ಲೇಖಕಿ ಗೀರ್ವಾಣಿ ಅವರು ಬರೆದ ಪ್ರವಾಸ ಕಥನ-ಅಂಕೋರ್ ವಾಟ್. ಕಾಂಬೋಡಿಯಾದ ಉತ್ತರ-ಪಶ್ಚಿಮ ಭಾಗದ ಪ್ರಸಿದ್ಧ ಪ್ರವಾಸಿ ತಾಣ-ಅಂಕೋರ್ ವಾಟ್. ಬೌದ್ಧಸ್ತೂಪಗಳು, ದೇವಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದೇವಾಲಯಗಳ ನಾಡು ಎಂದೇ ಈ ತಾಣ ಪ್ರಖ್ಯಾತಿ ಪಡೆದಿದೆ. ಯುನೆಸ್ಕೋ ಸಂಸ್ಥೆಯು ಈ ತಾಣವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದೆ. ಆದರೆ, ಈ ತಾಣವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ, ಅನುಭವಿಸಿದ ಲೇಖಕರು ಈ ತಾಣವನ್ನು ‘ಭಗವಂತನಿಲ್ಲದ ಊರು’ ಎಂದೇ ಕೃತಿಗೆ ಉಪಶೀರ್ಷಿಕೆ ನೀಡುವ ಮೂಲಕ ಕೃತಿಯ ಓದಿಗೆ ಮತ್ತಷ್ಟು ಪ್ರೇರಣೆ ನೀಡಿದ್ದಾರೆ. ನೆಲ, ಇತಿಹಾಸ, ಸಂಸ್ಕೃತಿಯ ವಿಶೇಷತೆಗಳನ್ನು ದಾಖಲಿಸಿದ್ದಾರೆ.
ಪುಸ್ತಕದ ಹೆಸರು : ಆಂಕೋರ್ ವಾಟ್
ಭಗವಂತ ನಿಲ್ಲದ ಊರು!
ಲೇಖಕರು: ಗೀರ್ವಾಣಿ
ವಿಭಾಗ: ಪ್ರವಾಸ ಕಥನ
ಪ್ರಕಾಶಕರು: ಡೆಡ್ಲೈನ್ ಕ್ರಿಯೇಷನ್ಸ್
ಬೆಲೆ :120 ರೂ.
ದೇಶ ಸುತ್ತುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ.ಕೆಲವರಿಗೆ ಅವಕಾಶ ಸಿಗುತ್ತದೆ ಆದರೆ ಅವರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಿಲ್ಲ.ಅಂದರೆ ತಾವು ಹೋದ ಸ್ಥಳವನ್ನು ಕೇವಲ ಪ್ರವಾಸಿತಾಣವನ್ನಾಗಿ ಅಷ್ಟೇ ನೋಡದೆ ಅಲ್ಲಿಯ ನೆಲೆದ ವಿಶೇಷತೆ, ಇತಿಹಾಸ, ಭೌಗೋಳಿಕ ವಿಶೇಷತೆ ಇವೆಲ್ಲವನ್ನೂ ತಿಳಿದುಕೊಳ್ಳುವುದೂ ಮುಖ್ಯ. ಕೆಲವರು ತಾವು ಹೋದಲ್ಲಿನ ವಿಶೇಷತೆಗಳನ್ನು, ತಮ್ಮ ಅನುಭವವನ್ನು ಫೋಟೋಗಳ ಮುಖಾಂತರ ಸೆರೆಹಿಡಿಯುತ್ತಾರೆ. ಇನ್ನು ಕೆಲವರು ತಮ್ಮ ಅನುಭವಗಳನ್ನು , ಪ್ರವಾಸ ಕಥನವನ್ನು ಪುಸ್ತಕದ ರೂಪದಲ್ಲಿ ಬರೆಯುವ ಮೂಲಕ ಇತರರಿಗೂ ಹಂಚುತ್ತಾರೆ. ಹೀಗೆ ಉತ್ತಮ ಪ್ರವಾಸ ಕಥನಗಳನ್ನು ಓದುವುದರಿಂದ ಸಾಕಷ್ಟು ವಿಷಯಗಳ ಜ್ಞಾನವೂ ದೊರೆಯುತ್ತದೆ, ಖರ್ಚುಮಾಡದೆ ದೇಶ ಸುತ್ತಿದ ಭಾಗ್ಯವೂ ದೊರೆಯುತ್ತದೆ.
