ಪ್ರೊ. ಕೆ. ಮುಕುಂದನ್ ಅವರ ಪ್ರವಾಸ ಕಥನ ‘ಅಮೆರಿಕ ಅಮೆರಿಕ ಅಮೆರಿಕ’. ಮುಕುಂದನ್ ಅವರು ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದಾರೆ. ಅಮೆರಿಕ ಜೀವನವನ್ನು ವಸ್ತುನಿಷ್ಠ ದೃಷ್ಟಿಯಿಂದ ನೋಡಿ, ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಭಾರತೀಯ ಮತ್ತು ಅಮೆರಿಕ ದೇಶದ ಜೀವನ ಕ್ರಮಗಳಲ್ಲಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಿಮರ್ಶಕ ದೃಷ್ಟಿಕೋನವನ್ನು ಬರವಣಿಗೆಯಲ್ಲಿ ತೋರಿದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಚಿಕಿತ್ಸಕ ದೃಷ್ಟಿಯನ್ನು ತೋರಿದ್ದಾರೆ.
ಅಮೆರಿಕಾವನ್ನು ಎಷ್ಟು ಸುತ್ತಿದ್ದರೂ ಭಾರತವೇ ಅವರಿಗೆ ಅಚ್ಚುಮೆಚ್ಚು. ಅವರು ವಿದೇಶದಲ್ಲಿದ್ದಾಗಲೂ ಅವರ ಮನಸ್ಸು ಸದಾ ಸ್ವದೇಶಿ. ಹಾಗೆಂದ ಮಾತ್ರಕ್ಕೆ, ಹಲವು ಕ್ಷೇತ್ರಗಳಲ್ಲಿ ಅಮೆರಿಕದ ಸಾಧನೆಗಳನ್ನು ಅವರು ಕಡೆಗಣಿಸಿಲ್ಲ. ಅಮೆರಿಕದಿಂದ ನಾವು ಕಲಿಯಬೇಕಾದ್ದನ್ನು ಸೂಚ್ಯವಾಗಿ ಹೇಳಿದರೆ ಕೆಲವೊಂದು ಸಾಂಸ್ಕೃತಿಕ ಸಂದರ್ಭಗಳಲ್ಲಿ ಭಾರತವೇ ಅಮೆರಿಕಕ್ಕೆ ನೀಡಬಹುದಾದ ಅಂಶಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಸಂಸ್ಕೃತಿ ಮತ್ತು ನಿತ್ಯ ಜೀವನದ ಜೀವಂತಿಕೆಯ ವಿಚಾರ ಬಂದಾಗ ಅವರ ಮನಸ್ಸು ಸಹಜವಾಗಿ 'ಮೇರಾ ಭಾರತ್ ಮಹಾನ್” ಎಂಬ ಧೋರಣೆ ತಾಳುತ್ತದೆ. ಅವರ ಬರವಣಿಗೆಯಲ್ಲಿ ಲವಲವಿಕೆ ಇದೆ. ಸರಳವಾಗಿ ಕಾಣುವ ಸಾಮಾನ್ಯ ಸಂಗತಿಗಳೂ ಕೂಡ ಅವರಿಗೆ ವಿಶೇಷವಾಗಿ ಕಾಣುತ್ತವೆ.
©2024 Book Brahma Private Limited.