿದ್ದು ದೊಡ್ಡದಲ್ಲ, ಅವರು ಸ್ವೀಕರಿಸಿದ್ದು ದೊಡ್ಡದು. ಅವರು ಸ್ವೀಕರಿಸಿದ ನನ್ನನ್ನು ಸಣ್ಣವನ್ನಾಗಿಸಿತ್ತು. ತೆಗೆದುಕೊಳ್ಳುವವರು ಅಷ್ಟು ಪ್ರೀತಿಯಿಂದ ಪಡೆದರೆ, ಕೊಡುವವರು ಮತ್ತಷ್ಟು ಪ್ರೀತಿಯಿಂದ ಕೊಡಬೇಕೆಂಬ ಪಾಠವನ್ನು ಅವರು ಕಲಿಸಿದರು...
©2024 Book Brahma Private Limited.