ಗೀರ್ವಾಣಿ ಯವರು ಬರೆದ ಈ ಪ್ರವಾಸ ಕಥನ ಓದುತ್ತಾ ಹೋದಂತೆ ಕಾಂಬೋಡಿಯಾದ ಬಗ್ಗೆ, ಅದನ್ನಾಳಿದ ಅರಸರ ಬಗ್ಗೆ ,ಅಲ್ಲಿಯ ಶಿಲ್ಪಕಲೆಯ ಬಗ್ಗೆ ಹಾಗೆಯೇ ಈಗಿನ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ತಿಳಿದುಬರುತ್ತದೆ. ತಾವು ನೋಡಿದ್ದನ್ನು ಅಷ್ಟೇ ಅಲ್ಲದೆ ಅಲ್ಲಿಯ ರಾಜಮನೆತನದ ಬಗ್ಗೆ ಇತಿಹಾಸವನ್ನು ಶೋಧಿಸಿ ಬರೆದಿರುವ ಈ ಪುಸ್ತಕ ನಮಗೆ ಕಾಂಬೋಡಿಯಾದ ಬಗ್ಗೆ ಅದ್ಭುತವಾದ ಮಾಹಿತಿಯನ್ನು ಒದಗಿಸುತ್ತದೆ.
ಮಲೆನಾಡ ಹೆಂಚಿನ ಮನೆಯಂತಿತ್ತು ಆ ವಿಮಾನ ನಿಲ್ದಾಣ!! ಎಂದು ಓದಲು ಆರಂಭಿಸುತ್ತಿದ್ದಂತೆ ನನ್ನ ಮನಸ್ಸು ಆ ವಿಮಾನನಿಲ್ದಾಣವನ್ನು ಕಲ್ಪಿಸಲು ಪ್ರಾರಂಭಿಸತೊಡಗಿತ್ತು. ಹೌದು, ವಿದೇಶವೆಂದರೆ ನಮ್ಮಲ್ಲಿ ಮೂಡುವ ಕಲ್ಪನೆಯೇ ಬೇರೆ. ಝಗಮಗಿಸುವ ಬೆಳಕು ಸ್ವಚ್ಛವಾಗಿ ಹೊಳೆಯುವ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳು, ದೊಡ್ಡ ವಿಮಾನ ನಿಲ್ದಾಣ ಹೀಗೆ ಕಲ್ಪಿಸಿಕೊಂಡಿದ್ದವಳಿಗೆ ಕಾಂಬೋಡಿಯಾದ ಬಗ್ಗೆ ಓದುವವರೆಗೂ ಹೀಗೂ ಒಂದು ದೇಶ ಇರಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಕಾಂಬೋಡಿಯಾದ ಬಗ್ಗೆ ಅಲ್ಲಿ- ಇಲ್ಲಿ ಓದಿದ್ದ ನನಗೆ ಕಾಂಬೋಡಿಯಾ ಎಂದರೆ ನಮ್ಮ ಬೇಲೂರು ಹಳೇಬೀಡಿನಂತೆಯೇ ಶಿಲ್ಪಕಲೆಗೆ ಪ್ರಸಿದ್ಧವಾಗಿದೆ ಎಂದಷ್ಟೇ ತಿಳಿದಿತ್ತು.
ಆದರೆ, ಈ ಪುಸ್ತಕ ಓದುತ್ತಿದ್ದಂತೆ ಕಾಂಬೋಡಿಯಾದ ಬಗ್ಗೆ ನನ್ನ ಕಲ್ಪನೆಯೇ ಬದಲಾಯಿತು .ನಮ್ಮ ದೇಶದ ಬೇಲೂರು-ಹಳೇಬೀಡು ,ಕಂಚಿ ,ಮಧುರೈ ಮೊದಲಾದ ದೇವಾಲಯಗಳ ವಾಸ್ತು, ಖಗೋಳ, ಶಿಲ್ಪಶಾಸ್ತ್ರ ಗಳನ್ನು ಪಡೆದುಕೊಂಡು ಖ್ಮೇರ್ ಜನರು ಅದಕ್ಕಿಂತಲೂ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿದ್ದಾರೆ. ಆದರೆ, ಈ ದೇವಾಲಯಗಳು ಇಂದು ಪಾಚಿಗಟ್ಟಿ ಬಿರುಕು ಬಿಟ್ಟು ಇಲಿ ಬಾವಲಿಗಳ ವಾಸಸ್ಥಾನವಾಗಿದೆ ಎಂದು ಓದಿದಾಗ ಬೇಸರವಾಗುತ್ತದೆ. ನಮ್ಮ ಉತ್ತರ ಕನ್ನಡದ ಸಹಸ್ರಲಿಂಗದಂತೆ ಮಹೇಂದ್ರ ಪರ್ವತ (ಕುಲೇನ್ ಮೌಂಟನ್ ) ದಲ್ಲಿಯೂ ಸಹಸ್ರಲಿಂಗವಿದೆ ಎಂದು ಓದಿದಾಗ ಆಶ್ಚರ್ಯವಾಗುತ್ತದೆ.
ಆಂಕೋರ್ ವಾಟ್ ಎಂದರೆ ಖ್ಮೇರ್ ಭಾಷೆಯಲ್ಲಿ ದೇವಾಲಯಗಳ ನಗರ ಎಂದರ್ಥ. ಇಲ್ಲಿರುವ ವಿಷ್ಣು ದೇವಾಲಯವು ಜಗತ್ತಿನ ಅತಿದೊಡ್ಡ ವಿಷ್ಣು ದೇವಾಲಯವಾಗಿದೆ. ಇಲ್ಲಿಯ ಮುಖ್ಯ ಗೋಪುರವು ನೆಲಮಟ್ಟದಿಂದ ಸುಮಾರು 699 ಅಡಿಗಳಷ್ಟು ಎತ್ತರವಾಗಿದ್ದು ಈ ದೇವಾಲಯವನ್ನು ಕಟ್ಟಲು ಸುಮಾರು 30 ವರ್ಷಗಳ ಕಾಲ ಹಿಡಿಯಿತಂತೆ. ಇಡೀ ಆಂಕೋರ್ ವಾಟ್ ಪರಿಸರವನ್ನು ಕೃತಕವಾಗಿ ನಿರ್ಮಿಸಿದ್ದು, ಹೈಡ್ರಾಲಿಕ್ ತಂತ್ರಜ್ಞಾನವನ್ನು ಉಪಯೋಗಿಸಿ ದೇವಸ್ಥಾನದ ಸುತ್ತಲೂ ಕಾಲುವೆ ತೋಡಿ, ದೂರದ ಬೆಟ್ಟದಿಂದ ನೀರು ಹರಿಸಿ, ಶತಮಾನಗಳ ಕಾಲ ಗಟ್ಟಿಯಾಗಿ ನಿಲ್ಲುವಂತೆ ಕಟ್ಟಿರುವ ಈ ದೇವಾಲಯದ ಬಗ್ಗೆ ವಿವರವಾಗಿ ಓದುತ್ತಿದ್ದಂತೆ ನಮಗೂ ಅದನ್ನು ನೋಡುವ ಬಯಕೆ ಉಂಟಾಗುತ್ತದೆ. ಕಾಂಬೋಡಿಯ ದೇಶಕ್ಕೆ ಹೋಗಿ ಈ ದೇವಾಲಯಗಳನ್ನು ಪ್ರತ್ಯಕ್ಷವಾಗಿ ನೋಡುವ ತುಡಿತ ಉಂಟಾಗುತ್ತದೆ.
ಬಲಿಷ್ಠ ಖ್ಮೇರ್ ಸಾಮ್ರಾಜ್ಯದ ದೊರೆಗಳು ಇಂತಹ ದೂರದೃಷ್ಟಿಯೊಂದಿಗೆ , ಉತ್ಕೃಷ್ಟವಾದ ವಾಸ್ತುಶಾಸ್ತ್ರ ಇರಿಸಿಕೊಂಡು ಬೃಹತ್ ದೇವಾಲಯಗಳನ್ನು ಕಟ್ಟಿದ್ದಾರೆ .ಖ್ಮೇರ್ ಸಾಮ್ರಾಜ್ಯದ ಪತನವು ಬಹಳ ಕುತೂಹಲಕಾರಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷಗಳ ನಂತರ ಫ್ರೆಂಚರಿಂದ ಸ್ವಾತಂತ್ರ್ಯ ಪಡೆದ ಕಾಂಬೋಡಿಯಾ, ಇಂದಿಗೂ ಬಡ ರಾಷ್ಟ್ರವಾಗಿರಲು ಸ್ವಹಿತಾಸಕ್ತಿಯ ಗುಂಪುಗಳು ತಮ್ಮ ದೇಶದ ಅಭಿಮಾನವನ್ನು ಬಿಟ್ಟು ವಿದೇಶಿಯರೊಂದಿಗೆ ಕೈಜೋಡಿಸಿ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದಾರೆಂದು ಓದಿದಾಗ ವಿಷಾದವಾಗುತ್ತದೆ. ನಮ್ಮ ದೇಶದ ಬಗ್ಗೆ ಹೆಮ್ಮೆಯೂ ಮೂಡುತ್ತದೆ.
ಆಂಕೋರ್ ವಾಟ್, ಆಂಕೋರ ಥಾಮ್, ಥ ಫ್ರಂ, ಬೆಂಗ್ ಮೆಲಿಯಾ ಮುಂತಾದ ಕಡೆ ಇರುವ ವಿವಿಧ ದೇವಾಲಯಗಳು, ಅವುಗಳನ್ನು ಕಟ್ಟಿದ ತಂತ್ರಜ್ಞಾನ, ಅವುಗಳ ಇತಿಹಾಸ, ಖ್ಮೇರ್ ಸಾಮ್ರಾಜ್ಯದೊಂದಿಗೆ ಭಾರತೀಯರ ಸಂಬಂಧ ಇವುಗಳ ಬಗ್ಗೆ ವಿವರವಾಗಿ ಈ ಪುಸ್ತಕ ತಿಳಿಸುತ್ತದೆ.
-ಅಶ್ವಿನಿ ಸುನಿಲ್
ಇಲ್ಲಿ ಕ್ಲಿಕ್ಕಿಸಿ: , ಅಂಕೋರ್ ವಾಟ್-ಗೀರ್ವಾಣಿ
©2024 Book Brahma Private Limited.